
ಬೆಂಗಳೂರು (ಆ.12): ಸುಮಾರು ಮೂರು ದಶಕಗಳಷ್ಟು ಹಳೆಯದಾದ, ರಾಜಧಾನಿ ಬೆಂಗಳೂರಿನ ಪ್ರಥಮ ಮೇಲ್ಸೇತುವೆ ಎಂಬ ಹೆಗ್ಗಳಿಕೆ ಹೊಂದಿರುವ ಸಿರ್ಸಿ ಸರ್ಕಲ್ ಫ್ಲೈಓವರ್ (ಅಧಿಕೃತವಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ) ಆರು ವರ್ಷಗಳ ಸುದೀರ್ಘ ವಿರಾಮದ ನಂತರ ಕೊನೆಗೂ ಬೃಹತ್ ನಿರ್ವಹಣೆ ಮತ್ತು ಅಪ್‌ಡೇಟ್‌ಗೆ ಸಜ್ಜಾಗಿದೆ. ನಗರದ ಅತ್ಯಂತ ಜನನಿಬಿಡ ಜಂಕ್ಷನ್‌ಗಳಲ್ಲಿ ಒಂದಾದ ಈ ಮಾರ್ಗದಲ್ಲಿ ನಿರಂತರ ಸಂಚಾರ ಕಲ್ಪಿಸುತ್ತಿರುವ ಈ ಮೇಲ್ಸೇತುವೆಯ ಡಾಂಬರೀಕರಣ, ರ‍್ಯಾಂಪ್, ಕಾಂಕ್ರೀಟ್ ಬೇರಿಂಗ್ ಹಾಗೂ ಎಕ್ಸ್‌ಪ್ಯಾನ್ಷನ್ ಜಾಯಿಂಟ್ ಸೇರಿದಂತೆ ಇಡೀ ಮೇಲ್ಸೇತುವೆಗೆ ಸಂಪೂರ್ಣ ಕಾಯಕಲ್ಪ ನೀಡಲು ಯೋಜನೆ ರೂಪಿಸಲಾಗಿದೆ.
ಮೇಲ್ಸೇತುವೆಯ ಮೇಲಿನ ಡಾಂಬರು ಪದರ ಸಂಪೂರ್ಣವಾಗಿ ಹಾನಿಗೊಳಗಾಗಿರುವುದು, ಭಾರಿ ಮಳೆಯ ಸಂದರ್ಭದಲ್ಲಿ ನೀರು ನಿಲ್ಲುವುದು, ಚರಂಡಿಗಳು ಬ್ಲಾಕ್ ಆಗಿರುವುದು ಹಾಗೂ ಮೂಲೆ-ಮೂಲೆಗಳಲ್ಲಿ ಗಿಡ-ಗಂಟಿಗಳು ಬೆಳೆದಿರುವ ಬಗ್ಗೆ ದಿನನಿತ್ಯ ಸಂಚರಿಸುವ ವಾಹನ ಸವಾರರಿಂದ ಸಾಲು ಸಾಲು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ನಿರ್ವಹಣಾ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಬೃಹತ್ ಕಾಮಗಾರಿಗೆ ಸಂಬಂಧಿಸಿದಂತೆ 'ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್' (BCCC) ಯೋಜನಾ ವರದಿ (DPR) ಸಿದ್ಧಪಡಿಸುತ್ತಿದ್ದು, ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭದ ವೇಳೆಗೆ ಇದು ಸಿದ್ಧವಾಗುವ ನಿರೀಕ್ಷೆಯಿದೆ. ಈ ನವೀಕರಣ ಯೋಜನಾ ವೆಚ್ಚಕ್ಕಾಗಿ ಪಾಲಿಕೆಯು 9.6 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ BCCC ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್, "ಈ ಮೇಲ್ಸೇತುವೆಗೆ ಕೊನೆಯದಾಗಿ 2020ರಲ್ಲಿ ಡಾಂಬರೀಕರಣ ಹಾಗೂ ಪ್ರಮುಖ ನಿರ್ವಹಣಾ ಕಾಮಗಾರಿಗಳನ್ನು ನಡೆಸಲಾಗಿತ್ತು. ಅದಾಗಿ ಆರು ವರ್ಷಗಳು ಕಳೆದಿರುವುದರಿಂದ ಡಾಂಬರು ಪದರವು ಹಾಳಾಗಿದ್ದು, ಅದನ್ನು ಸಂಪೂರ್ಣವಾಗಿ ನವೀಕರಿಸುವ ಅಗತ್ಯವಿದೆ" ಎಂದು ತಿಳಿಸಿದ್ದಾರೆ.
