ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ಗುರಿ ಮುಟ್ಟದ ತೆರಿಗೆ ಸಂಗ್ರಹ, ಆಸ್ತಿ ತೆರಿಗೆ ಕಟ್ಟದಿದ್ದರೆ ಸ್ವತ್ತುಗಳಿಗೆ ಬೀಗ!

Gowthami K   | Kannada Prabha
Published : Oct 31, 2026, 09:45 AM IST
Commissioner G. Jagadeesha

ಸಾರಾಂಶ

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸಿಕ ತೆರಿಗೆ ಸಂಗ್ರಹ ಕುಸಿದಿದ್ದು, ಗುರಿ ತಲುಪಲು ಅಧಿಕಾರಿಗಳಿಗೆ ಆಯುಕ್ತ ಜಿ.ಜಗದೀಶ್ ಸೂಚಿಸಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡಿರುವ 15,000 ಸ್ವತ್ತುಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಪಾವತಿಸದಿದ್ದರೆ ಬೀಗ ಜಡಿಯುವ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸಿಕ 75 ಕೋಟಿ ರು. ತೆರಿಗೆ ಸಂಗ್ರಹಿಸಬೇಕಿತ್ತು. ಆದರೆ, ಬರೀ 35 ಕೋಟಿ ರು. ಮಾತ್ರ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹಕ್ಕೆ ವೇಗ ನೀಡುವಂತೆ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೇಂದ್ರ ನಗರ ಪಾಲಿಕೆಗೆ ಪ್ರಸಕ್ತ ಸಾಲಿನಲ್ಲಿ ಅಸಾಧ್ಯ ಎನಿಸುವ 1,200 ಕೋಟಿ ರು. ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ. ಆದರೆ, ಈವರೆಗೆ ಸುಮಾರು ಶೇ.55ರಷ್ಟು ಮಾತ್ರ ಸಂಗ್ರಹವಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ತೆರಿಗೆ ಸಂಗ್ರಹದ ಕಡೆ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಿಂದಿನ ವರ್ಷಗಳ ಸಾಲಿನ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರು ಕೂಡಲೇ ಪಾವತಿಸಬೇಕು. ಇಲ್ಲದಿದ್ದರೆ ಸ್ವತ್ತುಗಳಿಗೆ ಬೀಗ ಹಾಕಲು 150 ಬೀಗಗಳನ್ನು ಕೊಡಿಸಲಾಗಿದೆ ಎಂದು ಜಗದೀಶ್ ತಿಳಿಸಿದರು.

ಮಲ್ಲೇಶ್ವರದಲ್ಲಿ ಪ್ರತಿಷ್ಠಿತ ಮಾಲ್‌ವೊಂದು ಸುಮಾರು 8 ಕೋಟಿ ರು. ತೆರಿಗೆ ಬಾಕಿ ಉ‍ಳಿಸಿಕೊಂಡಿದೆ. ಇದೇ ರೀತಿ ವಾಣಿಜ್ಯ ಕಟ್ಟಡಗಳು ಹಾಗೂ ವಸತಿ ಪ್ರದೇಶಗಳಿಂದ ಸಾಕಷ್ಟು ತೆರಿಗೆ ಸಂಗ್ರಹವಾಗಬೇಕಿದೆ. ಎಲ್ಲಾ ಸುಸ್ತಿದಾರರಿಗೆ 15 ದಿನಗಳ ಒಳಗೆ ನೋಟಿಸ್ ಜಾರಿ ಮಾಡಲು ಸೂಚಿಸಲಾಗಿದೆ. ನಂತರ ತೆರಿಗೆ ವಸೂಲಿಗೆ ಚಾಲನೆ ನೀಡಬೇಕು. ಹಿಂದಿನ ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಮಾರು 15,000 ಸ್ವತ್ತುಗಳ ಆಸ್ತಿ ತೆರಿಗೆ ಪಾವತಿ ಬಾಕಿಯಿದೆ ಎಂದು ಆಯುಕ್ತ ಜಗದೀಶ್ ತಿಳಿಸಿದ್ದಾರೆ.

ನಾಳೆ 43 ವಾರ್ಡ್‌ಗಳಲ್ಲಿ ವಾರ್ಡ್ ಒನ್ ಅಭಿಯಾನ

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 43 ವಾರ್ಡ್‌ಗಳಲ್ಲಿ ನವೆಂಬರ್ 1ರಂದು ‘ವಾರ್ಡ್ ಒನ್’ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.

ಈ ಸಂಬಂಧ ಶುಕ್ರವಾರ ನಡೆದ ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಆಯ್ಕೆಯಾದ 43 ವಾರ್ಡ್‌ಗಳಲ್ಲಿ ಸ್ವಚ್ಛತೆ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ನಗರ ಪಾಲಿಕೆ 6 ವಾರ್ಡ್‌ಗಳು, ಉತ್ತರ ನಗರ ಪಾಲಿಕೆ 7ವಾರ್ಡ್‌ಗಳು, ದಕ್ಷಿಣ ನಗರ ಪಾಲಿಕೆ12 ವಾರ್ಡ್‌ಗಳು, ಪಶ್ಚಿಮ ನಗರ ಪಾಲಿಕೆ 10 ವಾರ್ಡ್‌ಗಳು, ಪೂರ್ವ ನಗರ ಪಾಲಿಕೆ 8 ವಾರ್ಡ್‌ಗಳಲ್ಲಿ ಸ್ವಚ್ಛತೆ ಅಭಿವೃದ್ಧಿ ನಡೆಯಲಿದೆ ಎಂದರು.

ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಿದ್ಧಪಡಿಸಿರುವ ಚೆಕ್‌ಲಿಸ್ಟ್‌ಗೆ ಅನುಗುಣವಾಗಿ ಕಾರ್ಯಯೋಜನೆ ರೂಪಿಸಿಕೊಳ್ಳಬೇಕು. ಬಳಿಕ ಎಲ್ಲ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ, ಲಭ್ಯವಿರುವ ಸಂಪೂರ್ಣ ಸಿಬ್ಬಂದಿ ಸಮರ್ಪಕ ಬಳಸಿಕೊಂಡು ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಅಪರ ಆಯುಕ್ತೆ ಕವಿತಾ ರಾಜಾರಾಂ, ಲೋಖಂಡೆ ಸ್ನೇಹಲ್ ಸುಧಾಕರ್, ಎಂಜಿನಿಯರ್‌ಗಳು, ಮೆಟ್ರೋ, ಬೆಸ್ಕಾಂ, ಕೆಎಸ್‌ಆರ್‌ಟಿಸಿ, ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಕನ್ನಡ ಪುಸ್ತಕ ಹಬ್ಬ 2025 ಉದ್ಘಾಟನೆ: ಯುವ ಪೀಳಿಗೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೀಡಿದ ಕಿವಿ ಮಾತು ಏನು?
Online ಪೇಮೆಂಟ್ ರಿಜೆಕ್ಟ್, 1 AMಗೆ ಚಿಲ್ಲರೆಗಾಗಿ ರೈಡರ್ ಕಣ್ಣೀರು; ಮುಂದೆ ಕಂಡಿದ್ದು ನರಕ!