
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ (59ನೇ ಸಿಸಿಹೆಚ್ ಕೋರ್ಟ್) ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠದಲ್ಲಿ ವಿಚಾರಣೆ ನಡೆಸಲಾಯ್ತು. ವಾದ ಪ್ರತಿವಾದ ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿದೆ.
ಸಾಕ್ಷ್ಯ ವಿಚಾರಣೆ ವೇಳೆ ಆರೋಪಿಯನ್ನು ಖುದ್ದಾಗಿ ಕೋರ್ಟ್‌ಗೆ ಹಾಜರುಪಡಿಸಲು ನಿರ್ದೇಶನ ನೀಡಬೇಕು. ಸಾಕ್ಷ್ಯ ವಿಚಾರಣೆಯನ್ನು ಆಲಿಸುವುದು ಮತ್ತು ವೀಕ್ಷಿಸುವುದು ಆರೋಪಿಯ ಮೂಲಭೂತ ಹಕ್ಕಾಗಿದ್ದು, ಸಾಕ್ಷಿಯು ಆರೋಪಿಯ ಸಮಕ್ಷಮದಲ್ಲಿಯೇ ತನ್ನ ಹೇಳಿಕೆಯನ್ನು ನೀಡಬೇಕು. ಪರಪ್ಪನ ಅಗ್ರಹಾರ ಜೈಲು ಹಾಗೂ ಕೋರ್ಟ್‌ನಲ್ಲಿ ವಕೀಲರೊಂದಿಗೆ ನೇರ ಸಂವಹನ ನಡೆಸಲು ಸೂಕ್ತ ತಾಂತ್ರಿಕ ಉಪಕರಣಗಳಿಲ್ಲದೆ ತೊಂದರೆಯಾಗುತ್ತಿದೆ. ವೀಡಿಯೊ ಕಾನ್ಫರೆನ್ಸ್‌ನಲ್ಲಿ ತಾಂತ್ರಿಕ ದೋಷಗಳಿದ್ದು, ಕಾಲಕಾಲಕ್ಕೆ ತಮ್ಮ ವಕೀಲರಿಗೆ ಸೂಕ್ತ ಸೂಚನೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು.
ವಿಚಾರಣೆ ವೇಳೆ ಅಗತ್ಯವಿದ್ದರೆ ಜೈಲು ಸಿಬ್ಬಂದಿಯನ್ನು ಹೊರಗೆ ಕಳುಹಿಸಲು ಹಾಗೂ ಸರಿಯಾಗಿ ಕೇಳಿಸದಿದ್ದರೆ ಹೆಡ್‌ಫೋನ್ ನೀಡಲು ಸೂಚಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು. ವೀಡಿಯೊ ಕಾನ್ಫರೆನ್ಸ್‌ನಲ್ಲಿ ಯಾವುದೇ ಅಡಚಣೆ ಉಂಟಾದಲ್ಲಿ, ರಿಜಿಸ್ಟ್ರಾರ್ ಅವರ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ಕಕ್ಷಿದಾರರು ಹಾಗೂ ವಕೀಲರು ಮಾತನಾಡಲು ಅವಕಾಶ ಕಲ್ಪಿಸಲಾಗುವುದು. ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಕೋರ್ಟ್ ಅನುಮತಿ ಪಡೆದು ವಕೀಲರು ನೇರವಾಗಿ ಜೈಲಿಗೆ ತೆರಳಿ ಕಕ್ಷಿದಾರರನ್ನು ಭೇಟಿಯಾಗಿ ಚರ್ಚಿಸಬಹುದು. ಪ್ರಮುಖ ಸಾಕ್ಷಿಗಳನ್ನು ಪರಿಶೀಲಿಸಲು ಅಗತ್ಯವಿದ್ದರೆ ಜೈಲಿಗೇ ತೆರಳಿ ವಿಚಾರಣೆ ನಡೆಸಲು ರಿಜಿಸ್ಟ್ರಾರ್‌ಗೆ ಸೂಚನೆ ನೀಡಲಾಗುವುದು ಎಂದು ನ್ಯಾಯಾಲಯ ತಿಳಿಸಿತು.
"ನಿಮ್ಮ ಕಕ್ಷಿದಾರರ (ದರ್ಶನ್) ಅದೃಷ್ಟವೋ ಅಥವಾ ದುರದೃಷ್ಟವೋ ಅವರ ಮೇಲೆ ಗಂಭೀರ ಆರೋಪ ಬಂದಿದೆ. ಆ ಆರೋಪದ ಬಗ್ಗೆ ಅಂತಿಮ ತೀರ್ಮಾನ ಬರುವವರೆಗೆ ಅವರ ಭದ್ರತೆ ಮತ್ತು ರಕ್ಷಣೆ ನೀಡುವುದು ನ್ಯಾಯಾಲಯದ ಹೊಣೆಯಾಗಿದೆ. ಅದಕ್ಕೆ ತಕ್ಕಂತೆ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು" ಎಂದು ನ್ಯಾ. ವಿ. ಶ್ರೀಶಾನಂದ್ ಸ್ಪಷ್ಟಪಡಿಸಿದರು.
ವಿಚಾರಣಾ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಯಿತು. ಇದಕ್ಕೆ ಪ್ರಾಸಂಗಿಕವಾಗಿ ಪ್ರಾಸಿಕ್ಯೂಷನ್ ಕೂಡ ವಿರೋಧಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಹಿರಿಯ ವಕೀಲ ಹಷ್ಮತ್ ಪಾಷಾ ಅವರು, ಪ್ರಮುಖ ನಾಲ್ಕೈದು ಸಾಕ್ಷಿಗಳ ವಿಚಾರಣೆ ವೇಳೆ ಮಾತ್ರ ಖುದ್ದು ಹಾಜರಿಗೆ ಅಥವಾ ವಿಶೇಷ ಅವಕಾಶ ನೀಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯವು, ಅಗತ್ಯವಿರುವ ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಮೂರರಿಂದ ನಾಲ್ಕು ದಿನಗಳ ಕಾಲಾವಕಾಶ ನೀಡುವ ಬಗ್ಗೆ ಪರಿಗಣಿಸುವುದಾಗಿ ತಿಳಿಸಿತು. ಜಯಲಲಿತಾ ಕೇಸ್ ವಿಚಾರಣೆ ನಡೆದ ಕೋರ್ಟ್‌ನಲ್ಲಿ ವಿಚಾರಣೆಗೆ ಸೂಚನೆ ನೀಡಲಾಗುವುದು ಎಂದು ಹೇಳಿತು.
ಸೆಪ್ಟೆಂಬರ್ 16ಕ್ಕೆ ವಿಚಾರಣೆ ಮುಂದೂಡಿಕೆ: ತ್ವರಿತಗತಿಯ ವಿಚಾರಣೆಯನ್ನು ಗಮನದಲ್ಲಿಟ್ಟುಕೊಂಡು, ಯಾವ ದಿನ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ನಡೆಸಬೇಕು ಎಂಬುದನ್ನು ನಿರ್ಧರಿಸಿ ತಿಳಿಸುವಂತೆ ಸೂಚಿಸಿ, ಹೈಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 16ರ ಮಧ್ಯಾಹ್ನ 2:30ಕ್ಕೆ ಮುಂದೂಡಿತು. ಯಾವುದೇ ಅನಗತ್ಯ ಕಿರಿಕಿರಿ ಅಥವಾ ವಿಳಂಬವಿಲ್ಲದೆ ವಿಚಾರಣೆ ಪೂರ್ಣಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.