ಬರಪೀಡಿತ ರೈತನಿಗೆ 2500 ರೂಪಾಯಿ ಭಿಕ್ಷೆ, ಸಚಿವ ಖರೀದಿ ಮಾಡುವ ಕಾರಿಗೆ ನೀಡುವ ಗರಿಷ್ಠ ಹಣ 31 ಲಕ್ಷಕ್ಕೆ ಏರಿಕೆ!

Published : Oct 09, 2026, 09:51 PM IST
karnataka-minister-car

ಸಾರಾಂಶ

ರಾಜ್ಯದಲ್ಲಿ ಭೀಕರ ಬರಗಾಲ ಹಾಗೂ ಬೆಲೆ ಏರಿಕೆಯಿಂದ ಸಾಮಾನ್ಯ ಜನತೆ ತತ್ತರಿಸಿರುವಾಗಲೇ, ಸಚಿವರು ಮತ್ತು ಶಾಸಕರ ಹೊಸ ಕಾರು ಖರೀದಿ ಮಿತಿಯನ್ನು ಸರ್ಕಾರ 31 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಈ ಹಿಂದೆ 26 ಲಕ್ಷ ರೂ. ಇದ್ದ ಮಿತಿಯನ್ನು ಪರಿಷ್ಕರಿಸಿ ಡಿಪಿಎಆರ್‌ ಆದೇಶ ಹೊರಡಿಸಿದೆ.

ಬೆಂಗಳೂರು (ಅ.9): ರಾಜ್ಯದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. 200ಕ್ಕೂ ಅಧಿಕ ತಾಲೂಕುಗಳನ್ನು ಸ್ವತಃ ಸರ್ಕಾರವೇ ಬರ ಪೀಡಿತ ಎಂದು ಘೋಷಣೆ ಮಾಡಿದೆ. ರೈತನಿಗೆ ಬರ ಬರಿಹಾರ ಎಂದು 2500 ರೂಪಾಯಿ ಹಣ ನೀಡುವುದಾಗಿಯೂ ಸರ್ಕಾರ ಘೋಷಣೆ ಮಾಡಿದ್ದು, ಅದಿನ್ನೂ ಅವರ ಅಕೌಂಟ್‌ಗೆ ಬರಬೇಕಿದೆ. ರೈತನದ್ದು ಈ ಕಥೆಯಾದರೆ ಸಾಮಾನ್ಯ ಜನರದ್ದು ಇನ್ನೂ ಶೋಚನೀಯ. ಹಾಲಿನ ಬೆಲೆ ದೀಪಾವಳಿಗೂ ಮುನ್ನ ಬರೋಬ್ಬರಿ 8 ರೂಪಾಯಿ ಏರಿಕೆ ಆಗಬಹುದು. ಅದೇ ಟೈಮ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಬರವನ್ನೂ ಏರಿಕೆ ಮಾಡಿ ಸಾಮಾನ್ಯ ಜನರನ್ನು ಏಕಕಾಲದಲ್ಲಿ ಸಮಾಧಿ ಮಾಡಬೇಕು ಎಂದು ನಿರ್ಧಾರ ಮಾಡಿ ಆಗಿದೆ. ಮುಖ್ಯಮಂತ್ರಿಗಳ ಅನುಮೋದನೆ ಮಾತ್ರವೇ ಇದಕ್ಕೆ ಬಾಕಿ ಇದೆ. ಇಷ್ಟೆಲ್ಲ ಸಂಕಷ್ಟಗಳ ಮಧ್ಯೆ ಶಾಸಕರು, ಸಂಸದರ ಜೀವನ ಮಾತ್ರ ಐಷಾರಾಮಿಯಾಗಿ ಸಾಗಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ವೈದ್ಯಕೀಯ ವೆಚ್ಚ ಎಂದು ಶಾಸಕರು ಲಕ್ಷಾಂತರ ರೂಪಾಯಿ ಹಣವನ್ನು ಸರ್ಕಾರಿ ಬೊಕ್ಕಸದಿಂದಲೇ ಖರ್ಚು ಮಾಡಿದ್ದು ಬಹಿರಂಗವಾಗಿತ್ತು. ಇದರ ನಡುವೆಯೇ ಈಗ ರಾಜ್ಯ ಸರ್ಕಾರ ಸಚಿವರು ಹಾಗೂ ಶಾಸಕರು ಖರೀದಿ ಮಾಡುವ ಕಾರಿನ ಬೆಲೆಯಲ್ಲಿ 5 ಲಕ್ಷ ರೂಪಾಯಿ ಏರಿಕೆ ಮಾಡಿದೆ. ಇಲ್ಲಿಯವರೆಗೂ 26 ಲಕ್ಷದ ರೂಪಾಯಿ ಗರಿಷ್ಠ ಬೆಲೆಯ ಕಾರನ್ನು ಇವರುಗಳು ಖರೀದಿ ಮಾಡಬಹುದಿತ್ತು. ಈಗ 31 ಲಕ್ಷಕ್ಕೆ ಏರಿಕೆ ಆಗಲಿದೆ.

