KSRTC ಐರಾವತ ಕ್ಲಬ್ ಕ್ಲಾಸ್‌ನ ಐಕಾನಿಕ್ ಸ್ಲೋಗನ್ Sleep like a baby ಕಾಪಿ ಮಾಡಿದ ತಮಿಳುನಾಡು

Published : Nov 23, 2026, 10:18 AM ISTUpdated : Nov 23, 2026, 10:20 AM IST
KSRTC And SETC

ಸಾರಾಂಶ

ಕೆಎಸ್‌ಆರ್‌ಟಿಸಿಯ ಪ್ರಸಿದ್ಧ 'ಮಗುವಿನಂತೆ ನಿದ್ರಿಸಿ' ಸ್ಲೋಗನ್ ಅನ್ನು ತಮಿಳುನಾಡು ಸಾರಿಗೆ ಬಸ್‌ಗಳು ನಕಲು ಮಾಡಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಎರಡು ದಶಕಗಳ ಇತಿಹಾಸವಿರುವ ಈ ಐಕಾನಿಕ್ ಜಾಹೀರಾತನ್ನು ಕಾಪಿ ಮಾಡಿದ್ದಕ್ಕೆ ಕನ್ನಡಿಗರು ತೀವ್ರ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು (ನ.23): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಹೆಮ್ಮೆಯ 'ಐರಾವತ ಕ್ಲಬ್ ಕ್ಲಾಸ್' ಬಸ್‌ಗಳ ಮೇಲಿರುವ ಪ್ರಸಿದ್ದ "Sleep like a baby" (ಮಗುವಿನಂತೆ ನಿದ್ರಿಸಿ) ಎಂಬ ಐಕಾನಿಕ್ ಸ್ಲೋಗನ್ ಮತ್ತು ಮಗುವಿನ ನಿದ್ರೆಯ ಪರಿಕಲ್ಪನೆಯನ್ನು ತಮಿಳುನಾಡು ಸಾರಿಗೆ ಬಸ್‌ಗಳು ನಕಲು ಮಾಡಿವೆ ಎಂಬ ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ತಮಿಳುನಾಡು ಬಸ್‌ಗಳ ಮೇಲೆ Sleep like at home ಎಂಬ ಬರಹ ಕಂಡುಬಂದಿದ್ದು, ಇದು ಕೆಎಸ್‌ಆರ್‌ಟಿಸಿಯ ಜನಪ್ರಿಯ ಜಾಹೀರಾತಿನ ಯಥಾವತ್ ನಕಲು ಎಂದು ಕನ್ನಡಿಗರು ಹಾಗೂ ನೆಟ್ಟಿಗರು ಕಾಲೆಳೆದಿದ್ದಾರೆ.

ತಮಿಳುನಾಡು ಬಸ್‌ಗಳ ಮೇಲಿರುವ Sleep like at home ಎಂಬ ಕ್ಯಾಪ್ಶನ್ ಕಂಡು ನೆಟ್ಟಿಗರು ತೀವ್ರ ವ್ಯಂಗ್ಯವಾಡಿದ್ದಾರೆ. ಕೆಎಸ್‌ಆರ್‌ಟಿಸಿಯ ಪ್ರಸಿದ್ಧ ಮಗುವಿನ ಚಿತ್ರ ಮತ್ತು Sleep like a baby ಎಂಬ ಜನಪ್ರಿಯ ವಾಕ್ಯವನ್ನು ತಮಿಳುನಾಡಿನಲ್ಲಿ ತಮಿಳು ಭಾಷೆಗೆ ಅನುವಾದಿಸಿ, ನಂತರ ಅದನ್ನು ಮತ್ತೆ ಇಂಗ್ಲಿಷ್‌ಗೆ ಭಾಷಾಂತರಿಸಿ, ಕೊನೆಯಲ್ಲಿ 'ಬೇಬಿ' (Baby) ಪದವನ್ನು ತೆಗೆದು 'ಹೋಮ್' (Home) ಎಂದು ಬದಲಾಯಿಸಿದಂತಿದೆ ಎಂದು ನೆಟ್ಟಿಗರು ಕಿಚಾಯಿಸಿದ್ದಾರೆ.

