ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಬಗ್ಗೆ ಹೊರಬಿತ್ತು ಅಚ್ಚರಿಯ ಸುದ್ದಿ

Published : Sep 23, 2026, 10:22 PM IST
Bengaluru Pink Metro

ಸಾರಾಂಶ

ಬೆಂಗಳೂರಿನ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ರೈಲುಗಳ (ಎಲಿವೇಟೆಡ್‌ ವಿಭಾಗದಲ್ಲಿ) ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಅಕ್ಟೋಬರ್ ಎರಡನೇ ವಾರದಿಂದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎಲಿವೇಟೆಡ್‌ ಮಾರ್ಗದಲ್ಲಿ ವಾಣಿಜ್ಯ ಸೇವೆ ಆರಂಭವಾಗುವ ಸಾಧ್ಯತೆಯಿದೆ. ಸಿಎಂಆರ್‌ಎಸ್‌ ತಪಾಸಣೆ ಮುಗಿದ ತಕ್ಷಣವೇ ಈ ಮಾರ್ಗ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರದ ಜೀವನಾಡಿ ನಮ್ಮ ಮೆಟ್ರೋ ಮತ್ತಷ್ಟು ವಿಸ್ತರಣೆ ಆಗ್ತಿದೆ. ಇದೀಗ ಗುಲಾಬಿ ಮಾರ್ಗದ ಬಿಇಎಂಎಲ್ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿಯ ಅನುಮೋದನೆ ನೀಡಿದೆ. ಬೆನ್ನಲ್ಲೇ ಎಲ್ಲವೂ ಅಂದುಕೊಂಡಂತೆ ಆದರೆ ಬಿಎಂಆರ್‍‌ಸಿಎಲ್ ಎಲಿವೇಟೆಡ್‌ ವಿಭಾಗದಲ್ಲಿ ಅಕ್ಟೋಬರ್‌ ಎರಡನೇ ವಾರದಿಂದ ವಾಣಿಜ್ಯ ಸೇವೆ ಆರಂಭಿಸಲು ನಿರ್ಧರಿಸಿದೆ. ಇಲ್ಲಿ ದಟ್ಟಣೆ ಅವಧಿಯಲ್ಲಿ 6 ಹಾಗೂ ಸಾಮಾನ್ಯ ಸಮಯದಲ್ಲಿ 10 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ.

ಇವತ್ತು ಬಿಎಂಆರ್‌ಸಿಎಲ್‌ಗೆ ರೈಲ್ವೇ ಮಂಡಳಿಯಿಂದ ಅನುಮೋದನೆ ಸಿಕ್ಕಿದೆ. ಈ ಅನುಮೋದನೆಯನ್ನು BMRCL ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಗೆ ದಾಖಲೆಗಳೊಂದಿಗೆ ಸಲ್ಲಿಸಲಿದೆ. ಆ ಮೂಲಕ ಶೀಘ್ರದಲ್ಲಿಯೇ ಪಿಂಕ್ ಲೈನ್‌ನಲ್ಲಿ ಮೆಟ್ರೋ ಸಂಚಾರ ಶುರು ಸಾಧ್ಯತೆ ಇದೆ. ಕಾಳೇನಾ ಅಗ್ರಹಾರದಿಂದ-ನಾಗಾವರ ವರೆಗಿನ ಪಿಂಕ್ ಲೈನ್ ಹೊಂದಿದೆ. ಗುಲಾಬಿ ಮಾರ್ಗವು ಒಟ್ಟು 21.26 ಕಿ.ಮೀ. ಉದ್ದವಿದೆ. 13.76 ಕಿ.ಮೀ. ಸುರಂಗ ಮಾರ್ಗ 7.5 ಕಿ.ಮೀ. ಎತ್ತರಿಸಿದ ಮಾರ್ಗವಾಗಿದೆ. ಎರಡು ಹಂತದಲ್ಲಿ ಗುಲಾಬಿ ಮಾರ್ಗ ಲೋಕಾರ್ಪಣೆ ಆಗಲಿದೆ.

ಗುಲಾಬಿ ಮಾರ್ಗದ ಎಲಿವೇಟೆಡ್‌ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಸಾಗಲಿದೆ. ಕಾಳೇನ ಅಗ್ರಹಾರ, ಹುಳಿಮಾವು, ಜೆಪಿ ನಗರ 4 ನೇ ಹಂತ, ಐಐಎಂಬಿ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಎಂಬ ಆರು ನಿಲ್ದಾಣಗಳನ್ನು ಹೊಂದಿದೆ. ಇದರ ಉದ್ಘಾಟನೆಯೊಂದಿಗೆ ಬೆಂಗಳೂರು ಮೆಟ್ರೋ ಜಾಲವು 103.6 ಕಿ.ಮೀ.ಗೆ ವಿಸ್ತರಿಸಲಿದೆ.

ಆರು ತಿಂಗಳಿಂದ ಉದ್ಘಾಟನೆಗಾಗಿ ಕಾದಿತ್ತು

ಪಿಂಕ್ ಲೈನ್ ಕಳೆದ ಆರು ತಿಂಗಳಿಂದ ಉದ್ಘಾಟನೆ ಆಗಲಿದೆ ಎಂದು ಹೇಳಿಕೊಂಡು ಬರುಲಾಗುತ್ತಿದೆ. ಆದರೆ ಉದ್ಘಾಟನೆ ಆಗಿರಲಿಲ್ಲ. ರೈಲುಗಳಿಗೆ ಶಾಸನಬದ್ಧ ಅನುಮೋದನೆ ಪಡೆಯೋದು ವಿಳಂಬಕ್ಕೆ ಕಾರಣವಾಗಿತ್ತು. 7.5 ಕಿ.ಮೀ ಮಾರ್ಗ ಇದಾಗಿದ್ದು, ಆರಂಭದಲ್ಲಿ ಆರು ರೈಲುಗಳನ್ನು ಕಾರ್ಯಾಚರಣೆಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಂಸ್ಥೆ ಪ್ಲಾನ್ ಮಾಡಿದೆ. ಇತ್ತೀಚೆಗೆ ಬಿಎಂಆರ್‌ಸಿಎಲ್‌ ಸಿಗ್ನಲಿಂಗ್‌ ಟೆಸ್ಟ್ ನಡೆಸಿ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ.

ಸಿಎಂಆರ್‌ಎಸ್‌ ತಪಾಸಣೆ ಅಗತ್ಯ

ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಾದ (ದಕ್ಷಿಣ ವಲಯ) ವಿ. ವೆಂಕಟಸುಬ್ರಮಣಿಯನ್‌ ಅವರನ್ನು ಭೇಟಿಯಾಗಿದ್ದರು. ಸುರಕ್ಷತಾ ತಪಾಸಣೆಗಾಗಿ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ತಪಾಸಣೆಗೂ ಮುನ್ನ ಸಿಎಂಆರ್‌ಎಸ್‌ ಸಮಗ್ರ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದೆ.

ಇನ್ನು, CMRS ಎರಡು ದಿನಗಳ ತಪಾಸಣೆ ನಡೆಸಲಿದೆ. ಕೊತ್ತನೂರು ಡಿಪೋ, ಬನ್ನೇರುಘಟ್ಟ ರಸ್ತೆಯ ಆರು ನಿಲ್ದಾಣಗಳು, ಮೇಲ್ಸೇತುವೆ ಹಳಿಗಳು ಮತ್ತು ಇತರ ವ್ಯವಸ್ಥೆಗಳ ಮೋಟಾರ್‌ ಟ್ರಾಲಿ ಪರಿಶೀಲನೆ ಕೈಗೊಳ್ಳಲಿದೆ. ಸಿಎಂಆರ್‌ಎಸ್‌ ಅನುಮೋದನೆ ಸಿಕ್ಕ ತಕ್ಷಣ ಪ್ರಯಾಣಿಕರ ಸೇವೆಗೆ ಪಿಂಕ್ ಲೇನ್ ಸಿದ್ಧವಾಗಲಿದೆ. ಫ್ರೆಂಚ್ ಮೂಲದ 'ಆಲ್ಸ್ಟೋಮ್' ಸಂಸ್ಥೆ ಸಲ್ಲಿಸಿರುವ ವರದಿಯ ಪ್ರಕಾರ, ಈ ಮೆಟ್ರೋ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆ ಮತ್ತು ತಾಂತ್ರಿಕ ಸಂಪರ್ಕಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಬೆಂಗಳೂರಿನ 'ಜೊಡೋವಾ ಟೆಕ್ನಾಲಜೀಸ್' ಕಂಪನಿಯು ಸುರಕ್ಷತಾ (ISA) ಪ್ರಮಾಣಪತ್ರ ನೀಡಿದೆ. ಇನ್ನು ಈ ಮಾರ್ಗಕ್ಕಾಗಿ ಹೊರಗಿನಿಂದ ತರಲಾದ ರೈಲುಗಳನ್ನು ರೈಲ್ವೆ ಸುರಕ್ಷತಾ ಆಯುಕ್ತರ (CMRS) ತಂಡವು ಕಳೆದ ಆಗಸ್ಟ್‌ 12 ರಿಂದ 14 ರವರೆಗೆ ಪರಿಶೀಲನೆ ನಡೆಸಿತ್ತು.

PREV
Read more Articles on
click me!

Recommended Stories

ಕೆಪಿಎಸ್‌ಸಿ ಅಕ್ರಮದ ಎಸ್‌ಐಟಿಗೆ ಹೈಕೋರ್ಟ್‌ನಿಂದ ನೇಮಕಗೊಂಡ ಎರಡೇ ದಿನಕ್ಕೆ ಬಿಗ್ ಟ್ವಿಸ್ಟ್: IPS ಅಧಿಕಾರಿ ಕುಶಾಲ್ ಚೌಕ್ಸೆ ದಿಢೀರ್ ವರ್ಗಾವಣೆ!
'ರೇಟ್‌ ಎಷ್ಟು? ' ಸೋಶಿಯಲ್‌ ಮೀಡಿಯಾದಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಅವಮಾನ, ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು!