ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಅಪಾಯದ ಸ್ಥಿತಿಯಲ್ಲಿದೆ: ಸಿದ್ದರಾಮಯ್ಯ

Kannadaprabha News   | Asianet News
Published : Jan 27, 2020, 10:11 AM IST
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಅಪಾಯದ ಸ್ಥಿತಿಯಲ್ಲಿದೆ: ಸಿದ್ದರಾಮಯ್ಯ

ಸಾರಾಂಶ

ಸಂವಿಧಾನ ಉಳಿಸಲು ಹೋರಾಡಿ: ಕಾಂಗ್ರೆಸ್‌ ಮುಖಂಡರಿಂದ ಕರೆ| ಬಿಜೆಪಿಯಿಂದ ಸಂವಿಧಾನ ಬದಲಾವಣೆಗೆ ಯತ್ನದಿಂದ ಆತಂಕ ಸೃಷ್ಟಿ| ಕೇಂದ್ರ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾನೂನುಗಳನ್ನು ರೂಪಿಸುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ|

ಬೆಂಗಳೂರು(ಜ.27): ಮನುವಾದದ ಮೇಲೆ ಮಾತ್ರ ನಂಬಿಕೆ ಇಟ್ಟಿರುವ ಬಿಜೆಪಿಯವರು ಸಂವಿಧಾನದ ಬದಲಾವಣೆಗೆ ಯತ್ನಿಸುತ್ತಿದ್ದು, ದೇಶದಲ್ಲಿ ಅಪಾಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸಂವಿಧಾನ ಉಳಿಸಲು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ಎಂದು ಹೆಸರು ಮಾಡಿರುವ ದೇಶದ ಸಂವಿಧಾನವನ್ನು ಮನುವಾದ ನಂಬಿರುವ ಬಿಜೆಪಿ ವಿರೋಧಿಸುತ್ತಿದೆ. ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡುತ್ತಿದ್ದಾರೆ. ಹೀಗಾಗಿ ನಾವೆಲ್ಲಾ ಒಂದಾಗಿ ಸಂವಿಧಾನ ಉಳಿವಿಗೆ ಹೋರಾಟ ಮಾಡಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಅಪಾಯದ ಸ್ಥಿತಿಯಲ್ಲಿದೆ. ಕೇಂದ್ರ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾನೂನುಗಳನ್ನು ರೂಪಿಸುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ದೊಡ್ಡ ಸವಾಲಿದೆ: ಖರ್ಗೆ

ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಂವಿಧಾನವನ್ನು ತೆಗೆದು ಹಾಕಲು ಆರ್‌ಎಸ್‌ಎಸ್‌ ಯೋಜನೆಗಳನ್ನು ರೂಪಿಸಿದೆ. ಇದರಿಂದ ಸಂವಿಧಾನವನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಹಾಗೂ ಸವಾಲು ನಮ್ಮ ಮುಂದಿದೆ. ಧರ್ಮದ ರಾಜಕೀಯಕ್ಕಾಗಿ ಸಂವಿಧಾನವನ್ನು ಬದಲಿಸಲು ಹಾಗೂ ಬಡವರಿಗೆ, ದಲಿತರಿಗೆ ರಕ್ಷಣೆ ನೀಡುತ್ತಿರುವ ಸಂವಿಧಾನವನ್ನೇ ತೆಗೆಯಲು ಬಿಜೆಪಿ ಹೊರಟಿದೆ, ಹೀಗಾಗಿ ಎಲ್ಲ ಸಂಘಟನೆಗಳು ಸಂವಿಧಾನದ ರಕ್ಷಣೆಗೆ ಒಟ್ಟಾಗಿ ಹೋರಾಟ ಮಾಡಬೇಕಿದೆ, ಸಮಾಜ ವಿಭಜಿಸಲು ತಂದಿರುವ ಸಿಎಎ, ಎನ್‌ಆರ್‌ಸಿ ವಿರುದ್ದವೂ ಹೋರಾಟ ಮಾಡಬೇಕಿದೆ. ಹೋರಾಟಗಳನ್ನು ಹಿಂಸಾತ್ಮಕಗೊಳಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನೂ ಖಂಡಿಸಬೇಕಿದೆ ಎಂದು ಕರೆ ನೀಡಿದರು.

ಪ್ರಧಾನಿ ಮೋದಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿ ನಿರುದ್ಯೋಗ ಸೃಷ್ಟಿಮಾಡಿದ್ದಾರೆ. ಜಿಡಿಪಿ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಯುವಕರು, ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಜನ ರೊಚ್ಚಿಗೆದ್ದಿದ್ದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿ.ಎಸ್‌.ಯಡಿಯೂರಪ್ಪ ಅವರ ಸರ್ಕಾರ ಹಾಗೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಶಾಪವಾಗಿ ಬದಲಾಗಿದೆ. ಸಾಲಮನ್ನಾಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಲು ಸೂಚನೆ ಕೊಡುತ್ತದೆ. ರೈತರಿಗೆ ನೀಡಬೇಕಿರುವ ಪರಿಹಾರ, ನೆರೆ ಸಂತ್ರಸ್ತರ ಪರಿಹಾರ ಸೇರಿ ಯಾವುದನ್ನೂ ನೀಡುತ್ತಿಲ್ಲ. ಇಂತಹ ಸರ್ಕಾರ ಜನರಿಗೆ ಶಾಪ ಎಂದು ಕೆಪಿಸಿಸಿ ಅಧ್ಯಕ್ಷ. ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 
 

PREV
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