ದಾಳಿ ವೇಳೆ ಸಿಕ್ಕ 12 ಲಕ್ಷ ವಾಪಸ್‌ ನೀಡಿ: ಲೋಕಾ ಕೋರ್ಟ್‌ಗೆ ಹೈಕೋರ್ಟ್ ಸೂಚನೆ

By Kannadaprabha NewsFirst Published Feb 8, 2023, 3:44 AM IST
Highlights

ಭ್ರಷ್ಟಾಚಾರ ಆರೋಪ ಮೇಲೆ ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿವೃತ್ತ ನಿರ್ದೇಶಕ ಶಿವಲಿಂಗಮೂರ್ತಿ ಮನೆ ಮೇಲೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡಿದ್ದ ಒಟ್ಟು 12.15 ಲಕ್ಷ ರು.ಗಳನ್ನು ವಾಪಸ್‌ ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಬೆಂಗಳೂರು: ಭ್ರಷ್ಟಾಚಾರ ಆರೋಪ ಮೇಲೆ ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿವೃತ್ತ ನಿರ್ದೇಶಕ ಶಿವಲಿಂಗಮೂರ್ತಿ ಮನೆ ಮೇಲೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡಿದ್ದ ಒಟ್ಟು 12.15 ಲಕ್ಷ ರು.ಗಳನ್ನು ವಾಪಸ್‌ ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಭ್ರಷ್ಟಚಾರ ಪ್ರಕರಣದಿಂದ (corruption case) ಶಿವಲಿಂಗಮೂರ್ತಿ ಅವರನ್ನು ಖುಲಾಸೆಗೊಳಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ (ಲೋಕಾಯುಕ್ತ ಪೊಲೀಸರು) ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ (criminal appeal) ಸಲ್ಲಿಸಿದ್ದರು. ಇದೇ ವೇಳೆ ಲೋಕಾಯುಕ್ತ ಪೊಲೀಸರು ತಮ್ಮ ಮನೆ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ 12,15,000 ರು. ವಾಪಸ್‌ ನೀಡಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ನಿವೃತ್ತ ಅಧಿಕಾರಿ ಶಿವಲಿಂಗಮೂರ್ತಿ (Shivalingamurthy) ಪ್ರತ್ಯೇಕ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಈ ಎರಡು ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ನಟರಾಜನ್‌ (Natarajan) ಅವರ ನ್ಯಾಯಪೀಠ, ರಾಜ್ಯ ಸರ್ಕಾರದ ಮೇಲ್ಮನವಿಯನ್ನು ತಿರಸ್ಕರಿಸಿ,ಶಿವಲಿಂಗ ಮೂರ್ತಿ ಅವರನ್ನು ಭ್ರಷ್ಟಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು.

ಕೋರ್ಟ್ ಆದೇಶ ಉಲ್ಲಂಘಿಸಿ ಭೂಮಿ ಮಾರಾಟ: ಆರೋಪಿಗೆ 3 ತಿಂಗಳು ಜೈಲು

ಹಾಗೆಯೇ, ಶಿವಲಿಂಗಮೂರ್ತಿ (Shivalinga Murthy) ಅವರ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಅವರ ಮನೆಯಿಂದ ವಶಪಡಿಸಿಕೊಂಡ ಹಣ ಆದಾಯಕ್ಕೂ ಮೀರಿದ್ದಾಗಿದೆ ಎಂದು ಸಾಬೀತುಪಡಿಸಲು ಲೋಕಾಯುಕ್ತ ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ. ಈಗಾಗಲೇ ಪ್ರಕರಣದಿಂದ ಅವರನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಹಾಗಾಗಿ, ಅವರ ಮನೆಯಿಂದ ವಶಪಡಿಸಿಕೊಂಡಿರುವ 12.5 ಲಕ್ಷ ರು. ಹಿಂದಿರುಗಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಸೂಚಿಸಿದೆ.

ಈ ನಡುವೆ ಅರ್ಜಿದಾರರು ಐಎಎಸ್‌ ಅಧಿಕಾರಿಯಾಗಿದ್ದು(IAS officer), ಅವರ ವಿರುದ್ಧ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರವಾದ ಕೇಂದ್ರ ಸರ್ಕಾರಕ್ಕೆ ತನಿಖಾಧಿಕಾರಿಗಳು ಮನವಿ ಮಾಡಿದ್ದರು. ಆದರೆ, ಅವರ ಮನವಿಯನ್ನು ಕೇಂದ್ರ ಸರ್ಕಾರ (central government) ಅಂಗೀಕರಿಸಿರಲಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣದ ವಿವರ:

2003ರಲ್ಲಿ ಐಟಿಐ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತು ಐಟಿಐ ಕಾಲೇಜುಗಳಿಂದ ಲಂಚ ಪಡೆದು, ಅವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಅಲ್ಲದೆ, ಕಚೇರಿ ಆವರಣದಲ್ಲಿ ಖಾಸಗಿ ವ್ಯಕ್ತಿಗಳಿಬ್ಬರು ಶಿವಲಿಂಗಮೂರ್ತಿ ಪರ ಹಣ ಸ್ವೀಕರಿಸುತ್ತಿರುವುದಾಗಿ ತಿಳಿದು ಏಳು ಲಕ್ಷ ರು. ವಶಕ್ಕೆ ಪಡೆದಿದ್ದರು. ಅಷ್ಟೇ ಅಲ್ಲದೆ, ಅದೇ ಸಂದರ್ಭದಲ್ಲಿ ಶಿವಲಿಂಗಮೂರ್ತಿ ಮನೆ ಮೇಲೆ ದಾಳಿ ನಡೆಸಿ ಆದಾಯ ಮೀರಿ ಆಸ್ತಿ ಹೊಂದಿರುವುದಾಗಿ ಆರೋಪಿಸಿ 12.15 ಲಕ್ಷ ರು. ವಶಪಡಿಸಿಕೊಂಡಿದ್ದರು. ಆ ಹಣ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿತ್ತು.

ಕೌಟುಂಬಿಕ ದೌರ್ಜನ್ಯದ ಡಿವೋರ್ಸ್‌: ಪತ್ನಿ ಜೀವನಾಂಶ ಪಡೆಯಲು ಅರ್ಹಳೆಂದ ಬಾಂಬೆ ಹೈ

ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶಿವಲಿಂಗ ಮೂರ್ತಿ ವಿರುದ್ಧ ಆರೋಪಗಳನ್ನು ಪುಷ್ಠೀಕರಿಸುವ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಅವರನ್ನು ಖುಲಾಸೆಗೊಳಿಸಿತ್ತು. ಆದರೆ, ಅವರ ಮನೆಯಿಂದ ವಶಕ್ಕೆ ಪಡೆದುಕೊಂಡಿದ್ದ 12.15 ಲಕ್ಷ ರು. ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಆದೇಶ ಮಾಡಿರಲಿಲ್ಲ. ಇದರಿಂದ ತಮ್ಮಿಂದ ವಶಪಡಿಸಿಕೊಂಡ ಹಣ ಹಿಂದಿರುಗಿಸಲು ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಶಿವಲಿಂಗಮೂರ್ತಿ ಮೇಲ್ಮನವಿ ಸಲ್ಲಿಸಿದ್ದರು. ಇದೇ ವೇಳೆ ಅವರನ್ನು ಖುಲಾಸೆಗೊಳಿಸಿದ್ದ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಲು ಕೋರಿ ಲೋಕಾಯುಕ್ತ ಪೊಲೀಸರು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

click me!