ರಿಂಗ್‌ ರೋಡ್‌ ಶುಭಾಗೆ ಇಂದು ಸಚಿವ ಸಂಪುಟದಿಂದ ಶುಭ ಸುದ್ದಿ? ಕ್ಷಮಾದಾನ ಅರ್ಜಿಯ ಬಗ್ಗೆ ನಿರ್ಧಾರ

Published : Oct 15, 2026, 10:33 AM IST
ring road shubha case

ಸಾರಾಂಶ

2003ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಿಂಗ್ ರೋಡ್ ಶುಭಾ ಪ್ರಕರಣದ ನಾಲ್ವರು ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದೀಗ ಆರೋಪಿಗಳು ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ಬಗ್ಗೆ ರಾಜ್ಯ ಸಚಿವ ಸಂಪುಟ ಕೈಗೊಳ್ಳಲಿರುವ ಅಂತಿಮ ನಿರ್ಧಾರದ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.

ಬೆಂಗಳೂರು (ಅ.15): ರಾಜಧಾನಿ ಬೆಂಗಳೂರಿನ ಅಪರಾಧ ಇತಿಹಾಸದಲ್ಲೇ ಅತ್ಯಂತ ಸಂಚಲನ ಮೂಡಿಸಿದ್ದ 2003ರ 'ರಿಂಗ್ ರೋಡ್ ಶುಭಾ' (Ring Road Shubha Case) ಪ್ರಕರಣವು ಇದೀಗ ಮತ್ತೆ ರಾಜ್ಯದ ಗಮನ ಸೆಳೆದಿದೆ. ಪ್ರಕರಣದ ಪ್ರಮುಖ ಆರೋಪಿ ಶುಭಾ ಶಂಕರನಾರಾಯಣ ಸೇರಿದಂತೆ ನಾಲ್ವರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ, ಸಲ್ಲಿಕೆಯಾಗಿರುವ 'ಕ್ಷಮಾದಾನ' (Mercy Petition) ಅರ್ಜಿಯ ಕುರಿತು ರಾಜ್ಯ ಸಚಿವ ಸಂಪುಟ ಕೈಗೊಳ್ಳಲಿರುವ ನಿರ್ಧಾರದತ್ತ ಎಲ್ಲರ ಕುತೂಹಲ ನೆಟ್ಟಿದೆ. 2003 ರಲ್ಲಿ ನಡೆದ ಈ ಘಟನೆ ಆ ದಿನಕ್ಕೆ ಅತ್ಯಂತ ರೋಚಕ ಪ್ರಕರಣವಾಗಿ ಮಾರ್ಪಟ್ಟಿತ್ತು. ಕೊಲೆಯಾದ ಗಿರೀಶ್ ಹಾಗೂ ಶುಭಾ ಶಂಕರನಾರಾಯಣ ಇಬ್ಬರ ಕುಟುಂಬಗಳು ಹಳೆಯ ಪರಿಚಿತರಾಗಿದ್ದವು. ಗಿರೀಶ್ ಖಾಸಗಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರೆ, ಶುಭಾ ಐದನೇ ಸೆಮಿಸ್ಟರ್ ಕಾನೂನು (Law) ಪದವಿ ವ್ಯಾಸಂಗ ಮಾಡುತ್ತಿದ್ದಳು.

ಎರಡೂ ಕುಟುಂಬಗಳ ಒಪ್ಪಿಗೆಯಂತೆ 2003 ರ ನವೆಂಬರ್ 30 ರಂದು ಗಿರೀಶ್ ಹಾಗೂ ಶುಭಾ ನಡುವೆ ಅದ್ದೂರಿಯಾಗಿ ನಿಶ್ಚಿತಾರ್ಥ (Engagement) ನೆರವೇರಿತ್ತು. ಆದರೆ, ಶುಭಾ ತಾನು ಓದುತ್ತಿದ್ದ ಲಾ ಕಾಲೇಜಿನ ಜೂನಿಯರ್ ವಿದ್ಯಾರ್ಥಿಯಾಗಿದ್ದ ಅರುಣ್ ವರ್ಮಾ ಎಂಬುವವನನ್ನು ಪ್ರೀತಿಸುತ್ತಿದ್ದಳು. ಪ್ರಿಯಕರ ಅರುಣ್‌ನನ್ನು ಮದುವೆಯಾಗುವ ಉದ್ದೇಶದಿಂದ, ತನಗೆ ನಿಶ್ಚಿತಾರ್ಥವಾಗಿದ್ದ ಭಾವಿ ಪತಿ ಗಿರೀಶ್‌ನನ್ನು ಕೊಲೆ ಮಾಡಲು ಶುಭಾ ಮಾಸ್ಟರ್ ಪ್ಲಾನ್ ರೂಪಿಸಿದ್ದಳು.