'ಈ ಹಿಂದೆ ಕನ್ನಡ ಬಾವುಟ, ಈಗ ನಮ್ಮ KSRTC ಸ್ಲೋಗನ್ : ಕನ್ನಡಿಗರ ತಿರುಗೇಟು

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು, ತಮಿಳುನಾಡಿನ ಸಿನಿಮಾ ನಟರೊಬ್ಬರು ಸ್ಥಾಪಿಸಿದ ರಾಜಕೀಯ ಪಕ್ಷವೊಂದು ಈ ಹಿಂದೆ ನಮ್ಮ ಕನ್ನಡದ ಬಾವುಟವನ್ನು (ಹಳದಿ-ಕೆಂಪು) ನಕಲು ಮಾಡಿ, ಅದಕ್ಕೆ ಕೇವಲ ಮತ್ತೊಂದು ಬಣ್ಣದ ಪಟ್ಟಿಯನ್ನು ಸೇರಿಸಿಕೊಂಡಿದ್ದನ್ನು ಕನ್ನಡಿಗರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ಏನೇ ಇರಲಿ, ಎಲ್ಲಾ ಕ್ಷೇತ್ರಗಳಲ್ಲೂ ಹೊಸ ಮಾನದಂಡಗಳನ್ನು (Benchmarks) ಸೃಷ್ಟಿಸುವಲ್ಲಿ ಕರ್ನಾಟಕವು ದಾರಿದೀಪವಾಗಿ ಹೊರಹೊಮ್ಮಿದೆ. ನಮ್ಮ KSRTC, ನಮ್ಮ ನಂದಿನಿ, ನಮ್ಮ ಸಿನಿಮಾ, ನಮ್ಮ ಫುಟ್‌ಪಾತ್, ನಮ್ಮ ಉದ್ಯಾನವನ, ನಮ್ಮ ಆಸ್ಪತ್, ನಮ್ಮ ಪಬ್, ನಮ್ಮ ಶಾಲಾ-ಕಾಲೇಜು, ನಮ್ಮ ಟೆಕ್ ಪಾರ್ಕ್, ನಮ್ಮ GCC, ನಮ್ಮ AI, ನಮ್ಮ ಏರ್‌ಪೋರ್ಟ್, ನಮ್ಮ ಮೆಟ್ರೋ ಮತ್ತು ಅಂತಿಮವಾಗಿ ನಮ್ಮ ಕನ್ನಡ ಬಾವುಟ, ಎಲ್ಲದರಲ್ಲೂ ಕರ್ನಾಟಕವೇ ಮಾದರಿ. ಅವರು ಕಾಪಿ ಮಾಡುವುದಾದರೆ ಮಾಡಿಕೊಳ್ಳಲಿ, ಯಾವುದೇ ತೊಂದರೆಯಿಲ್ಲ ಇದನ್ನು ನಿರ್ಲಕ್ಷ್ಯ ಮಾಡಬೇಕು. ಆದರೆ ನಮ್ಮ ಉದಾರತೆಯನ್ನು ದುರುಪಯೋಗಪಡಿಸಿಕೊಳ್ಳಲು ಬಿಡಬಾರದು ಎಂಬ ಅಭಿಪ್ರಾಯಗಳು ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.

ಎರಡು ದಶಕಗಳ ಇತಿಹಾಸವಿರುವ KSRTC 'ಸ್ಲೀಪ್ ಲೈಕ್ ಎ ಬೇಬಿ' ಅಭಿಯಾನದ ಅಸಲಿ ಕಥೆ:

ತಮಿಳುನಾಡು ಬಸ್‌ಗಳು ನಕಲು ಮಾಡಿವೆ ಎನ್ನಲಾದ ಕೆಎಸ್‌ಆರ್‌ಟಿಸಿಯ ಈ ಐಕಾನಿಕ್ ಜಾಹೀರಾತಿಗೆ ಬರೋಬ್ಬರಿ 20 ವರ್ಷಗಳ (ಎರಡು ದಶಕಗಳ) ಭವ್ಯ ಇತಿಹಾಸವಿದೆ. ಒಂದು ಪುಟ್ಟ ಮಗುವಿನ ಪ್ರಶಾಂತ ನಿದ್ರೆ, ಒಂದು ಸ್ಟ್ರೋಲರ್ (Stroller) ಹಾಗೂ ಅತ್ಯಂತ ಸರಳವಾದ ಆಲೋಚನೆ. ಇವಿಷ್ಟೇ ಕೆಎಸ್‌ಆರ್‌ಟಿಸಿಯ ಐಷಾರಾಮಿ ಬಸ್‌ಗಳನ್ನು ರಸ್ತೆಯಲ್ಲಿ ಚಲಿಸುವ ಜಾಹೀರಾತು ಫಲಕಗಳಾಗಿ (Moving Billboard) ಪರಿವರ್ತಿಸಿದ್ದವು.

