ಜಕ್ಕೂರು ವಿಲ್ಲಾ ಪಾರ್ಟಿಯಲ್ಲಿದ್ದ ಸಂತ್ರಸ್ತೆಯೂ ಸೇರಿದಂತೆ 10 ಮಂದಿಗೆ ಡ್ರಗ್ಸ್ ಪರೀಕ್ಷೆ

Published : Mar 01, 2026, 09:15 AM IST
Jakkur Villa

ಸಾರಾಂಶ

Bengaluru Villa Party ಜಕ್ಕೂರು ಸಮೀಪದ ವಿಲ್ಲಾ ಪಾರ್ಟಿಯಲ್ಲಿ ಸಾಮೂಹಿಕ ಅತ್ಯಾ*ಚಾರ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಸಂತ್ರಸ್ತೆ ಸೇರಿದಂತೆ 10 ಜನರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಿದ್ದಾರೆ. 

ಬೆಂಗಳೂರು: ಸಾಮಾಹಿಕ ಅತ್ಯಾ*ಚಾರ ಕೃತ್ಯ ನಡೆದಿದೆ ಎನ್ನಲಾದ ಜಕ್ಕೂರು ಸಮೀಪದ ‘ವಿಲ್ಲಾ ಪಾರ್ಟಿ’ಯಲ್ಲಿ ಪಾಲ್ಗೊಂಡಿದ್ದ ಸಂತ್ರಸ್ತೆ ಸೇರಿ ಐವರು ಯುವತಿಯರು ಹಾಗೂ ಐವರು ಯುವಕರನ್ನು ಅಮೃತಹಳ್ಳಿ ಪೊಲೀಸರು ಡ್ರಗ್ಸ್ ಪರೀಕ್ಷೆಗೊಳಪಡಿಸಿದ್ದಾರೆ.

ಪಾರ್ಟಿಯಲ್ಲಿ ಡ್ರಗ್ಸ್ ನೀಡಿ ಯುವತಿಯರ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪಾರ್ಟಿಯಲ್ಲಿದ್ದವರು ಡ್ರಗ್ಸ್ ಸೇವಿಸಿದ್ದರೆ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲರನ್ನು ಅಮೃತಹಳ್ಳಿ ಪೊಲೀಸರು ಡ್ರಗ್ಸ್ ಪರೀಕ್ಷೆಗೊಳಪಡಿಸಿದ್ದಾರೆ. ಈ ವೈದ್ಯಕೀಯ ವರದಿಗೆ ಪೊಲೀಸರು ಕಾಯುತ್ತಿದ್ದು, ವರದಿ ಸಲ್ಲಿಕೆ ನಂತರ ಆರೋಪಿಗಳ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

ಸಂತ್ರಸ್ತೆ ದೂರು ಆಧರಿಸಿ ಸಾಮೂಹಿಕ ಅತ್ಯಾ*ಚಾರ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಹಾಗೂ ಸಂತ್ರಸ್ತೆ ಮಾತ್ರಲ್ಲದೆ ಪಾರ್ಟಿಯಲ್ಲಿದ್ದವರನ್ನು ಡ್ರಗ್ಸ್ ಪರೀಕ್ಷೆಗೊಳಪಡಿಸಲಾಗಿದೆ. ಕೃತ್ಯ ನಡೆದ ಸ್ಥಳದ ತಪಾಸಣೆ ವೇಳೆ ಡ್ರಗ್ಸ್ ಪತ್ತೆಯಾಗಿಲ್ಲ. ಪಾರ್ಟಿ ಮುಗಿದ ಬಳಿಕ ಡ್ರಗ್ಸ್ ಹೊರಗೆ ಎಸೆದಿರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಡ್ರಗ್ಸ್ ಸೇವನೆ ಶಂಕೆ ನಿವಾರಣೆಗೆ ಪರೀಕ್ಷಾ ವರದಿ ಕಾಯುತ್ತಿದ್ದೇವೆ. ಒಂದು ವೇಳೆ ಡ್ರಗ್ಸ್ ಸೇವನೆ ಖಚಿತವಾದರೆ ಡ್ರಗ್ಸ್ ಪೆಡ್ಲಿಂಗ್ (ಮಾರಾಟ) ಆರೋಪವನ್ನು ಎಫ್‌ಐಆರ್‌ಗೆ ಸೇರಿಸುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅರೆ ಪ್ರಜ್ಞರಾದ ನಂತರ ಲೈಂಗಿಕವಾಗಿ ಶೋಷಣೆ

