Okinawa Electric Scooter sales ಇವಿ ಖರೀದಿಗೆ ಮುಗಿಬಿದ್ದ ಜನ, 2021ರಲ್ಲಿ ದಾಖಲೆ ಬರೆದ ಒಕಿನಾವಾ!

By Suvarna News  |  First Published Dec 21, 2021, 8:37 PM IST
  • ಕೈಗೆಟುಕುವ ದರದಿಂದ ಸಾಮಾನ್ಯ ಜನರ ಕೈಗೆ ತಲುಪಿತು ಸ್ಕೂಟರ್
  • 2021ರಲ್ಲಿ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಸಾಧನೆ
  • ಪ್ರಸಕ್ತ ವರ್ಷ 1 ಲಕ್ಷ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ನವದೆಹಲಿ(ಡಿ.21):  ದೇಶದಲ್ಲಿ ಎಲೆಕ್ಟ್ರಿಕ್ ವಾಹನ(Electric Vehicle) ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ. ಭಾರತ ಇದೀಗ ಎಲೆಕ್ಟ್ರಿಕ್ ವಾಹನದ ನಾಯಕನಾಗಿ ಹೆಜ್ಜೆ ಹಾಕುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್(Electric Scooter) ವಿಭಾಗದಲ್ಲಿ ಹೊಸ ಹೊಸ ವಾಹನ ಬಿಡುಗಡೆಯಾಗುತ್ತಿದ್ದು, ಕೈಗೆಟುಕುವ ದರ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳಿಂದ ಒಂದಕ್ಕೊಂದು ಭಿನ್ನವಾಗಿದೆ.  ಇದರ ಬೆನ್ನಲ್ಲೇ ಈಗಾಗಲೇ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ದಾಖಲೆ ಬರೆಯುತ್ತಿದೆ. ಇದೀಗ ಒಕಿನಾವಾ ಎಲೆಕ್ಟ್ರಿಕ್(Okinawa) ಸ್ಕೂಟರ್ 2021ರಲ್ಲಿ ಹೊಸ ದಾಖಲೆ ಬರೆದಿದೆ. ಬರೋಬ್ಬರಿ 1 ಲಕ್ಷ ಸ್ಕೂಟರ್ ಮಾರಾಟ(Sales) ಮಾಡಿ ಹೊಸ ಇತಿಹಾಸ ರಚಿಸಿದೆ.

ಒಕಿನವಾದ ಮತ್ತೊಂದು ವಿಶೇಷತೆ ಅಂದರೆ ಡೀಲರ್‌ಶಿಪ್(dealerships) ಮತ್ತಷ್ಟು ಹೆಚ್ಚಿಸಿದೆ. ಭಾರತದ ಗ್ರಾಮ, ಹಳ್ಳಿಗಳಲ್ಲಿ ಒಕಿನಾವಾ ಸ್ಕೂಟರ್ ಲಭ್ಯವಿದೆ. ಚಾರ್ಜಿಂಗ್, ಸರ್ವೀಸ್ ಸೇರಿದಂತೆ ಎಲ್ಲಾ ಅನೂಕೂಲತೆಗಳು ಜನರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಒಕಿನಾವಾ ಹೆಚ್ಚು ಮಾರಾಟ ಕಾಣುತ್ತಿದೆ. ಈಗಾಗಲೇ ಓಲಾ, ಬೌನ್ಸ್ ಸೇರಿದಂತೆ ಗರಿಷ್ಠ ಮೈಲೇಜ್ ನೀಡಬಲ್ಲ ಸ್ಕೂಟರ್ ಬಿಡುಗಡೆಯಾಗಿದೆ. ಆದರೆ ಈ ಸ್ಕೂಟರ್ ಇನ್ನೂ ಗ್ರಾಮ, ಹಳ್ಳಿ ಪ್ರವೇಶಿಸಿಲ್ಲ. ಆದರೆ ಒಕಿನಾವಾ ಹಳ್ಳಿಯತ್ತ ಮುಖಮಾಡಿದೆ. ಹೀಗಾಗಿ ಇದು ಜನಸಾಮಾನ್ಯರ ಸ್ಕೂಟರ್ ಅನ್ನೋ ಪಟ್ಟದತ್ತ ದಾಪುಗಾಲಿಡುತ್ತಿದೆ.

Tap to resize

Latest Videos

undefined

ನೌಕರರಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ ನೀಡಿದ ಕಂಪನಿ!

