
ಬೆಂಗಳೂರು (ಆ.21): ಕೆಲವು ಹೆಸರುಗಳು ನೆನಪಿನಾಳದಲ್ಲಿ ಎಂದಿಗೂ ಮಾಸದ ಅಪರೂಪದ ಅಡ್ಡಹೆಸರುಗಳಂತೆ ಉಳಿಬಿಡುತ್ತವೆ. ಮುಂಬೈ ಇಂದಿಗೂ ಹಲವರಿಗೆ 'ಬಾಂಬೆ', ಕೊಲ್ಕತ್ತಾ ಇಂದಿಗೂ 'ಕಲ್ಕತ್ತಾ'. ಅಂತೆಯೇ, ಸಿಲಿಕಾನ್ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಪ್ರಮುಖ ಕೇಂದ್ರಬಿಂದುವಾದ 'ಕೆಂಪೇಗೌಡ ಬಸ್ ನಿಲ್ದಾಣ' (KBS) ಇಂದಿಗೂ 'ಮೆಜೆಸ್ಟಿಕ್' ಎಂದೇ ಜನಪ್ರಿಯ. ಬೆಂಗಳೂರಿನ ನಿರ್ಮಾತೃ ಹಾಗೂ 16ನೇ ಶತಮಾನದ ಪಾಳೇಗಾರ ಕೆಂಪೇಗೌಡರ ಹೆಸರನ್ನು ಅಧಿಕೃತವಾಗಿ ಇಡಲಾಗಿದ್ದರೂ, ಸಾರ್ವಜನಿಕರು ಮಾತ್ರ "ಮೆಜೆಸ್ಟಿಕ್‌ನಲ್ಲಿ ಸಿಗೋಣ", "ಮೆಜೆಸ್ಟಿಕ್‌ನಲ್ಲಿ ಬಸ್ ಚೇಂಜ್ ಮಾಡ್ಬೇಕು", "ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್‌ನಲ್ಲಿ ರಶ್ ಇರುತ್ತೆ" ಎಂದೇ ಮಾತನಾಡುವುದು ರೂಢಿ.
ಇಷ್ಟಕ್ಕೂ ಕೆಂಪೇಗೌಡ ಬಸ್ ನಿಲ್ದಾಣಕ್ಕೆ 'ಮೆಜೆಸ್ಟಿಕ್' ಎಂಬ ಹೆಸರು ಬಂದಿದ್ದಾದರೂ ಹೇಗೆ? ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಹಿಂದೊಮ್ಮೆ ಗಾಂಧಿನಗರ, ಸುಭಾಷ್ ನಗರ ಮತ್ತು ಕೆ.ಜಿ. ರಸ್ತೆಗಳು ಬೆಂಗಳೂರಿನ ಪ್ರಮುಖ ಮನರಂಜನಾ ಕೇಂದ್ರಗಳಾಗಿದ್ದವು. ಭಾರತದಲ್ಲೇ ಅತ್ಯಂತ ಹೆಚ್ಚು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿದ್ದ ಪ್ರದೇಶ ಎಂಬ ಹೆಗ್ಗಳಿಕೆ ಇದಕ್ಕಿತ್ತು. ಇತಿಹಾಸ ಪ್ರಿಯ ಧರ್ಮೇಂದ್ರ ಕುಮಾರ್ ಅವರ ಪ್ರಕಾರ, ಆ ಕಾಲದಲ್ಲಿ ಈ ಭಾಗಕ್ಕೆ ಆಗಮಿಸುತ್ತಿದ್ದ ಬಸ್‌ಗಳು ಬಸ್ ನಿಲ್ದಾಣವನ್ನು ತಲುಪುವ ಮೊದಲು ಪ್ರಸಿದ್ಧ 'ಮೆಜೆಸ್ಟಿಕ್ ಟಾಕೀಸ್' (Majestic Theatre) ಮುಂದೆ ನಿಲ್ಲುತ್ತಿದ್ದವು. ಈ ವೇಳೆ ಬಸ್ ಕಂಡಕ್ಟರ್‌ಗಳು "ಮೆಜೆಸ್ಟಿಕ್! ಮೆಜೆಸ್ಟಿಕ್!" ಎಂದು ಕೂಗುತ್ತಿದ್ದರು. ದಿನಕಳೆದಂತೆ ಅದೇ ಕೂಗು ಈ ಇಡೀ ಪ್ರದೇಶಕ್ಕೇ 'ಮೆಜೆಸ್ಟಿಕ್' ಎಂಬ ಹೆಸರನ್ನು ಶಾಶ್ವತವಾಗಿ ತಂದುಕೊಟ್ಟಿತು.