1998ರಲ್ಲಿ ಉದ್ಘಾಟನೆಗೊಂಡ 2.65 ಕಿಲೋಮೀಟರ್ ಉದ್ದದ ಈ ಸಿರ್ಸಿ ಸರ್ಕಲ್ ಮೇಲ್ಸೇತುವೆಯು ನಗರದ ಅತ್ಯಂತ ಹಳೆಯ ಮೇಲ್ಸೇತುವೆಗಳಲ್ಲಿ ಒಂದಾಗಿದ್ದು, ಮಧ್ಯ ಬೆಂಗಳೂರು ಮತ್ತು ಮೈಸೂರು ರಸ್ತೆ ಕಾರಿಡಾರ್ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮಾರ್ಗದ ಸಂಚಾರ ದಟ್ಟಣೆ ಹಾಗೂ ಪ್ರಾಮುಖ್ಯತೆಯನ್ನು ಪರಿಗಣಿಸಿ, ಕಾಮಗಾರಿಯ ಅವಧಿಯಲ್ಲಿ ಫ್ಲೈಓವರ್ ಅನ್ನು ಸಂಪೂರ್ಣವಾಗಿ ಬಂದ್ ಮಾಡದಿರಲು ನಿರ್ಧರಿಸಲಾಗಿದ್ದು, ಹಂತ-ಹಂತವಾಗಿ ಕೆಲಸ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ.
"ಇನ್ನು ಕೆಲವೇ ವಾರಗಳಲ್ಲಿ ವಿಸ್ತೃತ ಯೋಜನಾ ವರದಿ (DPR) ಸಿದ್ಧವಾಗಲಿದೆ. ಅದಕ್ಕೆ ಅನುಮೋದನೆ ಸಿಕ್ಕ ತಕ್ಷಣ, ಪ್ರಸ್ತುತ ಇರುವ ಹಳೆಯ ಡಾಂಬರು ಪದರವನ್ನು ತಗೆದು (Milling), ಆ ಬಳಿಕ ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತದೆ. ಮೇಲ್ಸೇತುವೆಯ ಎಲ್ಲಾ ಎಕ್ಸ್‌ಪ್ಯಾನ್ಷನ್ ಜಾಯಿಂಟ್‌ಗಳು ಮತ್ತು ಬೇರಿಂಗ್‌ಗಳನ್ನು ಬದಲಾಯಿಸಲಾಗುವುದು. ಜೊತೆಗೆ, ಕೆಲವೆಡೆ ಬೆಳೆದಿರುವ ಗಿಡ-ಗಂಟಿಗಳನ್ನು ತೆರವುಗೊಳಿಸಿ, ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಅನುಬಂಧಿತ ನಿರ್ವಹಣಾ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು" ಎಂದು ಹರಿದಾಸ್ ವಿವರಿಸಿದ್ದಾರೆ.
ಕಾಮಗಾರಿ ಆರಂಭಗೊಂಡ ನಂತರ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಯಾವುದೇ ಹಂತದಲ್ಲೂ ಮೇಲ್ಸೇತುವೆಯನ್ನು ಸಂಪೂರ್ಣವಾಗಿ ಬಂದ್ ಮಾಡುವುದಿಲ್ಲ. ಕಾಮಗಾರಿ ನಡೆಯುವ ಇಡೀ ಅವಧಿಯಲ್ಲಿ ಮೇಲ್ಸೇತುವೆಯ ಒಂದು ಬದಿಯನ್ನು ವಾಹನ ಸಂಚಾರಕ್ಕೆ ಮುಕ್ತವಾಗಿಡಲಾಗುತ್ತದೆ. ಈ ಹಂತ-ಹಂತದ ಯೋಜನೆಯಿಂದಾಗಿ ಅತ್ಯಂತ ಜನನಿಬಿಡವಾಗಿರುವ ಈ ರಸ್ತೆ ಕಾರಿಡಾರ್‌ನಲ್ಲಿ ವಾಹನ ಸವಾರರಿಗೆ ಆಗುವ ಕಿರಿಕಿರಿ ಹಾಗೂ ಸಂಚಾರ ವ್ಯತ್ಯಯವನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.