
ಬೆಂಗಳೂರು: ರಾಜಧಾನಿಯ ಗೊರಗುಂಟೆಪಾಳ್ಯ ಸಿಗ್ನಲ್‌ನಲ್ಲಿ ಉಂಟಾಗುವ ಟ್ರಾಫಿಕ್ ನಿವಾರಣೆಗೆ ಬೆಂಗಳೂರು ಪಶ್ಚಿಮ ನಗರ ಕಾರ್ಪೋರೇಷನ್ ಮಹತ್ವದ ಹೆಜ್ಜೆಯನ್ನಿರಿಸಿದೆ. ಆದ್ರೆ ಕಾರ್ಪೋರೇಷನ್‌ನ ಈ ಕೆಲಸದಿಂದ ಯಾವುದೇ ಟ್ರಾಫಿಕ್ ಪ್ರಮಾಣ ಕಡಿಮೆಯಾಗಲ್ಲ ಎಂಬ ಮಾತುಗಳು ಆರಂಭದಿಂದಲೇ ಕೇಳಿ ಬರುತ್ತಿವೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಎರಡು ಸ್ಥಳಗಳಲ್ಲಿ ರಸ್ತೆ ವಿಸ್ತರಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ರಸ್ತೆ ವಿಸ್ತರಣೆಯು ದೇವಾಲಯ, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಶೌಚಾಲಯದ ಸ್ಥಳಾಂತರವನ್ನು ಒಳಗೊಂಡಿದೆ
ಈ ಪ್ರಮುಖ ಮೂರು ಸ್ಥಳಗಳ ಸ್ಥಳಾಂತರದಿಂದ ಕೊಂಚಮಟ್ಟಿಗೆ ಟ್ರಾಫಿಕ್ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಮತ್ತೊಂದೆಡೆ ಗೋದ್ರೇಜ್ ಪ್ರಾಪರ್ಟೀಸ್ ಜಂಕ್ಷನ್ ನೀಡಿರುವ ಭೂಮಿಯನ್ನು ಬಳಸಿಕೊಂಡು ರಸ್ತೆ ಅಗಲೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನೊಂದು ಬದಿಯಲ್ಲಿ ತಾಜ್ ಹೋಟೆಲ್ ಪುನಾರಭಿವೃದ್ದಿ ಸಮಯದಲ್ಲಿ ಬಿಟ್ಟುಕೊಟ್ಟ ಭೂಮಿಯನ್ನು ಬಳಸಿಕೊಂಡು ಜಾಲಹಳ್ಳಿಯಿಂದ ನಗರದ ಕಡೆ ಬರುವ ಎಡಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.
ಪುನಾರಭಿವೃದ್ದಿ ಸಮಯದಲ್ಲಿ ಭೂಮಾಲೀಕರು ನೀಡಿರುವ ಭೂಮಿಯನ್ನು ಮರಳಿ ಪಡೆಯುವ ಪ್ರಯತ್ನದ ಭಾಗವಾಗಿ ಸದ್ಯ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇದುವರೆಗೂ ಈ ಭೂಮಿಯನ್ನು ಪಾಲಿಕೆ ವಶಕ್ಕೆ ಪಡೆದುಕೊಂಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಇಐ ಜಂಕ್ಷನ್‌ನಿಂದ ಗೊರಗುಂಟೆಪಾಳ್ಯ ಜಂಕ್ಷನ್ ನಡುವೆ ಹಲವು ಆಸ್ತಿಗಳಿದ್ದು, ಯೋಜನಾ ಅನುಮೋದನೆಯನ್ನು ಪಡೆದುಕೊಳ್ಳುವಾಗ ಭೂಮಿಯನ್ನು ಬಿಟ್ಟುಕೊಡಲಾಗಿತ್ತು. ಆದ್ರೆ ಇಲ್ಲಿಯವರೆಗೆ ಪಾಲಿಕೆ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರಲಿಲ್ಲ. ಇದೀಗ ಅಂತಹ ಭೂಮಿಯನ್ನು ಮರಳಿ ಪಡೆಯಲಾಗುತ್ತಿದೆ. ಹಾಗೆಯೇ ನಾಗಸಂದ್ರ-ಬ್ರೌಂಡ್ ಬ್ಯಾರೇಜ್ ಬಳಿಯಲ್ಲಿರುವ ಭೂಮಿ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಕಾರ್ ಶೋರೂಂ ಮತ್ತು ಆಸ್ಪತ್ರೆಯೊಂದು ಸಹ ಇದೇ ರೀತಿಯಾಗಿ ಭೂಮಿಯನ್ನು ನೀಡಿದೆ ಎಂದು ನಿಗಮದ ಇಂಜಿನೀಯರ್ ಒಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಸ್ಥಳವಕಾಶ ಹೆಚ್ಚುವರಿ ಲೇನ್ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಪ್ರಯಾಣಿಕಾರಿಗೆ ನಿಲುಗಡೆ ಸ್ಥಳದ ನಿರ್ಮಾಣವನ್ನು ಮಾಡಬಹುದಾಗಿದೆ. ಪ್ರತ್ಯೇಕ ಬಸ್ ಬೇ ರಚನೆ, ಹೆಚ್ಚು ಟ್ರಾಫಿಕ್ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣದ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆದಿದೆ. ಆದ್ರೆ ಸಾರ್ವಜನಿಕರು ಸ್ಕೈವಾಕ್ ಬಳಸದಿರೋದು ಹಿನ್ನಡೆಗೆ ಕಾರಣವಾಗಬಹುದು.
ಇದನ್ನೂ ಓದಿ: ಬೆಂಗಳೂರು ಪಂಚರ್ ಮಾಫಿಯಾ: ರಸ್ತೆಯಲ್ಲಿ ಮೊಳೆ ಹಾಕುವಾಗಲೇ ಸಿಕ್ಕಿಬಿದ್ದ ಕಿಡಿಗೇಡಿಗಳು, CCTVಯಲ್ಲಿ ಲಾಕ್!
ಗೋದ್ರೇಜ್ ಪ್ರಾಪರ್ಟೀಸ್ ಬಿಟ್ಟುಕೊಟ್ಟ ಜಾಗದಲ್ಲಿ ಹೊಸ ಲೇನ್ ನಿರ್ಮಿಸುವ ಕೆಲಸ ತಕ್ಷಣದಿಂದಲೇ ಆರಂಭವಾಗಲಿದೆ. ಹಾಗೆಯೇ ತಾಜ್ ಹೋಟೆಲ್ ನೀಡಿರುವ ಭೂಮಿಯನ್ನು ಮತ್ತೊಂದು ಲೇನ್‌ಗೆ ಜೋಡಿಸಲು ಯೋಚನೆ ಮಾಡಲಾಗುತ್ತಿದೆ. ಇದರಿಂದ ಬಸ್ ಸೇರಿದಂತೆ ದೊಡ್ಡವಾಹನಗಳು ತಿರುವಿನಲ್ಲಿ ಸುಲಭವಾಗಿ ಚಲಿಸಬಹುದಾಗಿದೆ ಎಂದು ಬೆಂಗಳೂರು ಪಶ್ಚಿಮ ನಗರದ ಆಯುಕ್ತ ಕೆ.ವಿ.ರಾಜೇಂದ್ರ ಹೇಳಿದ್ದಾರೆ.