
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಶಮನ ನೀಡಬಲ್ಲ ಬಹುನಿರೀಕ್ಷಿತ 'ಬೆಂಗಳೂರು ಉಪನಗರ ರೈಲು ಯೋಜನೆ' (BSRTP) ಅನುಷ್ಠಾನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಯೋಜನೆಯ ಕಾರ್ಯಾಚರಣೆಗಾಗಿ 3 ಬೋಗಿಗಳ ಸಾಮರ್ಥ್ಯದ 51 ರೇಕ್ಸ್‌ಗಳನ್ನು (ರೈಲು ಸೆಟ್) ಒದಗಿಸುವ ಸಂಬಂಧ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಹಾಗೂ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ನಡುವೆ ಅಧಿಕೃತ ಒಪ್ಪಂದ ಏರ್ಪಟ್ಟಿದೆ. ಐಸಿಎಫ್ ಪ್ರಧಾನ ವ್ಯವಸ್ಥಾಪಕ ಮನೀಶ್ ಅಗರ್ವಾಲ್ ಹಾಗೂ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.
ಕಳೆದ ಮೇ ತಿಂಗಳಲ್ಲಿ ಕೆ-ರೈಡ್ ಸಂಸ್ಥೆಯು ಐಸಿಎಫ್‌ಗೆ 153 ಹವಾನಿಯಂತ್ರಿತ (AC) ಬ್ರಾಡ್‌ಗೇಜ್ ಮೆಟ್ರೋ ಮಾದರಿಯ ಕೋಚ್‌ಗಳ ಪೂರೈಕೆಗಾಗಿ ಬೃಹತ್ ಕಾರ್ಯಾದೇಶ ನೀಡಿತ್ತು. ಸುಮಾರು ₹1,513.75 ಕೋಟಿ ಮೌಲ್ಯದ ಈ ಕೋಚ್‌ಗಳನ್ನು ಉಪನಗರ ರೈಲು ಯೋಜನೆಯ ಮಲ್ಲಿಗೆ ಮಾರ್ಗ (ಕಾರಿಡಾರ್-2) ಮತ್ತು ಕನಕ ಮಾರ್ಗದಲ್ಲಿ (ಕಾರಿಡಾರ್-4) ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಅತ್ಯಾಧುನಿಕ ಮಾದರಿಯ ಬೋಗಿಗಳ ವಿನ್ಯಾಸ, ನಿರ್ಮಾಣ, ತಪಾಸಣೆ ಹಾಗೂ ಅಳವಡಿಕೆ. ಸಂಶೋಧನೆ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯಿಂದ (RDSO) ಅಗತ್ಯ ಶಾಸನಬದ್ಧ ಅನುಮೋದನೆ ಪಡೆಯುವುದು. ಸಿಸ್ಟಮ್ ಏಕೀಕರಣ, ಕಾರ್ಯಾಚರಣೆಯ ಲಭ್ಯತೆ, ಸುಲಭ ನಿರ್ವಹಣೆ ಹಾಗೂ ಅತ್ಯುನ್ನತ ಸುರಕ್ಷತಾ ನಿಯಮಾವಳಿಗಳ ಸಂಪೂರ್ಣ ಅನುಸರಣೆ ಈ ಒಪ್ಪಂದಲ್ಲಿ ಒಳಗೊಂಡಿದೆ.
ಈ ಮಹತ್ವದ ಒಪ್ಪಂದದ ಕುರಿತು ಮಾತನಾಡಿದ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್, ಈ ಒಪ್ಪಂದವು ಬೆಂಗಳೂರು ಉಪನಗರ ರೈಲು ಯೋಜನೆಯ ವೇಗದ ಅನುಷ್ಠಾನದಲ್ಲಿ ಪ್ರಮುಖ ಘಟ್ಟವಾಗಿದೆ. ಸರಬರಾಜಾಗಲಿರುವ ಅತ್ಯಾಧುನಿಕ ರೈಲು ಬೋಗಿಗಳು ಯೋಜನೆಗೆ ಹೊಸ ಬಲ ತುಂಬಲಿದ್ದು, ನಗರದಲ್ಲಿ ಸುಸ್ಥಿರ ಹಾಗೂ ವಾತಾವರಣ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ರೂಪಿಸಲು ಸಹಕಾರಿಯಾಗಲಿವೆ. ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಉಪನಗರಗಳ ಸಂಪರ್ಕ ಸುಲಭಗೊಂಡು, ರಸ್ತೆ ಸಾರಿಗೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ಉಪನಗರ ರೈಲು ಯೋಜನೆಯ ಮಲ್ಲಿಗೆ ಹಾಗೂ ಕನಕ ಮಾರ್ಗಗಳಲ್ಲಿ ಹಳಿ ಅಳವಡಿಕೆ, ನೂತನ ರೈಲು ನಿಲ್ದಾಣಗಳ ನಿರ್ಮಾಣ ಸೇರಿದಂತೆ ಹಲವು ಸಿವಿಲ್ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಯೋಜನೆಯ ಯೋಜಿತ ವೇಳಾಪಟ್ಟಿಯಂತೆ 2028ರ ವೇಳೆಗೆ ಮಲ್ಲಿಗೆ ಮಾರ್ಗದಲ್ಲಿ ಮೊದಲ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕಾರಿಡಾರ್-1ರ ಕಾಮಗಾರಿಯನ್ನೂ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಆರಂಭಿಸಬೇಕೆಂದು ನಗರ ಸಾರಿಗೆ ತಜ್ಞರು ಸರ್ಕಾರವನ್ನು ಒತ್ತಾಯಿಸಿದ್ದಾರೆ.