
ಬೆಂಗಳೂರು (ಆ.21): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIAB) ವಿಮಾನಯಾನ ಶುಲ್ಕ ರಚನೆಯಲ್ಲಿ (Aeronautical Tariff Structure) ಭಾರಿ ಬದಲಾವಣೆ ಮಾಡಲು ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA) ಅನುಮೋದನೆ ನೀಡಿದೆ. ನೂತನ ನಿಯಮದಂತೆ ಬೆಂಗಳೂರಿನಿಂದ ನಿರ್ಗಮಿಸುವ (Departing) ಪ್ರಯಾಣಿಕರ 'ಬಳಕೆದಾರ ಅಭಿವೃದ್ಧಿ ಶುಲ್ಕ' (User Development Fee - UDF) ಗಣನೀಯವಾಗಿ ಕಡಿತಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುವ (Arriving) ಪ್ರಯಾಣಿಕರಿಗೂ ಯುಡಿಎಫ್ ಶುಲ್ಕವನ್ನು ವಿಧಿಸಲು ನಿರ್ಧರಿಸಲಾಗಿದೆ.
ಈ ಪರಿಷ್ಕೃತ ಶುಲ್ಕ ರಚನೆಯು 2026ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದ್ದು, 2026ರ ಏಪ್ರಿಲ್ 1ರಿಂದ 2031ರ ಮಾರ್ಚ್ 31ರವರೆಗಿನ ನಾಲ್ಕನೇ ನಿಯಂತ್ರಣ ಅವಧಿಗೆ (Fourth Control Period) ಅನ್ವಯವಾಗಲಿದೆ. ಪ್ರಾಧಿಕಾರ ನಿಗದಿಪಡಿಸಿರುವ ಈ ದರಗಳು ಗರಿಷ್ಠ ಮಿತಿಯಷ್ಟಿದ್ದು (Ceiling Rates), ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿರುತ್ತವೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರಿಗೆ ಯುಡಿಎಫ್ ದರ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ನಿರ್ಗಮನ ದೇಶೀಯ ಪ್ರಯಾಣಿಕರು ಇನ್ಮುಂದೆ ಪ್ರಸ್ತುತ ಇರುವ ₹550 ಬದಲಿಗೆ ₹300 ಯುಡಿಎಫ್ ನೀಡಿದರೆ ಸಾಕಾಗುತ್ತದೆ. ಅಂದರೆ ₹250 (ಶೇ. 45.5 ರಷ್ಟು) ಶುಲ್ಕ ಕಡಿತವಾಗಲಿದೆ.
ನಿರ್ಗಮನ ಅಂತರರಾಷ್ಟ್ರೀಯ ಪ್ರಯಾಣಿಕರು ಹಾಲಿ ಇರುವ ₹1,500 ಯುಡಿಎಫ್ ಕಡಿತಗೊಂಡು ₹997 ಆಗಲಿದೆ. ಅಂದರೆ ₹503 (ಶೇ. 33.5 ರಷ್ಟು) ಶುಲ್ಕ ಇಳಿಕೆಯಾಗಲಿದೆ.
ಈ ಹಿಂದೆ ಆಗಮಿಸುವ ಪ್ರಯಾಣಿಕರಿಗೆ ಯಾವುದೇ ಯುಡಿಎಫ್ ಇರಲಿಲ್ಲ. ಆದರೆ ನೂತನ ನಿಯಮದಂತೆ ಬೆಂಗಳೂರಿಗೆ ಆಗಮಿಸುವ ದೇಶೀಯ ಪ್ರಯಾಣಿಕರು ₹125 ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರು ₹426 ಯುಡಿಎಫ್ ಪಾವತಿಸಬೇಕಾಗುತ್ತದೆ. ಈ ನೂತನ ಯುಡಿಎಫ್ ದರಗಳು 2026ರ ಸೆಪ್ಟೆಂಬರ್ 1 ಅಥವಾ ಅದರ ನಂತರ ನೀಡಲಾಗುವ ವಿಮಾನ ಟಿಕೆಟ್‌ಗಳಿಗೆ ಅನ್ವಯವಾಗಲಿವೆ.
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರು (Diplomatic Passport Holders), ಕರ್ತವ್ಯದಲ್ಲಿರುವ ವಿಮಾನ ಸಿಬ್ಬಂದಿ ಮತ್ತು ಅಧಿಕೃತ ಸರ್ಕಾರಿ ಕರ್ತವ್ಯದ ಮೇಲೆ ಪ್ರಯಾಣಿಸುವ ಪ್ರಯಾಣಿಕರಿಗೆ ಯುಡಿಎಫ್‌ನಿಂದ ವಿನಾಯಿತಿ ನೀಡಲಾಗಿದೆ. ಜೊತೆಗೆ, ಒಂದೇ ಟಿಕೆಟ್‌ನಲ್ಲಿ 24 ಗಂಟೆಗಳ ಒಳಗೆ ಮುಂದಿನ ಪ್ರಯಾಣ ಬೆಳೆಸುವ ಟ್ರಾನ್ಸಿಟ್ ಅಥವಾ ಟ್ರಾನ್ಸ್‌ಫರ್ ಪ್ರಯಾಣಿಕರಿಗೂ ಈ ಶುಲ್ಕ ಅನ್ವಯಿಸುವುದಿಲ್ಲ.