ರಿಂಗ್ ರೋಡ್‌ನಲ್ಲಿ ಅಂದು ನಡೆದಿದ್ದೇನು?

ನಿಶ್ಚಿತಾರ್ಥವಾದ ಕೆಲವೇ ದಿನಗಳಲ್ಲಿ, ಅಂದರೆ 2003 ರ ಡಿಸೆಂಬರ್ 3 ರ ರಾತ್ರಿ ಗಿರೀಶ್ ಭಾವಿ ಪತ್ನಿ ಶುಭಾಳನ್ನು ಪ್ರೀತಿಯಿಂದ ರಾತ್ರಿಯ ಡಿನ್ನರ್‌ಗೆ ಕರೆದೊಯ್ದಿದ್ದ. ಊಟ ಮುಗಿದ ಬಳಿಕ, ಶುಭಾ ಎಚ್‌ಎಎಲ್ (HAL) ವಿಮಾನ ನಿಲ್ದಾಣದ ಬಳಿ ವಿಮಾನಗಳ ಹಾರಾಟ ಹಾಗೂ ಲ್ಯಾಂಡಿಂಗ್ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ್ದಳು. ಭಾವಿ ಪತ್ನಿಯ ಆಸೆಯಂತೆ ಗಿರೀಶ್ ಆಕೆಯನ್ನು ಕೋರಮಂಗಲ-ಇಂದಿರಾನಗರ ಒಳಗೊಂಡ ಹೆಚ್‌ಎಎಲ್ ರಿಂಗ್ ರೋಡ್‌ನ ವಿಮಾನ ವೀಕ್ಷಣಾ ಸ್ಥಳಕ್ಕೆ ಕರೆದೊಯ್ದಿದ್ದ. ಇಬ್ಬರೂ ರಿಂಗ್ ರೋಡ್‌ನಲ್ಲಿ ನಿಂತು ವಿಮಾನಗಳ ಹಾರಾಟ ವೀಕ್ಷಿಸುತ್ತಿದ್ದಂತೆಯೇ, ಮುಂಚಿತವಾಗಿಯೇ ಯೋಜಿಸಿದಂತೆ ಸ್ಥಳಕ್ಕೆ ಬಂದ ಆರೋಪಿಗಳು ಗಿರೀಶ್ ಮೇಲೆ ಮಾರಣಾಂತಿಕ ದಾಳಿ ನಡೆಸಿದರು. ಬೈಕ್‌ನ ಶೋಕ್ ಅಬ್ಸಾರ್ಬರ್‌ನಿಂದ (Shock Absorber) ಗಿರೀಶ್ ತಲೆಗೆ ಭೀಕರವಾಗಿ ಹೊಡೆದು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ಗಿರೀಶ್‌ನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮರುದಿನವೇ ಗಿರೀಶ್ ಕೊನೆಯುಸಿರೆಳೆದರು.

