
ಬೆಂಗಳೂರು (ಅ.31): ದೇಶದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್ (FHL), ಸುಗುಣ ರಾಮಯ್ಯ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಸಂಸ್ಥೆಯ ಶೇರುದಾರರಿಂದ ರಾಜಾಜಿನಗರದ ಸುಗುಣ ಆಸ್ಪತ್ರೆಯನ್ನು ಖರೀದಿಸಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಫೋರ್ಟಿಸ್ ಸಂಸ್ಥೆಯ ಶೇಕಡಾ 100 ರಷ್ಟು ಸಂಪೂರ್ಣ ಒಡೆತನದ ಉಪಸಂಸ್ಥೆಯಾಗಿರುವ 'ಇಂಟರ್ನ್ಯಾಷನಲ್ ಹಾಸ್ಪಿಟಲ್ ಲಿಮಿಟೆಡ್' (IHL) ಮೂಲಕ ಈ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.
ಈ ಬೃಹತ್ ಒಪ್ಪಂದದ ಭಾಗವಾಗಿ, ಇಂಟರ್ನ್ಯಾಷನಲ್ ಹಾಸ್ಪಿಟಲ್ ಲಿಮಿಟೆಡ್ ಸಂಸ್ಥೆಯು ಸುಗುಣ ಆಸ್ಪತ್ರೆಯ ಸಂಪೂರ್ಣ ಆಡಳಿತಾತ್ಮಕ ಮತ್ತು ಕಾರ್ಯಾಚರಣಾ ಉದ್ಯಮದ ಜೊತೆಗೆ, ಆಸ್ಪತ್ರೆಯ ಸ್ಥಿರಾಸ್ತಿಯಾಗಿರುವ ಜಮೀನು ಹಾಗೂ ಬೃಹತ್ ಕಟ್ಟಡವನ್ನು ಸಹ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಸಂಪೂರ್ಣ ನಗದು ಪಾವತಿ ಆಧಾರಿತವಾಗಿ ಈ ವ್ಯವಹಾರ ನಡೆದಿದೆ. ಬೆಂಗಳೂರು ನಗರದಲ್ಲಿ ತನ್ನ ಆಸ್ಪತ್ರೆಗಳ ನೆಟ್‌ವರ್ಕ್ ಅನ್ನು ಮತ್ತಷ್ಟು ಗಟ್ಟಿಗೊಳಿಸುವ ಫೋರ್ಟಿಸ್ ಸಂಸ್ಥೆಯ ಕ್ಲಸ್ಟರ್-ಆಧಾರಿತ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿ ಈ ಡೀಲ್ ನಡೆದಿದೆ.
2006 ರಲ್ಲಿ ಚಾಲನೆಗೊಂಡ ಸುಗುಣ ಆಸ್ಪತ್ರೆಯು ಉತ್ತರ-ಪಶ್ಚಿಮ ಬೆಂಗಳೂರಿನ ಅತ್ಯಂತ ಆಯಕಟ್ಟಿನ ಪ್ರದೇಶವಾದ ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿದ್ದು, ಪ್ರಸ್ತುತ 110 ಬೆಡ್‌ಗಳ ಸೌಲಭ್ಯವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇದನ್ನು 150 ಬೆಡ್‌ಗಳವರೆಗೆ ವಿಸ್ತರಿಸುವ ಎಲ್ಲಾ ಸಾಮರ್ಥ್ಯಗಳನ್ನು ಈ ಆಸ್ಪತ್ರೆ ಹೊಂದಿದೆ. ಉತ್ತಮ ಸಂಪರ್ಕ ಸೇತುವೆಯಾಗಿರುವ ಹಾಗೂ ದಟ್ಟ ಜನಸಂಖ್ಯೆ ಹೊಂದಿರುವ ಈ ಸಮೃದ್ಧ ವಲಯದಲ್ಲಿ ಆಸ್ಪತ್ರೆಯು ಆಯಕಟ್ಟಿನ ಸ್ಥಳದಲ್ಲಿದೆ.
ಈ ನೂತನ ಖರೀದಿಯೊಂದಿಗೆ ವಾಯುವ್ಯ ಬೆಂಗಳೂರು ವಲಯದಲ್ಲಿ ಫೋರ್ಟಿಸ್ ಹೆಲ್ತ್‌ಕೇರ್ ತನ್ನ ಸ್ಥಾನ ಇನ್ನಷ್ಟು ಬಲಪಡಿಸಿಕೊಂಡಿದೆ. ಪ್ರಸ್ತುತ ರಾಜಾಜಿನಗರದಲ್ಲಿರುವ ಫೋರ್ಟಿಸ್‌ನ ಸ್ವಂತ ಘಟಕ, ಯಶವಂತಪುರದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆ ಸೌಲಭ್ಯ ಹಾಗೂ ನೂತನವಾಗಿ ಸೇರ್ಪಡೆಯಾಗಿರುವ ಸುಗುಣ ಆಸ್ಪತ್ರೆ ಸೇರಿದಂತೆ ಈ ಒಂದೇ ವಲಯದಲ್ಲಿ ಫೋರ್ಟಿಸ್ ಸಂಸ್ಥೆಯು ಒಟ್ಟಾರೆಯಾಗಿ ಬರೋಬ್ಬರಿ 500 ಬೆಡ್‌ಗಳ ಬೃಹತ್ ಹೆಲ್ತ್‌ಕೇರ್ ನೆಟ್‌ವರ್ಕ್ ಹೊಂದಿದಂತಾಗಿದೆ.