ವಿಲ್ಲಾ ಪಾರ್ಟಿಯಲ್ಲಿ ಯುವತಿಯರಿಗೆ ಬಲವಂತವಾಗಿ ಡ್ರಗ್ಸ್ ನೀಡಿ ಬಳಿಕ ಅರೆ ಪ್ರಜ್ಞರಾದ ನಂತರ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದರು. ಈ ಕೃತ್ಯದ ವಿಡಿಯೋವನ್ನು ಮಾಡಿಕೊಂಡು ಯುವತಿಯರಿಗೆ ಆರೋಪಿಗಳು ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ವಿಡಿಯೋಗಳು ವೈರಲ್

ವಿಲ್ಲಾ ಪಾರ್ಟಿಯ ಸಂಬಂಧಿಸಿದ್ದು ಎನ್ನಲಾದ ಕೆಲ ವಿಡಿಯೋಗಳು ಬಹಿರಂಗವಾಗಿವೆ. ಇದರಲ್ಲಿ ಐವರು ಯುವತಿಯರ ಜತೆ ಆರೋಪಿಗಳಾದ ನಿಖಿಲ್ ಮತ್ತು ಡಿಕ್ಸನ್‌ ನೃತ್ಯ ಮಾಡುವ ದೃಶ್ಯಗಳಿವೆ. ಅಲ್ಲದೆ ಮದ್ಯದ ಬಾಟಲ್‌ಗಳು ಸಹ ಕಂಡು ಬರುತ್ತವೆ. ಈ ವಿಡಿಯೋ ಆಧರಿಸಿ ಪಾರ್ಟಿಯಲ್ಲಿದ್ದ ಸಂತ್ರಸ್ತೆಯ ಸ್ನೇಹಿತರನ್ನು ಪೊಲೀಸರು ಪತ್ತೆ ಹಚ್ಚಿ ಹೇಳಿಕೆ ಪಡೆದಿದ್ದಾರೆ. ಆನಂತರ ಎಲ್ಲರನ್ನು ಕರೆದೊಯ್ದು ಆಸ್ಪತ್ರೆಯಲ್ಲಿ ಡ್ರಗ್ಸ್ ಪತ್ತೆ ಪರೀಕ್ಷೆಗೊಳಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸ್ವಯಂ ಇಚ್ಛೆಯಿಂದ ಹೋಗಿದ್ದೇವು?

ಅಮೃತಹಳ್ಳಿ ಸಮೀಪ ನಿಖಿಲ್ ಆಯೋಜಿಸಿದ್ದ ಪಾರ್ಟಿಗೆ ಆಹ್ವಾನ ಬಂದಿತ್ತು. ಆಗ ನಾವು ಸ್ವಯಂ ಇಚ್ಛೆಯಿಂದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದೆವು. ಅಲ್ಲಿ ನಾವು ಯಾವುದೇ ರೀತಿ ಅನುಚಿತ ವರ್ತನೆ ಅಥವಾ ತೊಂದರೆ ಎದುರಿಸಿಲ್ಲ ಎಂದು ಇಬ್ಬರು ಯುವತಿಯರು ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.

ಕಾರು ಮಾರಾಟಗಾರ ನಿಖಿಲ್

ರಾಜಾಜಿನಗರದ ಸಮೀಪ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನಿಖಿಲ್‌ ಹೊಂದಿದ್ದಾನೆ. ಮಲ್ಲೇಶ್ವರದಲ್ಲಿ ನಿಖಿಲ್ ವಾಸವಾಗಿದ್ದ. ಮೋಜು ಮಸ್ತಿಗೆ ಜೀವನಕ್ಕೆ ಬಿದ್ದಿದ್ದ ಈತ, ವಾರಾಂತ್ಯಗಳಲ್ಲಿ ಪಾರ್ಟಿಗಳು ಹಾಗೂ ಆಫ್ಟರ್‌ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ. ಈ ಪಾರ್ಟಿಗಳಿಗೆ ಸುಂದರ ಯುವತಿಯರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸೆಳೆದು ನಿಖಿಲ್ ಮೋಜು ಮಾಡುತ್ತಿದ್ದ. ಈತನ ಸಂಪರ್ಕ ಜಾಲವನ್ನು ಪೊಲೀಸರು ಜಾಲಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಕೃತ್ಯಕ್ಕೆ ಆತನಿಗೆ ಪಶ್ಚಿಮ ಬಂಗಾಳ ಮೂಲದ ಡಿಕ್ಸೆನ್ ಸಾಥ್ ಕೊಟ್ಟಿದ್ದ. ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ನಿಖಿಲ್ ಗ್ಯಾಂಗ್ ಗಾಳ ಹಾಕುತ್ತಿತ್ತು. ಅದರಲ್ಲೂ ಹೊರ ರಾಜ್ಯದ ಯುವತಿಯರನ್ನೇ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನಿಖಿಲ್ ಪಾರ್ಟಿಯಲ್ಲಿ ಪ್ರಭಾವಿಗಳು?

ಪಾರ್ಟಿ ಸಲುವಾಗಿಯೇ ಜಕ್ಕೂರಿನಲ್ಲಿ ‘ವಿಲ್ಲಾ’ ವನ್ನು ನಿಖಿಲ್ ಬಾಡಿಗೆ ಪಡೆದಿದ್ದ. ಈ ವಿಲ್ಲಾ ಪಾರ್ಟಿಗಳಿಗೆ ಕೆಲ ರಾಜಕಾರಣಿಗಳು, ಅವರ ಮಕ್ಕಳು, ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

ಎಸಿಪಿ ಮಟ್ಟದಲ್ಲಿ ತನಿಖೆ

ವಿಲ್ಲಾ ಪಾರ್ಟಿ ಕುರಿತು ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆಗೆ ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಮುರುಗೇಂದ್ರಯ್ಯ ಹಾಗೂ ಯಲಹಂಕ ಉಪ ವಿಭಾಗದ ಎಸಿಪಿ ನರಸಿಂಹಮೂರ್ತಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ಈಶಾನ್ಯ ವಿಭಾಗದ ಡಿಸಿಪಿ ಮಿಥುನ್‌ ಕುಮಾರ್ ರಚಿಸಿದ್ದಾರೆ.

ವಿಲ್ಲಾ ಬಾಡಿಗೆ ಕೊಟ್ಟಿದ್ದ ಸರ್ಕಾರಿ ಅಧಿಕಾರಿ?

ಸಾಮಾಹಿಕ ಅತ್ಯಾ*ಚಾರ ಕೃತ್ಯ ನಡೆದಿದೆ ಎನ್ನಲಾದ ವಿಲ್ಲಾವು ರಾಜ್ಯದ ಹಿರಿಯ ಅಧಿಕಾರಿಯೊಬ್ಬರಿಗೆ ಸೇರಿದ್ದು, ಮೂರು ವರ್ಷಗಳ ಹಿಂದೆಯೇ ಆ ವಿಲ್ಲಾವನ್ನು ಹಾಸ್ಪಿಟಾಲಿಟಿ ಏಜೆನ್ಸಿಗೆ ಬಾಡಿಗೆ ಕೊಟ್ಟಿದ್ದರು. ಆ ಕಂಪನಿ ಮೂಲಕ ನಿಖಿಲ್ ಬಾಡಿಗೆ ಪಡೆದಿದ್ದ ಎನ್ನಲಾಗಿದೆ.

PREV
Read more Articles on
click me!

Recommended Stories

Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!
Cockroach janata party: ಬೆಂಗಳೂರಿನಲ್ಲಿಂದು 'ಜಿರಳೆ'ಗಳ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಭಾಗಿ!