
ಬೆಂಗಳೂರು: ಬೆಂಗಳೂರಿನ ರಸ್ತೆಗಳ ತುಂಬಾ ಗುಂಡಿಗಳು ಬಿದ್ದಿವೆ. ಪ್ರಯಾಣಿಕರು ದಿನ ನಿತ್ಯ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆರಳಲು ಹರಸಾಹಸ ಪಡುವಂತಾಗಿದೆ. ಇನ್ನೊಂದೆಡೆ ಮಳೆ ಬಂತೆಂದರೆ ರಸ್ತೆ ಎಲ್ಲಿದೆ ಗುಂಡಿ ಎಲ್ಲಿದೆ ಎಂಬುದೇ ತಿಳಿಯುವುದಿಲ್ಲ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮಾತ್ರ ಜನರ ಕಷ್ಟ ಕಾಣುತ್ತಿಲ್ಲ. ಬೆಂಗಳೂರಲ್ಲಿರುವ ರಸ್ತೆಗುಂಡಿಗಳನ್ನೆಲ್ಲಾ ಮುಚ್ಚಿದ್ದೇವೆ ಮತ್ತು ಬೆರಳೆಣಿಕೆ ಗುಂಡಿಗಳು ಮಾತ್ರ ಇವೆ ಎಂಬ ಸುಳ್ಳನ್ನು ಹೈಕೋರ್ಟ್‌ಗೆ ಹೇಳಲಾಗಿದೆ. ಇವೆಲ್ಲದರ ನಡುವೆ ಟ್ರಾಫಿಕ್ ಪೊಲೀಸರು ಬಿಬಿಎಂಪಿ ಕೆಲಸವನ್ನು ತಮ್ಮ ಹೆಗಲಿಗೆ ಹೊತ್ತುಕೊಂಡು ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭಿಸಿದ್ದಾರೆ. ನಗರದ ವಿವಿದೆಡೆ ರಸ್ತೆಗುಂಡಿಗಳ ಕಾರಣದಿಂದ ದಿನಕ್ಕೆ ಹತ್ತಾರು ಅಪಘಾತಗಳು ಆಗುತ್ತಿವೆ. ಇದೇ ಕಾರಣಕ್ಕೆ ಬಿಬಿಎಂಪಿ ಏನೂ ಮಾಡುವುದಿಲ್ಲ ಎಂದು ಬೇಸತ್ತು ಟ್ರಾಫಿಕ್ ಪೊಲೀಸರೇ ಮಾನವೀಯತೆ ಮೆರೆಯುತ್ತಿದ್ದಾರೆ.
ನಿತ್ಯ ರಸ್ತೆ ಮೇಲಿರೊ ಟ್ರಾಫಿಕ್ ಪೊಲೀಸರಿಂದ ಗುಂಡಿಗಳ ಬಗ್ಗೆ ಮಾಹಿತಿಯನ್ನು ಬಿಬಿಎಂಪಿಯೇ ನಿರ್ಮಿಸಿದ ಆ್ಯಪ್ ಮೂಲಕ ನೀಡುತ್ತಿದ್ದಾರೆ. ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ಬಿಬಿಎಂಪಿಗೆ ಗುಂಡಿಗಳ ಬಗ್ಗೆ ಟ್ರಾಫಿಕ್ ಪೊಲೀಸರು ಮಾಹಿತಿ ಕೊಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವ ರಸ್ತೆಯಲ್ಲಿ ಗುಂಡಿ ಇದೆ, ಎಷ್ಟು ಗುಂಡಿಗಳಿವೆ ಅಂತ ಫೋಟೊ ಸಮೇತ ಪೊಲೀಸರು ಬಿಬಿಎಂಪಿಗೆ ಮಾಹಿತಿ ನೀಡುತ್ತಿದ್ದರೂ ಅದನ್ನು ರಿಪೇರಿ ಮಾಡುವ ಕೆಲಸಕ್ಕೆ ಬಿಬಿಎಂಪಿ ಮುಂದಾಗುತ್ತಿಲ್ಲ. ಇದೇ ಕಾರಣಕ್ಕೆ ಬೇಸತ್ತ ಟ್ರಾಫಿಕ್ ಪೊಲೀಸರು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮೊದಲೇ ಟ್ರಾಫಿಕ್ ಜಾಮ್ ಹೆಚ್ಚು. ಇನ್ನು ಈ ಗುಂಡಿಗಳಿಂದ ಇನ್ನಷ್ಟು ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಅನಿವಾರ್ಯವಾಗಿ ಟ್ರಾಫಿಕ್ ಪೊಲೀಸರೇ ರಸ್ತೆಗುಂಡಿ ಮುಚ್ಚುತ್ತಿದ್ದಾರೆ.
