ರೇಗಿಸಿದನೆಂದು ಸ್ನೇಹಿತನನ್ನೇ ಬಡಿದು ಕೊಂದರು

Published : Oct 15, 2019, 08:12 AM IST
ರೇಗಿಸಿದನೆಂದು ಸ್ನೇಹಿತನನ್ನೇ ಬಡಿದು ಕೊಂದರು

ಸಾರಾಂಶ

ಬರ್ತಡೇ ಪಾರ್ಟಿಯಲ್ಲಿ ಸ್ನೇಹಿತನನ್ನೇ ಬಡಿದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು [ಅ.15]: ಪಾರ್ಟಿ ಮಾಡುತ್ತಿದ್ದ ವೇಳೆ ರೇಗಿಸಿದ ಎಂಬ ಕಾರಣಕ್ಕೆ ಹೋಂ ಗಾರ್ಡ್‌ ಸೇರಿ ಇಬ್ಬರು ಆರೋಪಿಗಳು ಸ್ನೇಹಿತನನ್ನು ದೊಣ್ಣೆ ಬಡಿದು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕೋಣನಕುಂಟೆಯ ದೊಡ್ಡಲ್ಲಾಳಸಂದ್ರ ನಿವಾಸಿ ಸುಹಾಸ್‌ (35) ಮೃತ ದುರ್ದೈವಿ. ಘಟನೆ ಸಂಬಂಧ ಕೊಲೆ ಆರೋಪಿಗಳಾದ ಜೆ.ಪಿ.ನಗರ ಠಾಣೆಯ ಹೋಂ ಗಾರ್ಡ್‌ ಚಂದ್ರಮೂರ್ತಿ(28) ಹಾಗೂ ನವೀನ್‌(30) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಂದ್ರಮೂರ್ತಿ ಮತ್ತು ನವೀನ್‌ ಅಂಜನಾಪುರ ನಿವಾಸಿಗಳಾಗಿದ್ದಾರೆ. ಚಂದ್ರಮೂರ್ತಿ ಕಳೆದ ನಾಲ್ಕೈದು ವರ್ಷಗಳಿಂದ ಜೆ.ಪಿ.ನಗರ ಠಾಣೆಯ ಹೋಂ ಗಾರ್ಡ್‌ ಆಗಿದ್ದ. ಗೂಡ್ಸ್‌ ಆಟೋ ಚಾಲಕನಾಗಿದ್ದ ನವೀನ್‌ನನ್ನು ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ಮೃತ ಸುಹಾಸ್‌ ಕ್ಯಾಬ್‌ ಚಾಲಕನಾಗಿದ್ದು, ಮೂಲತಃ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಮ್ಮಳ್ಳಿದೊಡ್ಡಿಯವರಾಗಿದ್ದಾನೆ. ಅವಿವಾಹಿತನಾಗಿದ್ದ ಸುಹಾಸ್‌ ಎರಡು ವರ್ಷಗಳಿಂದ ತಾಯಿ ಮತ್ತು ಸಹೋದರನ ಜತೆ ನಗರದಲ್ಲಿ ನೆಲೆಸಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ನೇಹಿತರಾದ ಸುಹಾಸ್‌, ಚಂದ್ರಮೂರ್ತಿ, ನವೀನ್‌ ಹಾಗೂ ಮೋಹನ್‌ ಭಾನುವಾರ ಮಧ್ಯಾಹ್ನ ಅಂಜನಾಪುರ 5ನೇ ಕ್ರಾಸ್‌ನ 3ನೇ ಮುಖ್ಯರಸ್ತೆಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ನಗರದ ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದಾರೆ. ಎಂಟು ಗಂಟೆವರೆಗೆ ಎಲ್ಲರೂ ಒಟ್ಟಿಗೆ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಮದ್ಯ ಸೇವನೆ ವೇಳೆ ಸುಹಾಸ್‌, ನವೀನ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದ ವಿಷಯ ಪ್ರಸ್ತಾಪಿಸಿ ರೇಗಿಸಿದ್ದ. ಈ ವಿಚಾರಕ್ಕೆ ನವೀನ್‌, ಚಂದ್ರಮೂರ್ತಿ ಹಾಗೂ ಸುಹಾಸ್‌ ನಡುವೆ ಜಗಳ ನಡೆದಿದೆ. 

ಜಗಳ ವಿಕೋಪಕ್ಕೆ ಹೋಗಿದ್ದು, ಅಲ್ಲಿಯೇ ಇದ್ದ ದೊಣ್ಣೆಯಿಂದ ಮೂವರು ಒಡೆದಾಡಿದ್ದಾರೆ. ಸುಹಾಸ್‌ಗೆ ಬಲವಾದ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಜಗಳ ಬಿಡಿಸಲು ಯತ್ನಿಸಿದ ಮೋಹನ್‌ಗೂ ಕೂಡ ಘಟನೆಯಲ್ಲಿ ಗಾಯಗಳಾಗಿವೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

PREV
click me!

Recommended Stories

ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?
ಏಷ್ಯಾನೆಟ್ ಸುವರ್ಣನ್ಯೂಸ್ ಸಿಬ್ಬಂದಿ ಲಲಿತಮ್ಮ ಸಾವು; ಟ್ರಕ್ ಚಕ್ರ ತಲೆ ಮೇಲೆ ಹರಿದು ಭೀಕರ ಅಂತ್ಯ