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಸಚಿವರು ಹಾಗೂ ಸಂಸದರ (ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು) ಅಧಿಕೃತ ಬಳಕೆಯ ಹೊಸ ಕಾರುಗಳ ಖರೀದಿ ಬೆಲೆ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಹಿಂದೆ ನಿಗದಿಯಾಗಿದ್ದ ₹26 ಲಕ್ಷಗಳ ಗರಿಷ್ಠ ಮಿತಿಯನ್ನು ಇದೀಗ ₹31 ಲಕ್ಷಕ್ಕೆ (ಜಿಎಸ್‌ಟಿ ಒಳಗೊಂಡಂತೆ ಎಕ್ಸ್‌-ಶೋರೂಮ್ ಬೆಲೆ) ಏರಿಕೆ ಮಾಡಲಾಗಿದೆ. ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ರಾಜ್ಯ ಶಿಷ್ಟಾಚಾರ ವಿಭಾಗವು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ, ಅಂದರೆ 2022ರಲ್ಲಿ ಸಚಿವರು ಮತ್ತು ಸಂಸದರ ಕಾರು ಖರೀದಿ ಬೆಲೆ ಮಿತಿಯನ್ನು ಕೊನೆಯದಾಗಿ ಪರಿಷ್ಕರಿಸಲಾಗಿತ್ತು ಎಂದು ಸಮಜಾಯಿಷಿಯನ್ನೂ ನೀಡಿದೆ.

ಕಡಿಮೆ ಇಂಧನ ಬಳಸುವ ಕಾರುಗಳ ಆಯ್ಕೆಗೆ ಸೂಚನೆ

ಹೊಸ ಕಾರುಗಳನ್ನು ಖರೀದಿಸುವಾಗ ಸಚಿವರು ಹಾಗೂ ಸಂಸದರು ಕಡಿಮೆ ಇಂಧನ ಬಳಸುವ (High Fuel Efficiency) ಹಾಗೂ ನಿರ್ವಹಣಾ ವೆಚ್ಚ (Low Maintenance Cost) ಕಡಿಮೆಯಿರುವ ವಾಹನಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಡಿಪಿಎಆರ್‌ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದೆ. ಸರ್ಕಾರಿ ನಿಯಮಾವಳಿಗಳ ಪ್ರಕಾರ, ಸಚಿವರು ತಮ್ಮ ಅಧಿಕೃತ ಕೆಲಸಗಳಿಗಾಗಿ ನಿಯೋಜಿಸಲಾದ ವಾಹನವನ್ನು ಬಳಸಲು ನಿರ್ದಿಷ್ಟ ನಿಯಮಗಳಿವೆ. ಅದರಂತೆ, ಸರ್ಕಾರದ ಅಧಿಕೃತ ಕಾರನ್ನು 3 ವರ್ಷಗಳ ಬಳಕೆಯ ನಂತರ ಅಥವಾ, ಕಾರು 1 ಲಕ್ಷ ಕಿಲೋಮೀಟರ್ ಓಡಿದ ನಂತರ (ಯಾವುದು ಮೊದಲೋ ಅದು) ಹೊಸ ಕಾರನ್ನು ಖರೀದಿಸಲು ಅವಕಾಶವಿರುತ್ತದೆ.

ಅಧಿಕಾರಿಗಳ ವಾಹನ ಖರೀದಿ ಮಿತಿ ವಿವರ

ಇದೇ ವೇಳೆ, ಕಳೆದ 2022ರಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಹೊಸ ವಾಹನಗಳನ್ನು ಖರೀದಿಸಲು ನಿಗದಿಪಡಿಸಲಾಗಿದ್ದ ಬೆಲೆ ಮಿತಿಯ ವಿವರಗಳು ನೋಡುವುದಾದರೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು (ಕಾರ್ಯದರ್ಶಿ ಮಟ್ಟದ): ₹20 ಲಕ್ಷ ಬೆಲೆಯ ಹೊಸ ವಾಹನ ಖರೀದಿ ಮಾಡಬಹುದಾಗಿತ್ತು. ಜಿಲ್ಲಾಧಿಕಾರಿಗಳು (DC), ಜಿಲ್ಲಾ ಪಂಚಾಯತ್ ಸಿಇಒಗಳು (Zilla Panchayat CEO), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹಾಗೂ ಜಿಲ್ಲಾ ಮತ್ತು ಸಷನ್ಸ್ ನ್ಯಾಯಾಧೀಶರು: ₹18 ಲಕ್ಷ ಬೆಲೆಯ ವಾಹನ ಖರೀದಿ ಮಾಡಬಹುದು. ಸಹಾಯಕ ಆಯುಕ್ತರು (AC), ಉಪ ಪೊಲೀಸ್ ವರಿಷ್ಠಾಧಿಕಾರಿಗಳು (DySP) ಸೇರಿದಂತೆ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು: ₹12.5 ಲಕ್ಷ ಬೆಲೆಯ ವಾಹನ ಖರೀದಿಸಬಹುದು.

ಇದೀಗ ಜನಪ್ರತಿನಿಧಿಗಳ ಕಾರು ಖರೀದಿ ಮಿತಿಯನ್ನು ₹31 ಲಕ್ಷಕ್ಕೆ ಏರಿಸಿರುವುದು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ನವೀನ ತಂತ್ರಜ್ಞಾನ ಹಾಗೂ ಹೆಚ್ಚಿನ ಸುರಕ್ಷತಾ ಸೌಲಭ್ಯಗಳಿರುವ ವಾಹನಗಳನ್ನು ಖರೀದಿಸಲು ನೆರವಾಗಲಿದೆ.

PREV
Read more Articles on
click me!

Recommended Stories

'ರಚಿತಾ ರಾಮ್‌ ಬರ್ತ್‌ಡೇಗೆ ಇದಕ್ಕಿಂತ ಜಾಸ್ತಿ ಜನ ಸೇರಿದ್ರು' ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆದ CJP ಬೆಂಗಳೂರು ಪ್ರೊಟೆಸ್ಟ್‌
KPSC ಪ್ರಕರಣದಲ್ಲಿ ಮತ್ತೊಂದು ಮೇಜರ್‌ ಕ್ಲೂ; ಈ ಲೆವೆಲ್‌ಗೆ ಇಳಿದು ಅಕ್ರಮ? ಇದೆಯಾ ಎಲ್ಲರ ಪಾಲು!