ತನಿಖೆ, ಬಂಧನ ಮತ್ತು ನ್ಯಾಯಾಲಯದ ಜೀವಾವಧಿ ಶಿಕ್ಷೆ

ಘಟನೆ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಕೆ.ಎ. ನಾಣಯ್ಯ ಅವರು ಚುರುಕಿನ ತನಿಖೆ ನಡೆಸಿದರು. ಆರಂಭದಲ್ಲಿ ಇದು ದರೋಡೆ ಅಥವಾ ಅಪರಿಚಿತರ ದಾಳಿ ಎಂದು ಬಿಂಬಿಸಲು ಯತ್ನಿಸಲಾಗಿತ್ತಾದರೂ, ಪೊಲೀಸರ ಕಟ್ಟುನಿಟ್ಟಿನ ವಿಚಾರಣೆ ವೇಳೆ ಶುಭಾಳ ರಹಸ್ಯ ಪ್ರೇಮ ಹಾಗೂ ಕೊಲೆಯ ಕರಾಳ ಸಂಚು ಬಯಲಾಯಿತು. ತನಿಖೆಯ ಬಳಿಕ ಪೊಲೀಸರು ಪ್ರಮುಖ ರೂವಾರಿ ಶುಭಾ, ಆಕೆಯ ಪ್ರಿಯಕರ ಅರುಣ್ ವರ್ಮಾ ಹಾಗೂ ಕೊಲೆಗೆ ಸಹಕರಿಸಿದ್ದ ವೆಂಕಟೇಶ್ ಮತ್ತು ದಿನೇಶ್ ಎಂಬುವವರನ್ನು ಬಂಧಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ನಾಲ್ವರೂ ತಪ್ಪಿತಸ್ಥರು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು.

ಸುಪ್ರೀಂ ಕೋರ್ಟ್ ಆದೇಶ ಮತ್ತು ಸಚಿವ ಸಂಪುಟದ ನಿರ್ಧಾರದತ್ತ ಚಿತ್ತ

ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರೂ, ಜುಲೈ 2025 ರಲ್ಲಿ ಸುಪ್ರೀಂ ಕೋರ್ಟ್ (Supreme Court) ನಾಲ್ವರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು ಅಂತಿಮ ಆದೇಶ ಹೊರಡಿಸಿತ್ತು. ಇದೀಗ ನ್ಯಾಯಾಲಯದ ಎಲ್ಲಾ ಕಾನೂನು ಬಾಗಿಲುಗಳು ಮುಚ್ಚಲ್ಪಟ್ಟ ಬಳಿಕ, ಆರೋಪಿಗಳ ಪರವಾಗಿ ರಾಜ್ಯಪಾಲರ ಮುಂದೆ 'ಕ್ಷಮಾದಾನ ಅರ್ಜಿ' (Mercy Petition) ಸಲ್ಲಿಸಲಾಗಿದೆ. ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಈ ಅರ್ಜಿಯನ್ನು ರಾಜ್ಯ ಸರ್ಕಾರದ ಸಚಿವ ಸಂಪುಟದ ಅಂಗಳಕ್ಕೆ ರವಾನಿಸಿದ್ದು, ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗುವ ತೀರ್ಮಾನದ ಆಧಾರದ ಮೇಲೆ ರಾಜ್ಯಪಾಲರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಹೀಗಾಗಿ, ಸಚಿವ ಸಂಪುಟ ಈ ಅರ್ಜಿಯನ್ನು ಪುರಸ್ಕರಿಸುತ್ತದೆಯೇ ಅಥವಾ ವಜಾಗೊಳಿಸುತ್ತದೆಯೇ ಎಂಬುದು ಕೌತುಕ ಮೂಡಿಸಿದೆ.

PREV
Read more Articles on
click me!

Recommended Stories

ದೊಡ್ಡಬಳ್ಳಾಪುರದಲ್ಲಿ ರಸ್ತೆ ಕಾಮಗಾರಿ ವೇಳೆ ವಿಜಯನಗರ ಕಾಲದ 6 ಐತಿಹಾಸಿಕ ವೀರಗಲ್ಲು ಪತ್ತೆ!
BDA ಬಿಗ್ ಮಾಸ್ಟರ್ ಪ್ಲಾನ್‌: ಒತ್ತುವರಿ ಜಾಗದ ಮಾಹಿತಿ ನೀಡಿದವರಿಗೆ ₹4 ಲಕ್ಷದವರೆಗೆ ನಗದು ಬಹುಮಾನ!