ಬೆಂಗಳೂರು ಏರ್‌ಪೋರ್ಟ್‌ನಲ್ಲಿ 260 ಗ್ರಾಂ ಚಿನ್ನದ ಪುಡಿ ಜಪ್ತಿ: ಸೊಂಟಕ್ಕೆ ಸುತ್ತಿಕೊಂಡಿದ್ದ ಇಬ್ಬರು ವಶಕ್ಕೆ!

Published : Aug 21, 2026, 02:30 PM IST
Bengaluru Airport Gold Powder

ಸಾರಾಂಶ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಅಹಮದಾಬಾದ್‌ಗೆ ತೆರಳುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಸಿಐಎಸ್‌ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಭದ್ರತಾ ತಪಾಸಣೆ ವೇಳೆ, ಆರೋಪಿಗಳು ತಮ್ಮ ಪ್ಯಾಂಟ್‌ನ ಸೊಂಟದ ಭಾಗದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 260 ಗ್ರಾಂ ತೂಕದ ಚಿನ್ನದಂತಹ ಲೋಹದ ಪುಡಿಯನ್ನು ಪತ್ತೆಹಚ್ಚಲಾಗಿದೆ.

ಬೆಂಗಳೂರು (ಆ.21): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭದ್ರತಾ ತಪಾಸಣೆ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 260 ಗ್ರಾಂ ತೂಕದ ಚಿನ್ನದಂತಹ ಲೋಹದ ಪುಡಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಅಹಮದಾಬಾದ್‌ಗೆ ತೆರಳಲು ಸಿದ್ಧರಾಗಿದ್ದ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ.

ಪ್ಯಾಂಟ್‌ನ ಸೊಂಟದ ಭಾಗದಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಯತ್ನ:

ಬೆಂಗಳೂರಿನಿಂದ ಅಹಮದಾಬಾದ್‌ಗೆ ವಿಮಾನದ ಮೂಲಕ ತೆರಳಲು ಬಂದಿದ್ದ ಇಬ್ಬರು ಪ್ರಯಾಣಿಕರು, ಟರ್ಮಿನಲ್-1 ರ 'SHA-04, D-ಝೋನ್' ಭದ್ರತಾ ಗೇಟ್ ಬಳಿ ಸಿಐಎಸ್‌ಎಫ್ ಸಿಬ್ಬಂದಿಯ ತಪಾಸಣೆಗೆ ಒಳಪಟ್ಟಿದ್ದರು. ಈ ವೇಳೆ ಇವರ ವರ್ತನೆ ಮೇಲೆ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಕೂಲಂಕಷವಾಗಿ ತಪಾಸಣೆ ನಡೆಸಿದಾಗ, ತಮ್ಮ ಪ್ಯಾಂಟ್‌ನ ಸೊಂಟದ ಪಟ್ಟಿಯ ಒಳಭಾಗದಲ್ಲಿ ಎರಡು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಲೋಹದ ಪುಡಿಯನ್ನು ಅಡಗಿಸಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ಏರ್‌ಪೋರ್ಟ್ ಪೊಲೀಸರ ವಶಕ್ಕೆ ಆರೋಪಿಗಳು:

ತಕ್ಷಣವೇ ಕಾರ್ಯಪ್ರವೃತ್ತರಾದ ಸಿಐಎಸ್‌ಎಫ್ ಅಧಿಕಾರಿಗಳು 260 ಗ್ರಾಂ ತೂಕದ ಶಂಕಿತ ಚಿನ್ನದ ಪುಡಿಯನ್ನು ವಶಪಡಿಸಿಕೊಂಡು, ಇಬ್ಬರು ಪ್ರಯಾಣಿಕರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕೆಂಪೇಗೌಡ ವಿಮಾನ ನಿಲ್ದಾಣ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಶಪಡಿಸಿಕೊಂಡ ಪುಡಿಯು ಅಸಲಿ ಚಿನ್ನವೇ ಅಥವಾ ಬೇರೆ ಯಾವುದಾದರೂ ಬೆಲೆಬಾಳುವ ಲೋಹವೇ ಎಂಬ ಬಗ್ಗೆ ತಜ್ಞರಿಂದ ಗುಣಮಟ್ಟ ಹಾಗೂ ಶುದ್ಧತೆಯ ಪರೀಕ್ಷೆ ನಡೆಸಲಾಗುತ್ತಿದೆ. ಇಷ್ಟೊಂದು ಪ್ರಮಾಣದ ಲೋಹದ ಪುಡಿಯನ್ನು ಎಲ್ಲಿಂದ ತರಲಾಗಿತ್ತು ಮತ್ತು ಯಾರಿಗೆ ತಲುಪಿಸಲು ಕೊಂಡೊಯ್ಯಲಾಗುತ್ತಿತ್ತು ಎಂಬ ಕುರಿತು ವಿಮಾನ ನಿಲ್ದಾಣ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

PREV
Read more Articles on
click me!

Recommended Stories

ಮಹಿಳೆಯರಷ್ಟೇ ‘ಹೋಮ್‌ ಮೇಕರ್‌’ ಅಲ್ಲ, ಪುರುಷರು..! ಹೈಕೋರ್ಟ್ ಮಹತ್ವದ ತೀರ್ಪು, ಏನಿದು ಪ್ರಕರಣ?
ಮಾಫಿ ಸಾಕ್ಷಿಗೆ ಯಾರ ಒತ್ತಡ ಇಲ್ಲವೆಂದ ದರ್ಶನ್‌ ಕೇಸ್‌ ಆರೋಪಿ ಪ್ರದೂಷ್‌ ಬಗ್ಗೆ ಪ್ರೊಬೇಷನ್‌ ಅಧಿಕಾರಿ ವರದಿ ಕೇಳಿದ ಕೋರ್ಟ್