ಮಲ್ಲೇಶ್ವರಂ ಸಂಚಾರಿ ಪೊಲೀಸ್ರಿಂದ ಸ್ಯಾಂಡಲ್ ವುಡ್ ಸೋಪ್ ಫ್ಯಾಕ್ಟರ ಬಳಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಇತ್ತ ಬಾಣಸವಾಡಿ ಸಂಚಾರಿ ಪೊಲೀಸ್ರಿಂದ ಹೆಣ್ಣೂರು ರಿಂಗ್ ರೋಡ್ ಅಂಡರ್ ಪಾಸ್ ನಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಜಾಲಹಳ್ಳಿ ಟ್ರಾಫಿಕ್ ಪೊಲೀಸರು ಬಿಎಫ್ ಡಬ್ಲ್ಯು ಜಂಕ್ಷನ್ ನಲ್ಲಿದ್ದ ಗುಂಡಿ ಮುಚ್ಚುತ್ತಿದ್ದಾರೆ. ಆದರೆ ಇದನ್ನು ಕಂಡೂ ಕಾಣದಂತೆ ಬಿಬಿಎಂಪಿ ಅಧಿಕಾರಿಗಳು ಕುಳಿತಿದ್ದಾರೆ. ಟ್ರಾಫಿಕ್ ಪೊಲೀಸರು ನಗರದ ಹಲವು ಭಾಗಗಳಲ್ಲಿ ರಸ್ತೆ ಗುಂಡಿಗಳನ್ನು ಕಾಂಕ್ರೀಟ್ ಹಾಕಿ ಮುಚ್ಚುತ್ತಿದ್ದಾರೆ.
ಇದನ್ನೂ ಓದಿ: Bengaluru: ಡೆಡ್ಲಿ ರಸ್ತೆಗುಂಡಿಯಿಂದ ಮತ್ತೊಂದು ಅವಘಡ
ರಸ್ತೆ ಗುಂಡಿಗೆ ಬಲಿಯಾದ ಸುನಿತಾರ ಮಗಳ ಅಳಲು:
ಮೃತ ಉಮಾ ಮಗಳು ಸುನೀತಾ ಪ್ರತಿಕ್ರಿಯೆ ನೀಡಿದ್ದು, ರಸ್ತೆಗುಂಡಿಗಳನ್ನು ಮೊದಲು ಮುಚ್ಚಿ. ನಮ್ಮಂತ ಬಡವರ ಜೀವದ ಜೊತೆ ಆಟ ಆಡಬೇಡಿ. ನಮ್ಮ ಜೀವನವನ್ನು ಕಾಪಾಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಮೃತ ಉಮಾ ಅವರ ಆಳಿಯ ರವಿ ಕೂಡ ಪ್ರತಿಕ್ರಿಯೆ ನೀಡಿದ್ದು, ನಮ್ಮ ಕುಟುಂಬ ಸಂಪೂರ್ಣ ವಾಗಿ ಆತ್ತೆ ಮೇಲೆ ಆಧಾರವಾಗಿತ್ತು. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿದ್ದಾರೆ. ಜೊತೆಗೆ ಕುಟುಂಬದ ಒಬ್ಬರಿಗೆ ಸರ್ಕಾರ ಸರ್ಕಾರಿ ಕೆಲಸವನ್ನು ನೀಡಬೇಕು. ನಮ್ಮ ತಾಯಿಗೆ ಆದ ಪರಿಸ್ಥಿತಿ ಬೇರೆ ಯಾರಿಗೂ ಬರೋದು ಬೇಡ. ಬೆಂಗಳೂರು ರಸ್ತೆಯಲ್ಲಿರುವ ಗುಂಡಿಯನ್ನು ಮುಚ್ಚಿ ಅಮಾಯಾಕರ ಪ್ರಾಣ ಉಳಿಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Bengaluru: ಬಿಬಿಎಂಪಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಮಹಿಳೆ ಬಲಿ!
ನಗರದಲ್ಲಿ ಪದೇ ಪದೇ ರಸ್ತೆ ಗುಂಡಿಗಳಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದ ಒಂದು ಮಳೆ ಬಂದರೆ ಸಾಕು ರಸ್ತೆಗಳಲ್ಲಿ ಗುಂಡಿ ಬೀಳುತ್ತದೆ. ಇದನ್ನು ತಪ್ಪಿಸಲು ಹೋಗಿ ಹಲವಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಟ್ರಾಫಿಕ್ ಪೊಲೀಸರ ಕೆಲಸದಿಂದಾದರೂ ಬಿಬಿಎಂಪಿ ಎಚ್ಚೆತ್ತುಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕು.