ಬೆಂಗಳೂರು ಟ್ರಾಫಿಕ್: ಬೈಕ್, ಆಟೋಗಳನ್ನ ಫ್ಲೈಓವರ್ ಮೇಲೆ ಬಿಡಿ, ಇಲ್ಲವೇ ನಮ್ಮ ರೋಡ್ ಟ್ಯಾಕ್ಸ್ ವಾಪಸ್ ಕೊಡಿ!

Published : Sep 04, 2026, 09:04 AM IST
Bengaluru Airport Flyover

ಸಾರಾಂಶ

ಬೆಂಗಳೂರಿನ ಏರ್‌ಪೋರ್ಟ್ ಎಲಿವೇಟೆಡ್ ಫ್ಲೈಓವರ್‌ನಲ್ಲಿ ದ್ವಿಚಕ್ರ ವಾಹನ, ಆಟೋ ಮತ್ತು ಲಘು ಸರಕು ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ದಿಢೀರ್ ನಿಯಮದಿಂದ ಸರ್ವೀಸ್ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದು, ಸವಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು (ಸೆ.04): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸಂಪರ್ಕಿಸುವ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಇಂದಿನಿಂದ (ಸೋಮವಾರ) ನೂತನ ಸಂಚಾರ ನಿಯಮ ಜಾರಿಗೆ ಬಂದಿದ್ದು, ವಾಹನ ಸವಾರರಿಗೆ ಭಾರೀ ಶಾಕ್ ಎದುರಾಗಿದೆ. ಫ್ಲೈಓವರ್ ಮೇಲೆ ದ್ವಿಚಕ್ರ ವಾಹನ (ಬೈಕ್), ಆಟೋರಿಕ್ಷಾ ಮತ್ತು ಲಘು ಸರಕು (ಗೂಡ್ಸ್) ವಾಹನಗಳ ಸಂಚಾರವನ್ನು ಸಂಚಾರ ಪೊಲೀಸರು ದಿಢೀರನೆ ನಿರ್ಬಂಧಿಸಿದ್ದು, ಏರ್‌ಪೋರ್ಟ್ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

ನಿಯಮಗಳ ಪ್ರಕಾರ ಬೈಕ್ ಮತ್ತು ಗೂಡ್ಸ್ ವಾಹನಗಳನ್ನು ಮೇಲ್ಸೇತುವೆ ಹತ್ತಲು ಬಿಡದ ಟ್ರಾಫಿಕ್ ಪೊಲೀಸರು, ಬ್ಯಾರಿಕೇಡ್ ಹಾಕಿ ಎಲ್ಲ ವಾಹನಗಳನ್ನು ಕೆಳಗಿನ ಸರ್ವೀಸ್ ರಸ್ತೆಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ರಸ್ತೆಯುದ್ದಕ್ಕೂ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಸವಾರರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಫ್ಲೈಓವರ್ ಪ್ರವೇಶಕ್ಕೆ ಬ್ರೇಕ್: ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿದ ಸವಾರರು!

ಫ್ಲೈಓವರ್ ಪ್ರವೇಶ ದ್ವಾರದಲ್ಲೇ ಪೊಲೀಸರು ವಾಹನಗಳನ್ನು ತಡೆದು ಕೆಳಮುಖವಾಗಿ ಕಳುಹಿಸುತ್ತಿರುವುದರಿಂದ, ಸರ್ವೀಸ್ ರಸ್ತೆಯಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗಿದೆ. ಬೆಳಗ್ಗೆಯಿಂದಲೇ ಕಚೇರಿಗಳಿಗೆ, ವಿಮಾನ ನಿಲ್ದಾಣಕ್ಕೆ ಮತ್ತು ಶಾಲಾ-ಕಾಲೇಜುಗಳಿಗೆ ತೆರಳುವ ಸಾವಿರಾರು ಸವಾರರು ರಸ್ತೆಯಲ್ಲೇ ಸಿಲುಕಿಕೊಂಡು ಪರದಾಡಿದರು.

10 ನಿಮಿಷದ ದಾರಿಗೆ 30 ನಿಮಿಷ: ಫ್ಲೈಓವರ್ ಮೇಲೆ ಹೋದರೆ ಕೇವಲ 10 ನಿಮಿಷದಲ್ಲಿ ತಲುಪುತ್ತಿದ್ದ ಸ್ಥಳಕ್ಕೆ, ಈಗ ಕೆಳ ರಸ್ತೆಯ ಸಿಗ್ನಲ್ ಮತ್ತು ಟ್ರಾಫಿಕ್‌ನಿಂದಾಗಿ ತಲುಪಲು 30 ರಿಂದ 40 ನಿಮಿಷಗಳು ಬೇಕಾಗುತ್ತಿದೆ ಎಂದು ನಿತ್ಯ ಸಂಚರಿಸುವ ಸವಾರರು ಗೋಳು ತೋಡಿಕೊಂಡಿದ್ದಾರೆ.

'ರೋಡ್ ಟ್ಯಾಕ್ಸ್ ವಾಪಸ್ ಕೊಡಿ': ಬೈಕ್ ಸವಾರರ ಗರಂ!

ಪೊಲೀಸರ ಈ ಹೊಸ ನಿಯಮಕ್ಕೆ ದ್ವಿಚಕ್ರ ವಾಹನ ಸವಾರರು ಕೆಂಡಾಮಂಡಲವಾಗಿದ್ದಾರೆ. 'ನಾವು ಹೊಸ ಬೈಕ್ ಕೊಳ್ಳುವಾಗ ಸರ್ಕಾರಕ್ಕೆ ಪೂರ್ತಿ ಲೈಫ್‌ಟೈಮ್ ರೋಡ್ ಟ್ಯಾಕ್ಸ್ (ರಸ್ತೆ ತೆರಿಗೆ) ಕಟ್ಟಿರುತ್ತೇವೆ. ಹಾಗಿದ್ದ ಮೇಲೆ ನಮ್ಮನ್ನು ರಸ್ತೆಯಿಂದ ಹೊರಗಿಡಲು ಇವರ್ಯಾರು?' ಎಂದು ವಾಹನ ಸವಾರರು ನೇರವಾಗಿ ಪ್ರಶ್ನಿಸಿದ್ದಾರೆ.'ಫ್ಲೈಓವರ್ ಮೇಲೆ ಬೈಕ್ ಮತ್ತು ಆಟೋಗಳಿಗೆ ಪ್ರವೇಶವಿಲ್ಲ ಎಂದಾದರೆ ನಾವು ಕಟ್ಟಿರುವ ರೋಡ್ ಟ್ಯಾಕ್ಸ್ ಹಣವನ್ನು ನಮಗೆ ವಾಪಸ್ ಕೊಡಿ! ಎಂದು ಆಗ್ರಹಿಸಿದ್ದಾರೆ. 10 ನಿಮಿಷದಲ್ಲಿ ಹೋಗುವ ಜಾಗಕ್ಕೆ ಅರ್ಧ ಗಂಟೆ ಜಾಮ್‌ನಲ್ಲಿ ನಿಲ್ಲಬೇಕು. ಕಚೇರಿಗೆ ತಡವಾದರೆ ಅಥವಾ ವಿಮಾನ ಮಿಸ್ ಆದರೆ ಅಧಿಕಾರಿಗಳು ಜವಾಬ್ದಾರಿ ತಗೋತಾರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸ್ ಇಲಾಖೆಯ ವಾದವೇನು?

ಫ್ಲೈಓವರ್‌ಗಳಲ್ಲಿ ಬೈಕ್ ಮತ್ತು ಆಟೋಗಳು ಅತಿ ವೇಗವಾಗಿ ಅಥವಾ ಅಜಾಗರೂಕತೆಯಿಂದ ಸಂಚರಿಸುವುದರಿಂದ ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಏರ್‌ಪೋರ್ಟ್‌ಗೆ ತೆರಳುವ ನಾಲ್ಕು ಚಕ್ರದ ವಾಹನಗಳು ಮತ್ತು ತುರ್ತು ವಾಹನಗಳ ವೇಗಕ್ಕೆ ಅಡ್ಡಿಯಾಗದಂತೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಾಫಿಕ್ ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಕೆಳ ರಸ್ತೆಯ ಗುಂಡಿಗಳನ್ನು ಮುಚ್ಚದೆ, ರಸ್ತೆ ಅಗಲೀಕರಣ ಮಾಡದೆ ಏಕಾಏಕಿ ಎಲ್ಲ ಸವಾರರನ್ನು ಸರ್ವೀಸ್ ರಸ್ತೆಗೆ ತಳ್ಳಿದರೆ ಟ್ರಾಫಿಕ್ ಸಮಸ್ಯೆ ಉಲ್ಬಣಗೊಳ್ಳುವುದೇ ವಿನಃ ಬಗೆಹರಿಯುವುದಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಗೊಂದಲ ಇನ್ನೆಷ್ಟು ದಿನ ಮುಂದುವರಿಯಲಿದೆಯೋ ಕಾದುನೋಡಬೇಕಿದೆ.

PREV
Read more Articles on
click me!

Recommended Stories

ಜಂಕ್ಷನ್‌ ಬಳಿ 103 ಬಸ್‌ ಸ್ಟಾಪ್‌ ಸ್ಥಳಾಂತರ, ಶೀಘ್ರದಲ್ಲೇ ಬಿಎಂಟಿಸಿ-ಮೆಟ್ರೋ ಎರಡಕ್ಕೂ ಒಂದೇ ಕಾರ್ಡ್‌
ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಸಿಎಂಗಳಿಗೆ ಆಹ್ವಾನ, ಏರ್‌ ಶೋ ಸೇರಿದಂತೆ ವಿವಿಧ ಕಾರ್ಯಕ್ರಮ!