ಇತಿಹಾಸತಜ್ಞ ಸುರೇಶ್ ಮೂನಾ ಪ್ರಕಾರ, ಈ ಥಿಯೇಟರ್ 1920ರ ದಶಕದಲ್ಲಿ ನಿರ್ಮಾಣಗೊಂಡಿತ್ತು. ಚಲನಚಿತ್ರ ವಿಮರ್ಶಕ ಕೆ. ಪುಟ್ಟಸ್ವಾಮಿ ಅವರ ಪ್ರಕಾರ, ವಿಜ್ಞಾನಿ ಸಿ.ವಿ. ರಾಮನ್ ಹಾಗೂ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರಂತಹ ಮಹನೀಯರು ಇಲ್ಲಿ ಸಿನಿಮಾ ವೀಕ್ಷಿಸಿದ್ದರು. ಇನ್ನು 'ಬೆಂಗಳೂರು ಪ್ರಯಾಣ'ದ ಪರಂಪರೆ ಸಂಶೋಧಕ ಶ್ಯಾಮ್ ಕೊಡವರ್ತಿ ಅವರ ಪ್ರಕಾರ, ಮೆಜೆಸ್ಟಿಕ್ ಟಾಕೀಸ್‌ನ ಆರಂಭಿಕ ಹೆಸರು 'ಒಲಿಂಪಿಯಾ ಸಿನಿಮಾ' ಎಂದಾಗಿತ್ತು. ಈ ಥಿಯೇಟರ್ ರಾಜಪ್ರಭುತ್ವದ ಅರಮನೆಯಂತೆ ಭವ್ಯವಾಗಿ ಕಾಣುತ್ತಿತ್ತು ಎಂದು ಸುರೇಶ್ ನೆನಪಿಸಿಕೊಳ್ಳುತ್ತಾರೆ.
ಮೆಜೆಸ್ಟಿಕ್ ಥಿಯೇಟರ್ ಆರಂಭದಲ್ಲಿ ಹೆಚ್ಚಾಗಿ ತೆಲುಗು ಸಿನಿಮಾಗಳನ್ನೇ ಪ್ರದರ್ಶಿಸುತ್ತಿತ್ತಾದರೂ, 1970ರ ದಶಕದಲ್ಲಿ ತೆರೆಕಂಡ ವರನಟ ಡಾ. ರಾಜ್‌ಕುಮಾರ್ ಅಭಿನಯದ 'ಭಲೇ ಜೋಡಿ' ಚಿತ್ರ ಭಾರಿ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಡಾ. ರಾಜ್ ದ್ವಿಪಾತ್ರದಲ್ಲಿದ್ದ ಕಾರಣ, ಥಿಯೇಟರ್ ಹೊರಭಾಗದಲ್ಲಿ ಅವರ ಎರಡು ಬೃಹತ್ ಕಟೌಟ್‌ಗಳನ್ನು ನಿಲ್ಲಿಸಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಪಬ್ಲಿಸಿಟಿಗಾಗಿ ಇಂತಹ ಪ್ರಚಾರ ತಂತ್ರ ಬಳಸಿದ್ದು ಅದೇ ಮೊದಲು ಎಂದು ಪುಟ್ಟಸ್ವಾಮಿ ಸ್ಮರಿಸುತ್ತಾರೆ.
ದಶಕಗಳ ಕಾಲ ಚಿತ್ರಪ್ರೇಮಿಗಳನ್ನು ರಂಜಿಸಿದ್ದ ಮೆಜೆಸ್ಟಿಕ್ ಥಿಯೇಟರ್ ಅನ್ನು 2010ರ ವೇಳೆಗೆ ನೆಲಸಮಗೊಳಿಸಲಾಯಿತು. ನಟ ಪುನೀತ್ ರಾಜ್‌ಕುಮಾರ್ ಅಭಿನಯದ 'ಮಿಲನ' ಈ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡ ಕೊನೆಯ ಚಿತ್ರ. ಇದೀಗ ಆ ಜಾಗ ಕಾನೂನು ಸಂಘರ್ಷಕ್ಕೆ ಸಿಲುಕಿದ್ದು, ಗಿಡಗಂಟಿ ಬೆಳೆದು ಪಾಳುಬಿದ್ದಿದೆ.