ಓಗಿಲ್ವಿ ಆಂಡ್ ಮ್ಯಾಥರ್ ಪರಿಕಲ್ಪನೆ: ಈ ಪ್ರಸಿದ್ಧ ಪ್ರಚಾರ ಅಭಿಯಾನವನ್ನು ಜಾಗತಿಕ ಜಾಹೀರಾತು ಸಂಸ್ಥೆಯಾದ 'ಓಗಿಲ್ವಿ ಆಂಡ್ ಮ್ಯಾಥರ್' (Ogilvy & Mather) ವಿನ್ಯಾಸಗೊಳಿಸಿತ್ತು. "Sleep like a baby with multi-axle comfort" (ಮಲ್ಟಿ ಆಕ್ಸಲ್ ಹಾಯಾದ ಪ್ರಯಾಣದಲ್ಲಿ ಮಗುವಿನಂತೆ ನಿದ್ರಿಸಿ) ಎಂಬುದು ಈ ಪ್ರಚಾರದ ಮೂಲ ವಾಕ್ಯವಾಗಿತ್ತು. ಕೆಎಸ್‌ಆರ್‌ಟಿಸಿಯ ಐಷಾರಾಮಿ ಮಲ್ಟಿ-ಆಕ್ಸಲ್ ಬಸ್‌ಗಳು ನೀಡುವ ಅತ್ಯುತ್ತಮ ಸಸ್ಪೆಂಷನ್ ಹಾಗೂ ಪ್ರಯಾಣಿಕರಿಗೆ ಸಿಗುವ ಆರಾಮದಾಯಕ ಅನುಭವವನ್ನು ಅತ್ಯಂತ ಸರಳವಾಗಿ ಪ್ರದರ್ಶಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಬೆಂಗಳೂರಿನ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಕೈಚಳಕ: ಮಕ್ಕಳ ಫೋಟೋಶೂಟ್‌ನಲ್ಲಿ ನಿಪುಣರಾಗಿದ್ದ ಬೆಂಗಳೂರು ಮೂಲದ ಪ್ರಸಿದ್ಧ ಕಮರ್ಷಿಯಲ್ ಫೋಟೋಗ್ರಾಫರ್ ಸೆಂಥಿಲ್ ಕುಮಾರ್ ಮುರುಗನಂದನ್ (Senthil Kumar Muruganandhan) ಅವರನ್ನು ಜಾಹೀರಾತು ಸಂಸ್ಥೆಯು ಈ ಫೋಟೋ ತೆಗೆಯಲು ಸಂಪರ್ಕಿಸಿತ್ತು. ರಸ್ತೆಯ ಬದಿಯಲ್ಲಿರುವ ಸ್ಥಿರವಾದ ಫ್ಲೆಕ್ಸ್ ಅಥವಾ ಬಿಲ್‌ಬೋರ್ಡ್‌ಗಳನ್ನು ಬಳಸುವ ಬದಲು, ಸ್ವತಃ ಬಸ್‌ಗಳನ್ನೇ ಜಾಹೀರಾತು ಮಾಧ್ಯಮವನ್ನಾಗಿ ಏಕೆ ಬಳಸಬಾರದು ಎಂಬುದು ಈ ಯೋಜನೆಯ ಮೂಲ ಆಲೋಚನೆಯಾಗಿತ್ತು ಎಂದು ಸೆಂಥಿಲ್ ಅವರು ನೆನಪಿಸಿಕೊಂಡಿದ್ದಾರೆ.

ಇತ್ತೀಚೆಗೆ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದ ವೈರಲ್ ವಿಡಿಯೋ: ಎರಡು ದಶಕಗಳ ನಂತರವೂ ಈ ಚಿತ್ರಕ್ಕೆ ಸಿಗುತ್ತಿರುವ ಅಪಾರ ಜನಪ್ರಿಯತೆಯನ್ನು ಕಂಡು ಸೆಂಥಿಲ್ ಕುಮಾರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರು ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ನ ವಿಡಿಯೋವೊಂದನ್ನು ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು; ಆ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು (Views) ಪಡೆದು ವೈರಲ್ ಆಗುವ ಮೂಲಕ 20 ವರ್ಷಗಳ ಹಿಂದಿನ ಈ ಅಭಿಯಾನದ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತ್ತು.

PREV
Read more Articles on
click me!

Recommended Stories

50 ವರ್ಷಗಳ ಬಳಿಕ ಐಐಎಂ ಬೆಂಗಳೂರು ಫರ್ಸ್ಟ್‌ ಬ್ಯಾಚ್‌ ವಿದ್ಯಾರ್ಥಿಗಳ ಪುನರ್ಮಿಲನ
ಬಿಎಂಟಿಸಿಯಲ್ಲಿ ಬರೋಬ್ಬರಿ ₹3.97 ಕೋಟಿ ಮೌಲ್ಯದ ಬಿಡಿಭಾಗಗಳ ಬೃಹತ್ ಹಗರಣ ಬಯಲು, 21 ಅಧಿಕಾರಿಗಳ ವಿರುದ್ಧ ಎಫ್‌ಐಆರ್‌