ದೇಶಾದ್ಯಂತ 400ಕ್ಕೂ ಹೆಚ್ಚು ಡೀಲರ್‌ಶಿಪ್ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಒಕಿನಾವ ಹೊಸ ಹೊಸ ವೇರಿಯೆಂಟ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸ್ಕೂಟರ್ ಲಭ್ಯವಿದೆ. ಜೊತೆಗೆ ಕೈಗೆಟುಕುವ ದರ ಕೂಡ ಒಕಿನಾವಾ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ. 

ಒಕಿನಾವಾ ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 500 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಮೊದಲ ಹಂತದಲ್ಲಿ 250 ಕೋಟಿ ರೂಪಾಯಿ ಹೂಡಿಕೆ ಮಾಡಲು ಸಜ್ಜಾಗಿದೆ.

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲೂ 17,800 ರೂ.ವರೆಗೆ ಕಡಿತ!

ಸದ್ಯ ಶೇಕಡಾ 60 ರಿಂದ 70ರಷ್ಟು ಸ್ಕೂಟರ್ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಕೇವಲ ಬ್ಯಾಟರಿ ಆಮದು ಮಾಡಿಕೊಂಡು ಜೋಡಣೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಶೇಕಡಾ 100 ರಷ್ಟು ಭಾರತದಲ್ಲಿ ಒಕಿನಾವಾ ಸ್ಕೂಟರ್ ಉತ್ಪಾದನಗೆ ಮುಂದಾಗಿದೆ. ಇದರಿಂದ ಸಂಪೂರ್ಣವಾಗಿ ಸ್ಥಳೀಯವಾಗಿ ತಯಾರಿಸಿದ ಹಾಗೂ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಸ್ಕೂಟರ್ ವಿತರಿಸಲು ಸಾಧ್ಯವಾಗಲಿದೆ ಎಂದು ಒಕಿನಾವಾ ಹೇಳಿದೆ.

ಒಕಿನಾವಾ ಭಾರತದಲ್ಲಿ 5ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಒಕಿನಾವಾ ಪ್ರೈಸ್ ಪ್ರೋ ಸ್ಕೂಟರ್ ಬೆಲೆ 79,845 ರೂಪಾಯಿ, ಒಕಿನಾವಾ R30 ಎಲೆಕ್ಟ್ ಸ್ಕೂಟರ್ ಬೆಲೆ 61,998 ರೂಪಾಯಿ, ಒಕಿನಾವಾ ಐಪ್ರೈಸ್ ಪ್ಲಸ್ ಸ್ಕೂಟರ್ ಬೆಲೆ 1.05 ಲಕ್ಷ ರೂಪಾಯಿ, ಒಕಿನವಾ ರಿಡ್ಡ್ ಸ್ಕೂಟರ್ ಬೆಲೆ 64,797 ರೂಪಾಯಿಯಿಂದ 70,935 ರೂಪಾಯಿ ಇನ್ನು ಒಕಿನವಾ ಡ್ಯುಯೆಲ್ ಸ್ಕೂಟರ್ ಬೆಲೆ 61,998 ರೂಪಾಯಿಯಿಂದ 82,995 ರೂಪಾಯಿ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಆಗಿವೆ.

ಒಕಿನಾವಾ R30 ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್: ಬುಕಿಂಗ್ ಬೆಲೆ 2 ಸಾವಿರ ರೂ!

ಮಾರಾಟದ ಸಾಧನೆಗೆ ಒಕಿನಾವಾ ಆಟೋಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶ ಹಾಗೂ ಸಂಸ್ಥಾಪಕ ಜೀತೆಂದರ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಗ್ರಾಹಕರ ಬೇಡಿಕೆ, ಅಗತ್ಯಕ್ಕೆ ತಕ್ಕಂತೆ ಸ್ಕೂಟರ್ ಒದಗಿಸಲು ಪ್ರಯತ್ನಿಸಿದ್ದೇವೆ. ನಮ್ಮ ಅತ್ಯುತ್ತಮ ಸ್ಕೂಟರ್‌ ಹಾಗೂ ರೈಡ್‌ನಿಂದ ಜನರು ಹೆಚ್ಚಾಗಿ ಸ್ಕೂಟರ್ ಇಷ್ಟಪಟ್ಟಿದ್ದಾರೆ. ಯುವಜನಾಂಗ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಒಕಿನಾವಾ ಸ್ಕೂಟರ್ ಸೂಕ್ತವಾಗಿದೆ ಎಂದು ಜಿತೇಂದರ್ ಶರ್ಮಾ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ವೇರಿಯೆಂಟ್ ಸ್ಕೂಟರ್ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.
 

click me!