ಬೆಂಗಳೂರು ಟ್ರಾಫಿಕಲ್ಲಿ ಕಳೆವ ಸಮಯ 1 ತಿಂಗಳ ದುಡಿಮೆಗೆ ಸಮ; ಸಾವಿನ ಅಪಾಯ ಶೇ.7.5ರಷ್ಟು ಹೆಚ್ಚಳ

Published : Oct 10, 2026, 07:10 AM IST
Bengaluru Traffic

ಸಾರಾಂಶ

ಬೆಂಗಳೂರಿನ ಟ್ರಾಫಿಕ್ ದಟ್ಟಣೆಯಿಂದಾಗಿ ಉದ್ಯೋಗಿಗಳ ಒಂದು ತಿಂಗಳ ದುಡಿಮೆಯ ಸಮಯ ವ್ಯರ್ಥವಾಗುತ್ತಿದ್ದು, ಇದು ವಾರ್ಷಿಕ ವೇತನದ ಶೇ.8ರಷ್ಟು ಕಡಿತಕ್ಕೆ ಸಮವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಲ್ಲದೆ, ಟ್ರಾಫಿಕ್‌ನಿಂದಾಗಿ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಜೀವಹಾನಿ ಅಪಾಯ ಹೆಚ್ಚುತ್ತಿದೆ.

ಬೆಂಗಳೂರು: ನಗರದ ಟ್ರಾಫಿಕ್ ದಟ್ಟಣೆಯಲ್ಲಿ ವ್ಯರ್ಥವಾಗುವ ದುಡಿಯುವ ವ್ಯಕ್ತಿಯ ಸಮಯವು 1 ತಿಂಗಳ ಕೆಲಸದ ದಿನಗಳು, ದುಡಿಮೆಗೆ ಸಮನಾಗಿದೆ ಎಂದು ನಗರದ ಪ್ರಾಸ್ಪರ್ ಐಒ ಹೆಸರಿನ ತೆರಿಗೆ ಮೌಲ್ಯಮಾಪನ ಸಂಸ್ಥೆಯೊಂದು ನಡೆಸಿದ ಸರ್ವೇಯಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತಾದ ವರದಿಯನ್ನು ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸಂಸ್ಥೆ, ಟ್ರಾಫಿಕ್‌ನಲ್ಲಿ ವ್ಯರ್ಥವಾಗುವ ಸಮಯವು ಪ್ರತಿ ವರ್ಷದ ವೇತನದಲ್ಲಿ ಶೇ.8ರಷ್ಟು ವೇತನ ಕಡಿತಕ್ಕೆ ಸಮ. ಇನ್ನು ಈ ಅಮೂಲ್ಯ ಸಮಯವನ್ನು ಉಳಿಸಬೇಕು ಎಂದರೆ ಉದ್ಯೋಗಿಗಳು ಟೆಕ್ ಪಾರ್ಕ್ ಸಮೀಪದಲ್ಲೇ ವಾಸಿಸಬೇಕು. ಟೆಕ್ ಪಾರ್ಕ್ ಸಮೀಪದಲ್ಲೇ ಮನೆ ಮಾಡಬೇಕು ಎಂದರೆ ವಾರ್ಷಿಕ 1.6 ಲಕ್ಷ ರು. ನಿಂದ 2.4 ಲಕ್ಷ ರು. ಹೆಚ್ಚುವರಿಯಾಗಿ ಬಾಡಿಗೆಗಾಗಿ ವ್ಯಯಿಸಬೇಕಾಗುತ್ತದೆ ಎಂದು ಹೇಳಿದೆ.

ಸಾವಿನ ಅಪಾಯ ಶೇ.7.5ರಷ್ಟು ಹೆಚ್ಚಳ

ಬೆಂಗಳೂರು ನಗರದ ಟ್ರಾಫಿಕ್‌ ಸಮಸ್ಯೆಯು ಬಹುದೊಡ್ಡ ನಾಗರಿಕ ಸಮಸ್ಯೆಯಾಗಿರುವ ಜೊತೆಗೆ ಆರೋಗ್ಯ ಸಮಸ್ಯೆಯು ಆಗಿದೆ. ಸಮಯಕ್ಕೆ ಸರಿಯಾಗಿ ರೋಗಿಗಳು ಆಸ್ಪತ್ರೆಗೆ ತಲುಪಲಾಗದೆ ಜೀವಹಾನಿಯ ಜೊತೆಗೆ ಲಕ್ಷಾಂತರ ರು. ನಷ್ಟವಾಗುತ್ತಿದೆ. ಹೃದಯಾಘಾತವಾದವರು ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಾಗ ಪ್ರತಿ 30 ನಿಮಿಷ ವಿಳಂಬವು ಸಾವಿನ ಅಪಾಯವನ್ನು ಶೇ.7.5ರಷ್ಟು ಹೆಚ್ಚಿಸುತ್ತದೆ. ಇನ್ನು ಮೂಲಸೌಕರ್ಯಗಳ ಅದ್ವಾನದಿಂದ ಸಂಭವಿಸುವ ಅಪಘಾತಗಳ ಸಂಖ್ಯೆಯು ಹೆಚ್ಚಿದೆ. ಹೊರ ವರ್ತುಲ ರಸ್ತೆಯಲ್ಲಿ ಸಾಮರ್ಥ್ಯದ ದುಪ್ಪಟ್ಟು ವಾಹನಗಳು ಸಂಚರಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸರ್ವೇ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಉದ್ಯಮಿ ಕಿರಣ್ ಮಜುಮ್ದಾರ್ ಶಾ, ಬೆಂಗಳೂರಿನ ಸಮಸ್ಯೆಗಳನ್ನು ವಿಶ್ವಾಸಾರ್ಹ ಮತ್ತು ವೈಜ್ಞಾನಿಕ ದತ್ತಾಂಶದ ಆಧಾರದ ಮೇಲೆ ಸಂಘಟಿತವಾಗಿ ಪರಿಹರಿಸಬೇಕಾಗುತ್ತದೆ. ನಗರದ ವೇಗದ ಬೆಳವಣಿಗೆಗೆ ಅವಕಾಶ ನೀಡುವ ಧಾವಂತದಲ್ಲಿ, ದೀರ್ಘಕಾಲೀನ ಮತ್ತು ಸುಸ್ಥಿರ ಬೆಳವಣಿಗೆಗೆ ಅಗತ್ಯವಾದ ಕೆಲವು ಮೂಲಭೂತ ಹಾಗೂ ಮುಖ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವುದರಲ್ಲಿ ನಾವು ಎಡವಿದ್ದೇವೆ ಎಂದಿದ್ದಾರೆ.

ಸಂಸ್ಥೆ ತಿಳಿಸಿರುವ ಪರಿಹಾರ ಕ್ರಮಗಳು

  • ಮೆಟ್ರೋ ಕಾಮಗಾರಿಯಿಂದ ಸ್ಥಗಿತವಾಗಿರುವ ರಿಂಗ್ ರಸ್ತೆಯಲ್ಲಿನ ಪ್ರತ್ಯೇಕ ಬಸ್ ಪಥವನ್ನು ಪುನಾರಂಭಿಸಬೇಕು.
  • ಆ್ಯಂಬುಲೆನ್ಸ್‌ ಸಂಚಾರಕ್ಕೆ ಆದ್ಯತೆ ನೀಡುವ ವ್ಯವಸ್ಥೆ ಆಗಬೇಕು.
  • ನಗರದಾದ್ಯಂತ ಮೆಟ್ರೋ, ಸಬರ್ಬನ್‌ ರೈಲು ಯೋಜನೆ ಬೇಗ ಮುಗಿಸಿ ಸಂಚಾರ ಆರಂಭಿಸಬೇಕು.
  • ರಿಂಗ್ ರಸ್ತೆ ಮೆಟ್ರೋ ಸಂಚಾರ ತ್ವರಿತವಾಗಿ ಆರಂಭಿಸಬೇಕು.
  • ನಗರದ ಸಾವಿರಾರು ರಸ್ತೆ ಗುಂಡಿಗಳನ್ನು ಮುಚ್ಚಿ ಉತ್ತಮ ರಸ್ತೆ ಮೂಲಸೌಕರ್ಯ ಒದಗಿಸಬೇಕು.

PREV
Read more Articles on
click me!

Recommended Stories

ಬರಪೀಡಿತ ರೈತನಿಗೆ 2500 ರೂಪಾಯಿ ಭಿಕ್ಷೆ, ಸಚಿವ ಖರೀದಿ ಮಾಡುವ ಕಾರಿಗೆ ನೀಡುವ ಗರಿಷ್ಠ ಹಣ 31 ಲಕ್ಷಕ್ಕೆ ಏರಿಕೆ!
'ರಚಿತಾ ರಾಮ್‌ ಬರ್ತ್‌ಡೇಗೆ ಇದಕ್ಕಿಂತ ಜಾಸ್ತಿ ಜನ ಸೇರಿದ್ರು' ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆದ CJP ಬೆಂಗಳೂರು ಪ್ರೊಟೆಸ್ಟ್‌