ಪುನೀತ್ ರಾಜ್‌ಕುಮಾರ್ ರಸ್ತೆ ಲೋಕಾರ್ಪಣೆ ಮಾಡಿದ ಸಿಎಂ

By Suvarna NewsFirst Published Feb 7, 2023, 10:48 PM IST
Highlights

ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿದ್ದು, ಇದನ್ನು ಇಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.


ಬೆಂಗಳೂರು: ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿದ್ದು, ಇದನ್ನು ಇಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್‌ ಕುಮಾರ್ ಪತ್ನಿ ಅಶ್ವಿನಿ ಪುನೀತ್, ನಟ ಅಭಿಷೇಕ್ ಅಂಬರೀಷ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಆರ್ ಅಶೋಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 

ಈ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ಸಹೋದರನನ್ನು ನೆನೆದು ಭಾವುಕರಾದರು. ಕೆಲವು ಕಾರ್ಯಕ್ರಮದಲ್ಲಿ ಸಂತೋಷ ಪಡಬೇಕಾ ದುಃಖ ಪಡಬೇಕಾ ಎಂದು ಗೊತ್ತಾಗಲ್ಲ, ಅಪ್ಪಾಜಿಗೂ ಅಪ್ಪುಗೂ ತುಂಬಾ ಹೊಂದಾಣಿಕೆ ಇದೆ. ಅಪ್ಪಾಜಿ ಅವರು ಅಭಿಮಾನಿಗಳನ್ನು ಸೇರಿಸಿದರು. ಅಪ್ಪು ಅಭಿಮಾನಿಗಳನ್ನ ಬೆಳೆಸಿದರು. ಅಪ್ಪಾಜಿ ತಮ್ಮ 46 ನೇ ವರ್ಷಕ್ಕೆ ಡಾಕ್ಟರೇಟ್ ತಗೊಂಡ್ರು. ಅಪ್ಪು ಕೂಡ ಅಷ್ಟೇ ವರ್ಷಕ್ಕೆ ಡಾಕ್ಟರೇಟ್ ಪಡೆದಿದ್ದಾರೆ‌. ಅಪ್ಪು ಎಲ್ಲಿ ಹೋಗಿದ್ದಾನೆ ಅಂದ್ರೆ ಪವರ್ ನ ಇಲ್ಲೇ ಬಿಟ್ಟು ಸ್ಟಾರ್ ಆಗಿ ಮೇಲೆ ಹೋದ. ನಾನು ಇನ್ನ ಮುಂದೆ ಅಪ್ಪು ಹಾಗೆಯೇ ಬದುಕುತ್ತೇನೆ. ಅಪ್ಪು ಇಲ್ಲದಾಗಿನಿಂದ ಸಿಎಂ ನಮ್ಮ ಕುಟುಂಬದ ಜೊತೆ ಇದ್ದಾರೆ. ನಾವು ಇರುವವರೆಗೆ ಅವರಿಗೆ ಚಿರಋಣಿಯಾಗಿರುತ್ತೇವೆ. ಎಲ್ಲರೂ ಸೇರಿ ಒಂದು ಸುಂದರ ರಾಜ್ಯ ಕಟ್ಟೋಣ ಎಂದು ರಾಘವೇಂದ್ರ ರಾಜ್‌ ಕುಮಾರ್ (Ragavendra Rajkumar) ಹೇಳಿದರು. 

12 ಕಿ.ಮೀ ಉದ್ದದ ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರು; ಉದ್ಘಾಟನೆ ಬಗ್ಗೆ ಸಚಿವ ಆರ್ ಅಶೋಕ್ ಹೇಳಿದ್ದೇನು?

ನಟ ಅಭಿಷೇಕ್ ಅಂಬರೀಶ್ ಮಾತನಾಡಿ, ರಾಜ್ಯ ಸರ್ಕಾರದ ಸಮ್ಮುಖದಲ್ಲಿ‌ ವಿಷ್ಣುವರ್ಧನ್ ಸ್ಮಾರಕ ಆಗಿದೆ. ಈಗ ಅಪ್ಪು ಅವರ ಹೆಸರನ್ನ ರಸ್ತೆಗೆ ಇಟ್ಟಿದ್ದಾರೆ. ನಮ್ಮ ಅಪ್ಪನ ಸ್ಮಾರಕ ಕೂಡ ಲೋಕಾರ್ಪಣೆ ಆಗೋದು ಇದೆ. ಅದು ಸದ್ಯದಲ್ಲೇ ಆಗುತ್ತೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಹೇಳಿದರು.

ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, (Basavaraja Bommai) ಇವತ್ತು ಅಪ್ಪು ನಮ್ಮ ನಿಮ್ಮೆಲ್ಲರ ಅಪ್ಪು, ವಿಶೇಷವಾಗಿ ನನಗೆ ನನ್ನ ಅಪ್ಪು, ಎಲ್ಲರನ್ನೂ ನಗೆಯಲ್ಲಿ ಗೆದ್ದ ಹೃದಯ ಶ್ರೀಮಂತ ಅಪ್ಪು. ಅತಿ‌ ದೊಡ್ಡ ಹೆಸರು ಮಾಡಿದವರೆಲ್ಲಾ ಸಣ್ಣ ವಯಸ್ಸಿನಲ್ಲಿ ನಮ್ಮನ್ನ ಬಿಟ್ಟು ಹೋಗಿದ್ದಾರೆ. ತನ್ನ ಹೆಸರನ್ನ ಎಲ್ಲರ ಹೃದಯದಲ್ಲಿ ಕೆತ್ತಿ ಹೋಗಿದ್ದಾರೆ ನಮ್ಮ ಅಪ್ಪು. ಅಪ್ಪು ನಿಧನ ಆದಾಗ ಜನ‌ಸಾಗರ ಬಂದಿತ್ತು.  ಅವರು ಜನರ ಪ್ರೀತಿಯನ್ನ‌ ಎಷ್ಟು ಗಳಿಸಿದ್ದಾರೆ ಅಂತ ನೀವೆಲ್ಲಾ ನೋಡಿದ್ದೀರಾ. ರಾಜ್ಯದ ಯಾವುದೇ ಮೂಲೆಗೆ ಹೋದ್ರು ಅಪ್ಪು ಅಭಿಮಾನಿಗಳಿದ್ದಾರೆ.  ಸಾಧಕರಿಗೆ ಸಾವು ಅಂತ್ಯ ಅಲ್ಲ. ಸಾವಿನ ನಂತರವೂ ಅವರು ನಮ್ಮ ಮಧ್ಯೆ ಜೀವಿಸುತ್ತಾರೆ. ಅದನ್ನು ಪುನೀತ್ ಮಾಡುತ್ತಿದ್ದಾರೆ. ಅಪ್ಪು ಮನಸ್ಸು ಹೃದಯ ಎಲ್ಲವೂ ಇಲ್ಲೇ ಇದೆ.  ಅಪ್ಪು ಹೆಸರಲ್ಲಿ ಸ್ಮಾರಕ ಮಾಡಬೇಕು ಅನ್ನೋದು ಎಲ್ಲರ ಆಸೆ. ಅವರ ಸಮಾಧಿ ಬಳಿ ಅಪ್ಪು ಅವರ ಸ್ಮಾರಕ ಮಾಡುತ್ತೇವೆ. ಅಪ್ಪು ಅವರಿಗೆ ಕರ್ನಾಟಕ ರತ್ನ ಕೊಡುವ ಭಾಗ್ಯ ನಂದಾಗಿತ್ತು. ಅಪ್ಪು ಸ್ಮಾರಕ ಮಾಡೋದು ನಾವೇ ಎಂದರು. 

ಆಂಧ್ರ ಪ್ರದೇಶದಲ್ಲಿ ಅಪ್ಪು ಹವಾ: 9 ಅಡಿ ಎತ್ತರದ ಪುನೀತ್ ಪ್ರತಿಮೆ ಪ್ರದರ್ಶನ

ಇದೇ ವೇಳೆ ಅಂಬರೀಶ್ ಬಗ್ಗೆ ಮಾತನಾಡಿದ ಸಿಎಂ, ಅಂಬರೀಷ್ ಕೊಡುಗೈ ದಾನಿ ಮನಸ್ಸು ಮಾಡಿದ್ರೆ ಎಲ್ಲವನ್ನ ಗಳಿಸಬಹುದಿತ್ತು. ಮಾರ್ಚ್ ಮೊದಲ ವಾರದಲ್ಲಿ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡೋಣ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಬೇಕು ಅಂತ ಹೇಳುತ್ತಿದ್ದಾರೆ. ರೇಸ್ ಕೋರ್ಸ್ (Race course Road)ರಸ್ತೆಗೆ ರೆಬಲ್ ಸ್ಟಾರ್ ಅಂಬರೀಶ್ ಹೆಸರು ಇಡುತ್ತೇವೆ. ಇದನ್ನು ಕೇಳಿದರೆ ಅಂಬರೀಶ್ ಬಹಳ ಸಂತೋಷ ಪಡುತ್ತಾನೆ, ಮಗನೇ ಸರಿಯಾದ ಜಾಗಕ್ಕೆ ನನ್ನ ಹೆಸರಿಟ್ಟಿದ್ದೀಯಾ ಅಂತಾನೆ ಎಂದು ಸಿಎಂ ಹೇಳಿದರು. 

