'ವಿಧಾನಸೌಧ ಮುಂದೆ ಗಣರಾಜ್ಯೋತ್ಸವ ಆಚರಣೆ ಇಲ್ಲ’

By Kannadaprabha NewsFirst Published Jan 16, 2020, 8:39 AM IST
Highlights

ಕಾಲಾವಕಾಶ ಕಡಿಮೆ ಇರುವುದರಿಂದ ಪ್ರಸ್ತುತ ವರ್ಷ ಮಾಣಿಕ್‌ಷಾ ಮೈದಾನದಲ್ಲೇ ಗಣರಾಜ್ಯೋತ್ಸವ: ಆಯುಕ್ತ| ವಿಧಾನಸೌಧದ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆಯ ಪ್ರಸ್ತಾವನೆ| ಮೊದಲ ಬಾರಿಗೆ ವಿಧಾನಸೌಧದ ಮುಂಭಾಗ ಆಚರಣೆ ಮಾಡುವುದಕ್ಕೆ ಸಿದ್ಧತೆಗೆ ಸ್ವಲ್ಪ ಹೆಚ್ಚಿನ ಕಾಲಾವಕಾಶ ಬೇಕು|

ಬೆಂಗಳೂರು(ಜ.16): ದೆಹಲಿಯ ಕೆಂಪುಕೋಟೆಯ ಮುಂಭಾಗ ಜ.26ರಂದು ಗಣರಾಜ್ಯೋತ್ಸವ ಆಚರಿಸುವ ರೀತಿಯಲ್ಲಿ ವಿಧಾನಸೌಧದ ಆವರಣದಲ್ಲಿ ಆಚರಿಸುವ ಪ್ರಸ್ತಾವನೆ ಇತ್ತಾದರೂ ಕಾಲಾವಕಾಶ ಕಡಿಮೆ ಇರುವುದರಿಂದ ಪ್ರಸಕ್ತ ವರ್ಷ ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿಯೇ ಗಣರಾಜ್ಯೋತ್ಸವ ಆಚರಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಧಾನಸೌಧದ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಪ್ರಸ್ತಾವನೆ ಬಂದಿತ್ತು. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೂ ಚರ್ಚೆ ನಡೆಸಲಾಗಿತ್ತು. ಆದರೆ, ಈ ವರ್ಷ ಗಣರಾಜ್ಯೋತ್ಸವಕ್ಕೆ ಕೆಲವೇ ದಿನ ಬಾಕಿ ಇರುವುದರಿಂದ ವಿಧಾನಸೌಧದ ಮುಂಭಾಗ ಅಗತ್ಯ ಸಿದ್ಧತೆ ಅಸಾಧ್ಯ ಎಂಬ ಕಾರಣಕ್ಕೆ ಪ್ರತಿ ವರ್ಷದಂತೆ ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿ ಆಚರಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೆಹಲಿಯ ಕೆಂಪುಕೋಟೆಯ ಮುಂಭಾಗ ಗಣರಾಜ್ಯೋತ್ಸವ ಆಚರಿಸುವ ರೀತಿ ಮುಂದಿನ ವರ್ಷದಿಂದ ವಿಧಾನಸೌಧದ ಆವರಣದಲ್ಲಿ ಆಚರಣೆಗೆ ಪೂರ್ವ ತಯಾರಿ ಮಾಡಿಕೊಳ್ಳಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ ಮಾತನಾಡಿ, ಈಗಾಗಲೇ ಮಾಣಿಕ್‌ ಷಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿದ್ಧತೆ ಸಹ ಆರಂಭಿಸಲಾಗಿದೆ. ಮೊದಲ ಬಾರಿಗೆ ವಿಧಾನಸೌಧದ ಮುಂಭಾಗ ಆಚರಣೆ ಮಾಡುವುದಕ್ಕೆ ಸಿದ್ಧತೆಗೆ ಸ್ವಲ್ಪ ಹೆಚ್ಚಿನ ಕಾಲಾವಕಾಶ ಬೇಕಾಗಲಿದೆ. ವಿಧಾನಸೌಧದ ಆವರಣದಲ್ಲಿ ವಾಹನ ಸಂಚಾರ ಬದಲಾವಣೆ ಮಾಡಬೇಕಾಗುತ್ತದೆ. ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಕ್ಕೆ ಸ್ಥಳಾವಕಾಶ, ಸಾರ್ವಜನಿಕರ ಪ್ರವೇಶ, ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ, ವಿಧಾನಸೌಧದ ಮುಂಭಾಗ ಗಣರಾಜ್ಯೋತ್ಸವ ಆಚರಣೆಯ ಪ್ರಸ್ತಾವನೆ ಈ ವರ್ಷ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
 

click me!