ಇನ್ನು ಪ್ರಸ್ತುತ ಬಸ್ ನಿಲ್ದಾಣವಿರುವ ಜಾಗವು ಒಂದಾನೊಂದು ಕಾಲದಲ್ಲಿ ಪ್ರಸಿದ್ಧ 'ಧರ್ಮಾಂಬುಧಿ ಕೆರೆ'ಯಾಗಿತ್ತು! 20ನೇ ಶತಮಾನದ ಆರಂಭದಲ್ಲಿ ಈ ಕೆರೆ ಭಾಗಶಃ ಒಣಗಿಹೋಯಿತು. ಬಳಿಕ ಕೆರೆಯ ಅಂಗಳವು ನಾಟಕಗಳು, ಸರ್ಕಸ್ ಹಾಗೂ ವಸ್ತುಪ್ರದರ್ಶನಗಳನ್ನು ಆಯೋಜಿಸುವ ಮೈದಾನವಾಗಿ ಬದಲಾಯಿತು. 1931ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರು ಇದೇ ಅಂಗಳದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.
ಬಿಕೋ ಎನ್ನುತ್ತಿದ್ದ ಕೆರೆಯ ಅಂಗಳಕ್ಕೆ 'ನೇತಾಜಿ ಸುಭಾಷ್ ಚಂದ್ರ ಬೋಸ್' ಅವರ ನೆನಪಿನಲ್ಲಿ 'ಸುಭಾಷ್ ನಗರ ಮೈದಾನ' ಎಂದು ಹೆಸರಿಡಲಾಯಿತು. 1980ರ ದಶಕದಲ್ಲಿ ಅರ್ಧಚಂದ್ರಾಕಾರದ ನೂತನ ಬಸ್ ನಿಲ್ದಾಣ ನಿರ್ಮಾಣವಾದಾಗ, ಆರಂಭದಲ್ಲಿ ಇದನ್ನು 'ಸುಭಾಷ್ ನಗರ ಬಸ್ ನಿಲ್ದಾಣ' ಎಂದೇ ಕರೆಯಲಾಗುತ್ತಿತ್ತು.
ಇಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ದಿನವೊಂದಕ್ಕೆ ಸುಮಾರು 5,000 ಬಸ್‌ಗಳು ಸಂಚರಿಸುತ್ತವೆ. ಬೆಂಗಳೂರಿನಲ್ಲಿ ಬೆಳೆದ ಪ್ರತಿಯೊಬ್ಬರಿಗೂ ಪೋಷಕರು ಹೇಳಿಕೊಡುವ ಮೊದಲ ಸೂತ್ರ ಒಂದೇ: "ಬೆಂಗಳೂರಲ್ಲಿ ಎಲ್ಲಾದರೂ ದಾರಿ ತಪ್ಪಿದರೆ ನೇರ ಮೆಜೆಸ್ಟಿಕ್‌ಗೆ ಬಂದುಬಿಡು!". ಆದರೆ, ಅದೇ ಪೋಷಕರು "ಮೆಜೆಸ್ಟಿಕ್ ಕಡೆ ಹೆಚ್ಚಾಗಿ ಹೋಗಬೇಡ" ಎಂಬ ಎಚ್ಚರಿಕೆಯನ್ನೂ ನೀಡುತ್ತಿದ್ದರು. ಏಕೆಂದರೆ, ಒಂದೆಡೆ ಥಿಯೇಟರ್ ಮತ್ತು ಶಾಪಿಂಗ್‌ಗೆ ಪ್ರಸಿದ್ಧವಾಗಿದ್ದ ಮೆಜೆಸ್ಟಿಕ್, ಮತ್ತೊಂದೆಡೆ ಅಕ್ರಮ ಚಟುವಟಿಕೆಗಳು ಹಾಗೂ ರಹಸ್ಯ ಲಾಡ್ಜ್‌ಗಳಿಗೂ ಕುಖ್ಯಾತಿ ಪಡೆದಿತ್ತು. ಏನೇ ಇರಲಿ, ಇಂದಿನ ಇನ್‌ಸ್ಟಾಗ್ರಾಮ್ ತಲೆಮಾರಿನ ನೆಟ್ಟಿಗರು ಹೇಳುವಂತೆ: "ಮೆಜೆಸ್ಟಿಕ್ ಎನ್ನುವುದು ಕೇವಲ ಒಂದು ಸ್ಥಳದ ಹೆಸರಲ್ಲ, ಅದೊಂದು ಭಾವನೆ!"