ಆರ್ ಅಶೋಕ್ ಒಬ್ಬ ಛಲಗಾರ, ಅವರು ಮನಸ್ಸು ಮಾಡಿದ್ರೆ ಯಾವುದೇ ಕೆಲಸವನ್ನು ಪೂರ್ತಿ ಮಾಡದೇ ಬಿಡಲ್ಲ.  ಸಂಪೂರ್ಣವಾಗಿ ಅಭಿವೃದ್ಧಿ ಆಗಿರೋ ಕ್ಷೇತ್ರ ಪದ್ಮನಾಭ ನಗರ, ಪದ್ಮನಾಭ ನಗರದಲ್ಲಿ ಇವತ್ತು ಎರಡು ಉದ್ಯಾನವನ ಉದ್ಘಾಟನೆ ಮಾಡಿದ್ದೇನೆ. ಅವರು ಅಪ್ಪು ಅವರ ಹೆಸರನ್ನು ಈಗ ಪದ್ಮನಾಭ ನಗರ ಕ್ಷೇತ್ರದಲ್ಲಿ ಚಿರಸ್ಥಾಯಿ ಆಗಿಸಿದ್ದಾರೆ. ರಸ್ತೆಗೆ ಅಪ್ಪು ಅವರ ಹೆಸರಿಡಲಾಗಿದೆ ಎಂದರು.

ಬೆಂಗಳೂರು ಭಾರತದ ಆರ್ಥಿಕತೆಯ ಇಂಜಿನ್‌  ಆಗಿದೆ. ಆದರೆ ಕೆಲವರು ಬೆಂಗಳೂರು ಹೆಸರನ್ನ ಕೆಡಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದನ್ನ ನಾವು ಕಾಪಾಡೇ ಕಾಪಾಡುತ್ತೇವೆ. ಅದು ನಮ್ಮ ನಿಮ್ಮೆಲ್ಲರ ಜವಾಬ್ಧಾರಿ. ಈ ನಗರಕ್ಕೆ ಎಲ್ಲ ರೀತಿಯ ಸೌಕರ್ಯ ಗಳ ಕೊಡುಗೆ ಇದೆ. ಪದ್ಮನಾಭ ನಗರಕ್ಕೆ 300 ಕೋಟಿ ಅನುದಾನ ಕೊಟ್ಟಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ. ಇವತ್ತಿನ ಶಾಸಕರಲ್ಲಿ ಹಿರಿಯ ಶಾಸಕರು ಆರ್ ಅಶೋಕ್ ಅವರು, ಪದೇ ಪದೇ ಶಾಸಕರಾಗಿ ಆಯ್ಕೆ ಆಗೋದು ಸುಲಭದ ಮಾತಲ್ಲ. ಆರ್ ಅಶೋಕ್ ಅವರು ಪದ್ಮನಾಭ ನಗರವನ್ನ ಭಾರಿ ಪ್ರೀತಿ ಮಾಡುತ್ತಾರೆ. ಈ ತರದ ಜನ ಸೇವಕರು ಸಿಗೋದು ಕಷ್ಟ. ಜನಪರ ಆಗಿರೋ ಅಶೋಕ್ ಅವರಿಗೆ ಸದಾ ಕಾಲ ಆಶೀರ್ವಾದ ಮಾಡಬೇಕು ಎಂದರು.

ಇದೇ ವೇಳೆ ಪುನೀತ್ ರಾಜ್‌ಕುಮಾರ್ ತ್ರಿಡಿ ಭಾವಚಿತ್ರವನ್ನು ಸಿಎಂ ಅನಾವರಣ ಮಾಡಿದರು. ಅಲ್ಲದೇ ಇದೇ ಕಾರ್ಯಕ್ರಮದಲ್ಲಿ ಸಿಎಂ,  ಆರ್ ಅಶೋಕ್ ಹಾಗೂ ಕಾರ್ಯಕ್ರಮಕ್ಕೆ ಬಂದ ಅಥಿತಿಗಳು  ಬೊಂಬೆ ಹೇಳುತೈತೆ ಹಾಡು ಹಾಡಿದರು. ಈ ಕಾರ್ಯಕ್ರಮದಲ್ಲೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಲೋಗೋ (International Film Festival Logo) ಲಾಂಚ್ ಮಾಡಲಾಯಿತು.

click me!