ವಿಮಾನಗಳ ಲ್ಯಾಂಡಿಂಗ್ ಶುಲ್ಕದಲ್ಲೂ (Landing Charges) ಪ್ರಾಧಿಕಾರ ಪರಿಷ್ಕರಣೆ ಮಾಡಿದೆ. ಸೆಪ್ಟೆಂಬರ್ 1ರಿಂದ ದೇಶೀಯ ವಿಮಾನಗಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ ₹325 ಹಾಗೂ ಅಂತರರಾಷ್ಟ್ರೀಯ ವಿಮಾನಗಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ ₹455 ಲ್ಯಾಂಡಿಂಗ್ ಶುಲ್ಕ ಇರಲಿದೆ. 80ಕ್ಕಿಂತ ಕಡಿಮೆ ಆಸನ ಸಾಮರ್ಥ್ಯ ಹೊಂದಿರುವ ದೇಶೀಯ ವಿಮಾನಗಳು, ಡಿಜಿಸಿಎ (DGCA) ಅನುಮೋದಿತ ಫ್ಲೈಯಿಂಗ್ ಶಾಲೆಗಳ ತರಬೇತಿ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಮಿಲಿಟರಿ ವಿಮಾನಗಳಿಗೆ ಲ್ಯಾಂಡಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಮೊದಲ ಎರಡು ಗಂಟೆಗಳ ಪಾರ್ಕಿಂಗ್ ಉಚಿತವಾಗಿದ್ದು, ಆ ನಂತರ ನಿಗದಿತ ದರಗಳನ್ನು ವಿಧಿಸಲಾಗುತ್ತದೆ.
ಇದಲ್ಲದೆ, ಟರ್ಮಿನಲ್ ಉಪಕರಣಗಳು, ಸ್ವಯಂ ಸೇವಾ ಸೌಲಭ್ಯಗಳು ಮತ್ತು ಬ್ಯಾಗೇಜ್ ನಿರ್ವಹಣೆಗಾಗಿ (CUTE/CUSS/BRS) ನಿರ್ಗಮಿಸುವ ಪ್ರತಿ ದೇಶೀಯ ಪ್ರಯಾಣಿಕರಿಂದ ₹75 ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರಿಂದ $1 (ಅಮೆರಿಕನ್ ಡಾಲರ್) ಶುಲ್ಕ ಸಂಗ್ರಹಿಸಲಾಗುತ್ತದೆ.
ಹೊಸ ವಿಮಾನಯಾನ ಸಂಸ್ಥೆಗಳು, ಹೊಸ ಅಂತರರಾಷ್ಟ್ರೀಯ ಮಾರ್ಗಗಳು ಮತ್ತು ಹೆಚ್ಚುವರಿ ವಿಮಾನ ಸಂಚಾರವನ್ನು ಉತ್ತೇಜಿಸಲು 'ವೇರಿಯಬಲ್ ಟ್ಯಾರಿಫ್ ಪ್ಲಾನ್' (Variable Tariff Plan) ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ಹೊಸ ಅಥವಾ ಕಡಿಮೆ ಸೇವೆ ಇರುವ ಮಾರ್ಗಗಳಲ್ಲಿ ಸಂಚರಿಸುವ ಏರ್‌ಲೈನ್ಸ್‌ಗಳಿಗೆ ಲ್ಯಾಂಡಿಂಗ್ ಶುಲ್ಕದಲ್ಲಿ ರಿಯಾಯಿತಿ ಸಿಗಲಿದೆ. ಅಂತರರಾಷ್ಟ್ರೀಯ ಮಾರ್ಗಗಳಲ್ಲಿ 4,500 ಕಿ.ಮೀ ಗಿಂತ ಕಡಿಮೆ ಮತ್ತು 4,500 ಕಿ.ಮೀ ಗಿಂತ ಹೆಚ್ಚಿನ ಸುದೀರ್ಘ ಮಾರ್ಗಗಳಿಗೆ ಪ್ರತ್ಯೇಕ ರಿಯಾಯಿತಿ ಸೂತ್ರಗಳನ್ನು ರೂಪಿಸಲಾಗಿದೆ. ಜೊತೆಗೆ ಸರಕು ಸಾಗಣೆ (Cargo) ವಿಮಾನ ಸಂಸ್ಥೆಗಳಿಗೂ ಪ್ರೋತ್ಸಾಹಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ.