ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸಲಿವೆ ಹೊಸ ರೈಲು

Published : Oct 15, 2019, 08:47 AM ISTUpdated : Oct 15, 2019, 08:49 AM IST
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸಲಿವೆ ಹೊಸ ರೈಲು

ಸಾರಾಂಶ

ಬೆಂಗಳೂರು ನಗರದ ವ್ಯಾಪ್ತಿಯ ಒಳಗೆ ಶೀಘ್ರ ಹೊಸ ರೈಲುಗಳು ಸಂಚಾರ ಮಾಡಲಿವೆ. ಕೇಂದ್ರದಿಂದ ತಿಂಗಳೊಳಗೆ ಇದಕ್ಕೆ ಒಪ್ಪಿಗೆ ದೊರೆಯಲಿದೆ. 

ಬೆಂಗಳೂರು [ಅ.15]:  ಬೆಂಗಳೂರು ಉಪನಗರ ರೈಲು ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಇನ್ನೊಂದು ತಿಂಗಳೊಳಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ಸಂಸದ ಪಿ.ಸಿ.ಮೋಹನ್‌ ತಿಳಿಸಿದರು.

ಬೆಂಗಳೂರು ವಿಭಾಗೀಯ ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಸೋಮವಾರ ನಡೆದ ಬೆಂಗಳೂರು ರೈಲ್ವೆ ವಿಭಾಗ ಮಟ್ಟದ ಸಭೆಯಲ್ಲಿ ವಿಭಾಗದ ವ್ಯಾಪ್ತಿಯಲ್ಲಿ ಕೈಗೊಂಡಿರುವ ರೈಲ್ವೆ ಕಾಮಗಾರಿ, ಯೋಜನೆಗಳು, ರೈಲು ಸಂಚಾರದ ವೇಳಾ ಪಟ್ಟಿ, ಉಪನಗರ ರೈಲು ಯೋಜನೆ, ರೈಲು ನಿಲ್ದಾಣಗಳಲ್ಲಿನ ಸೌಲಭ್ಯಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ರಾಜ್ಯ ಸರ್ಕಾರ ಕಳೆದ ಆಗಸ್ಟ್‌ನಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಪರಿಷ್ಕೃತ ಡಿಪಿಆರ್‌ ಒಪ್ಪಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಹಾಗಾಗಿ ಇನ್ನೊಂದು ತಿಂಗಳೊಳಗೆ ಕೇಂದ್ರ ಸರ್ಕಾರ ಡಿಪಿಆರ್‌ಗೆ ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದರು.

ಇನ್ನು ಸಭೆಯಲ್ಲಿ ಬೆಂಗಳೂರು-ವೈಟ್‌ಫೀಲ್ಡ್‌ ನಡುವೆ ಹೆಚ್ಚಿನ ರೈಲುಗಳನ್ನು ನಿಯೋಜಿಸುವಂತೆ ಸೂಚಿಸಿದರು. ಬೆಂಗಳೂರು-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವಿನ ಮೆಮು ರೈಲು (ರೈಲು ಸಂಖ್ಯೆ 06570/06594) ನಿಗದಿತ ಸಮಯಕ್ಕೆ ಸಂಚರಿಸುವಂತೆ ನೋಡಿಕೊಳ್ಳಬೇಕು. ವೈಟ್‌ಫೀಲ್ಡ್‌ ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಬಳಿ ನಿರ್ಮಿಸುತ್ತಿರುವ ಪಾದಚಾರಿ ಮೇಲ್ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಸದರಾದ ತೇಜಸ್ವಿ ಸೂರ್ಯ, ಜಿ.ಎಸ್‌.ಬಸವರಾಜು, ಸುಮಲತಾ, ಎಸ್‌.ಮುನಿಸ್ವಾಮಿ, ಬಿ.ಎನ್‌.ಬಚ್ಚೇಗೌಡ, ಧರ್ಮಪುರಿ ಸಂಸದ ಡಾ.ಎಸ್‌.ಸೆಂಥಿಲ್‌ ಕುಮಾರ್‌, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಸಭೆಯಲ್ಲಿ ಭಾಗವಹಿಸಿದ್ದರು. ಅಂತೆಯೆ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳು, ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.

ಸಭೆಯಲ್ಲಿ ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್‌, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
click me!

Recommended Stories

ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!