
ಬೆಂಗಳೂರು (ಸೆ.1): ಆನ್‌ಲೈನ್‌ನಲ್ಲಿ ಅತ್ಯಂತ ಸ್ವಾದಿಷ್ಟವಾಗಿ ಕಾಣುವ 'ಪಾವ್ ಭಾಜಿ' ಆರ್ಡರ್ ಮಾಡಿದಾಗ, ಅದರ ಜೊತೆಗೆ 'ಸೇದಿದ ಬಿಡಿ' ಕೂಡ ಉಚಿತವಾಗಿ ಸಿಕ್ಕಿದರೆ ಹೇಗಿರುತ್ತದೆ? ಕೇಳುವುದಕ್ಕೇ ಕಹಿ ಎನಿಸುವ ಇಂತಹದ್ದೊಂದು ವಿಲಕ್ಷಣ ಹಾಗೂ ಅಸಹ್ಯಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ನಿವಾಸಿ ಪ್ರಿಯಮ್ ತಹಾಬಿಲ್ದಾರ್ ಎಂಬವರು ಪ್ರಸಿದ್ಧ ಫುಡ್ ಡೆಲಿವರಿ ಆ್ಯಪ್ Zomato ಮೂಲಕ ಪಾವ್ ಭಾಜಿ ಆರ್ಡರ್ ಮಾಡಿದ್ದರು. ಡೆಲಿವರಿಯಾದ ಆಹಾರದ ಪಾರ್ಸೆಲ್ ತೆರೆದು ನೋಡಿದಾಗ ಒಳಗಿದ್ದ ದೃಶ್ಯ ಕಂಡು ಅವರು ತಬ್ಬಿಬ್ಬಾಗಿದ್ದಾರೆ. ತಟ್ಟೆಯಲ್ಲಿದ್ದ ಹೆಚ್ಚಿದ ಈರುಳ್ಳಿಯ ಮೇಲೆ ಪೂರ್ಣವಾಗಿ ಸೇದಿದ್ದ ಬಿಡಿಯೊಂದನ್ನು ಇಡಲಾಗಿತ್ತು!
ಈ ಅಸಹ್ಯಕರ ಅನುಭವವನ್ನು ಪ್ರಿಯಮ್ ತಹಾಬಿಲ್ದಾರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ. Zomato ಮೂಲಕ ಪಾವ್ ಭಾಜಿ ಆರ್ಡರ್ ಮಾಡಿದ್ದೆ, ನನಗೆ ಉಚಿತವಾಗಿ ಬಿಡಿ ಸಿಕ್ಕಿದೆ. ಅದೂ ಸಂಪೂರ್ಣವಾಗಿ ಸೇದಿದ ಎಸೆದ ಬಿಡಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ನಿರೀಕ್ಷಿಸಿದ ಆಫರ್ ಇದಾಗಿರಲಿಲ್ಲ! Zomato ಕೇರ್ ಗಮನಿಸಿ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಪ್ರಸ್ತುತ ಭಾರಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ Zomato ಸಂಸ್ಥೆಯು ಪ್ರಿಯಮ್ ಅವರನ್ನು ಸಂಪರ್ಕಿಸಿದೆ. ಆದರೆ ಈ ಗಂಭೀರ ಲೋಪಕ್ಕೆ ಪರಿಹಾರವಾಗಿ ಮುಂದಿನ ಆರ್ಡರ್‌ಗೆ ಬಳಸಲು ಕೇವಲ ₹100 ರ ಕೊಡುಗೆ ಕೂಪನ್ (Coupon) ನೀಡಿರುವುದು ಗ್ರಾಹಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.'Zomato ಆಹಾರ ತಯಾರಿಸುವುದಿಲ್ಲ ಅಥವಾ ಪ್ಯಾಕ್ ಮಾಡುವುದಿಲ್ಲ, ಅವರು ಕೇವಲ ಡೆಲಿವರಿ ಮಾಡುತ್ತಾರೆ. ತಪ್ಪಿರುವುದು ಹೋಟೆಲ್‌ನವರದ್ದು. ಹೀಗಾಗಿ ಹೋಟೆಲ್ ಹೆಸರು ಏಕೆ ಉಲ್ಲೇಖಿಸಿಲ್ಲ?' ಎಂದು ಒಬ್ಬ ಯೂಸರ್ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ, "ಅವರು ಹೆಚ್ಚುವರಿಯಾಗಿ 'ಸ್ಮೋಕ್ಡ್ ಫ್ಲೇವರ್' (Smoked Flavor) ಸೇರಿಸಿದ್ದಾರೆ ಅಷ್ಟೇ!", "ಇಂದಿನ ಪೀಳಿಗೆಗೆ ಪ್ರತಿಯೊಂದರಲ್ಲೂ ಧನಾತ್ಮಕ ಅಂಶ ನೋಡುವುದೇ ಗೊತ್ತಿಲ್ಲ!", "ಹೊರಗಿನ ಆಹಾರ ಬಿಟ್ಟು ಮನೆಯಲ್ಲೇ ಅಡುಗೆ ಮಾಡಿ ತಿನ್ನುವ ಕಾಲ ಬಂದಿದೆ" ಎಂದು ಕಮೆಂಟ್ ಮಾಡಿದ್ದಾರೆ.