2025-26 ನೇ ಹಣಕಾಸು ವರ್ಷದಲ್ಲಿ (FY26) ಸುಗುಣ ಆಸ್ಪತ್ರೆಯು ಸುಮಾರು ₹50 ಕೋಟಿ ಆದಾಯವನ್ನು ದಾಖಲಿಸಿತ್ತು. ಪ್ರಸ್ತುತ ಆಸ್ಪತ್ರೆಯ ಖರೀದಿ ಜೊತೆಗೆ ವೈದ್ಯಕೀಯ ಮೂಲಸೌಕರ್ಯ ಮೇಲ್ದರ್ಜೆಗೇರಿಸುವುದು, ಪ್ರಮುಖ ಚಿಕಿತ್ಸಾ ವಿಭಾಗಗಳನ್ನು ವಿಸ್ತರಿಸುವುದು ಹಾಗೂ ಹೆಚ್ಚುವರಿ ಬೆಡ್ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಲು ಫೋರ್ಟಿಸ್ ಭಾರಿ ಹೂಡಿಕೆಗೆ ಯೋಜನೆ ರೂಪಿಸಿದೆ.
ಸುಗುಣ ಆಸ್ಪತ್ರೆಯ ಖರೀದಿಯ ಕುರಿತು ಹರ್ಷ ವ್ಯಕ್ತಪಡಿಸಿ ಮಾತನಾಡಿದ ಫೋರ್ಟಿಸ್ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಸಿಇಒ (CEO) ಡಾ. ಅಶುತೋಷ್ ರಘುವಂಶಿ ಈ ಹೊಸ ಆಸ್ಪತ್ರೆಯ ಸೇರ್ಪಡೆಯು ಬೆಂಗಳೂರು ನಗರದಲ್ಲಿ ಹಾಗೂ ವಿಶೇಷವಾಗಿ ವಾಯುವ್ಯ ಬೆಂಗಳೂರು ಕಾರಿಡಾರ್‌ನಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಸುಗುಣ ಆಸ್ಪತ್ರೆಯು ನಮ್ಮ ಪೋರ್ಟ್‌ಫೋಲಿಯೊಗೆ ಸೇರ್ಪಡೆಯಾಗಿರುವುದರಿಂದ, ಒ ಅಂಡ್ ಎಂ (O&M) ಸೌಲಭ್ಯಗಳು ಸೇರಿದಂತೆ ಬೆಂಗಳೂರು ನಗರ ಒಂದರಲ್ಲೇ ಫೋರ್ಟಿಸ್‌ನ ಕಾರ್ಯಾಚರಣಾ ಬೆಡ್‌ಗಳ ಸಂಖ್ಯೆ ಈಗ ಬರೋಬ್ಬರಿ 1,000 ಕ್ಕೆ ಏರಿಕೆಯಾಗಿದೆ. ಇದು ನಮ್ಮ ಪ್ರಮುಖ ಕ್ಲಸ್ಟರ್‌ಗಳಲ್ಲಿ ಅಸ್ತಿತ್ವವನ್ನು ವಿಸ್ತರಿಸುವ ಹಾಗೂ ಆಳವಾಗಿಸುವ ತಂತ್ರಕ್ಕೆ ನೀಡಿದ ದೊಡ್ಡ ಬಲವಾಗಿದೆ ಎಂದರು.
ಸುಗುಣ ಆಸ್ಪತ್ರೆಯ ಪ್ರಮೋಟರ್ ಆಗಿರುವ ಡಾ. ಆರ್. ರವೀಂದ್ರ ಹಾಗೂ ಸುಜಾತಾ ರವೀಂದ್ರ, ಕಳೆದ ಹಲವು ವರ್ಷಗಳಿಂದ ಸುಗುಣ ಆಸ್ಪತ್ರೆಯು ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗುವ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಏಕೈಕ ಗುರಿಯೊಂದಿಗೆ ಬೆಳೆದುಬಂದಿದೆ. ಫೋರ್ಟಿಸ್ ಹೆಲ್ತ್‌ಕೇರ್ ಜೊತೆಗಿನ ಈ ಒಪ್ಪಂದವು ಆಸ್ಪತ್ರೆಯ ಮುಂದಿನ ಹಂತದ ಮಹತ್ವದ ಬೆಳವಣಿಗೆಗೆ ಇಟ್ಟ ದೊಡ್ಡ ಹೆಜ್ಜೆಯಾಗಿದೆ. ಫೋರ್ಟಿಸ್ ಸಂಸ್ಥೆಯು ಅಪಾರ ವೈದ್ಯಕೀಯ ನೈಪುಣ್ಯ, ಕಾರ್ಯಾಚರಣಾ ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ತರಲಿದ್ದು, ಇದು ರೋಗಿಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಿಸಲು ಸಹಾಯ ಮಾಡಲಿದೆ. ಈ ಹಸ್ತಾಂತರವು ಆಸ್ಪತ್ರೆ ಹಾಗೂ ನೌಕರರಿಗೆ ಹೊಸ ನವೀನ ಅವಕಾಶಗಳನ್ನು ಸೃಷ್ಟಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.