ಕೆಪಿಎಸ್‌ಸಿ ಅಕ್ರಮದ ಎಸ್‌ಐಟಿಗೆ ಹೈಕೋರ್ಟ್‌ನಿಂದ ನೇಮಕಗೊಂಡ ಎರಡೇ ದಿನಕ್ಕೆ ಬಿಗ್ ಟ್ವಿಸ್ಟ್: IPS ಅಧಿಕಾರಿ ಕುಶಾಲ್ ಚೌಕ್ಸೆ ದಿಢೀರ್ ವರ್ಗಾವಣೆ!

Published : Sep 23, 2026, 09:51 PM IST
IPS officer Kushal Chouksey

ಸಾರಾಂಶ

ಕೆಪಿಎಸ್‌ಸಿ ಅಕ್ರಮಗಳ ತನಿಖೆಗಾಗಿ ಹೈಕೋರ್ಟ್‌ನಿಂದ ಎಸ್‌ಐಟಿಗೆ ನೇಮಕಗೊಂಡಿದ್ದ ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ ಅವರನ್ನು ರಾಜ್ಯ ಸರ್ಕಾರ ದಿಢೀರನೇ ಚಿತ್ರದುರ್ಗ ಎಸ್‌ಪಿಯಾಗಿ ವರ್ಗಾವಣೆ ಮಾಡಿದೆ. ಕೇವಲ ಎರಡೇ ದಿನಗಳಲ್ಲಿ ನಡೆದ ಈ ಎತ್ತಂಗಡಿಯು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು (ಸೆ.23): ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ (ಕೆಪಿಎಸ್‌ಸಿ - KPSC) ಅಕ್ರಮಗಳ ತನಿಖೆಗೆ ಹೈಕೋರ್ಟ್‌ನಿಂದ ವಿಶೇಷ ತನಿಖಾ ತಂಡಕ್ಕೆ (SIT) ನೇಮಕಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ (Kushal Chouksey) ಅವರನ್ನು ರಾಜ್ಯ ಸರ್ಕಾರವು ದಿಢೀರನೇ ಚಿತ್ರದುರ್ಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.

ಕೆಪಿಎಸ್‌ಸಿ ಅಕ್ರಮಗಳ ತನಿಖೆಗಾಗಿ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನೂತನವಾಗಿ ರಚಿಸಲಾದ ಎಸ್‌ಐಟಿಗೆ ಸೆಪ್ಟೆಂಬರ್ 21 ರಂದು ಹೈಕೋರ್ಟ್ ಕುಶಾಲ್ ಚೌಕ್ಸೆ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿತ್ತು. ಆದರೆ, ಹೈಕೋರ್ಟ್ ಆದೇಶ ಹೊರಬಿದ್ದು ಕೇವಲ ಎರಡೇ ದಿನಗಳಲ್ಲಿ ರಾಜ್ಯ ಸರ್ಕಾರವು ಅವರನ್ನು ಚಿತ್ರದುರ್ಗ ಎಸ್‌ಪಿಯಾಗಿ ಎತ್ತಂಗಡಿ ಮಾಡಿರುವುದು ಆಡಳಿತ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲಕ್ಕೆ ಮತ್ತು ಹುಬ್ಬೇರಿಸುವುದಕ್ಕೆ ಕಾರಣವಾಗಿದೆ.

ಒಂದೇ ತಿಂಗಳಿನಲ್ಲಿ ಎರಡೆರಡು ವರ್ಗಾವಣೆ

ಗಮನಾರ್ಹ ಅಂಶವೆಂದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಆಗಸ್ಟ್ 29 ರಂದು ನಡೆಸಿದ್ದ ಬೃಹತ್ ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಭಾಗವಾಗಿ ಕುಶಾಲ್ ಚೌಕ್ಸೆ ಅವರನ್ನೂ ವರ್ಗಾವಣೆ ಮಾಡಿತ್ತು. ಆಗ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್‌ಪಿಯಾಗಿದ್ದ ಕುಶಾಲ್ ಚೌಕ್ಸೆ ಅವರನ್ನು ಬೆಂಗಳೂರು ನಗರದ ಡಿಸಿಪಿ (ಆಡಳಿತ) ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಹೊಸ ಹುದ್ದೆಯನ್ನು ವಹಿಸಿಕೊಂಡು ತಿಂಗಳು ಕಳೆಯುವಷ್ಟರಲ್ಲೇ ಹಾಗೂ ಹೈಕೋರ್ಟ್ ಅವರನ್ನು ಮಹತ್ವದ ಕೆಪಿಎಸ್‌ಸಿ ಅಕ್ರಮ ತನಿಖೆಯ ಎಸ್‌ಐಟಿಗೆ ನಿಯೋಜಿಸಿದ ಬೆನ್ನಲ್ಲೇ ಸರ್ಕಾರ ಅವರನ್ನು ಮತ್ತೆ ದಿಢೀರ್ ವರ್ಗಾವಣೆ ಮಾಡಿದೆ.

ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಹೈಕೋರ್ಟ್ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳ ತಂಡವನ್ನು ಎಸ್‌ಐಟಿ ರೂಪದಲ್ಲಿ ಸಿದ್ಧಪಡಿಸಿತ್ತು. ಆದರೆ, ಎಸ್‌ಐಟಿ ತನಿಖೆ ಪೂರ್ಣಪ್ರಮಾಣದಲ್ಲಿ ಆರಂಭವಾಗುವ ಹಂತದಲ್ಲೇ ತನಿಖಾ ತಂಡದಲ್ಲಿದ್ದ ಮುಖ್ಯ ಅಧಿಕಾರಿಯನ್ನು ಜಿಲ್ಲಾ ಎಸ್‌ಪಿಯಾಗಿ ಎತ್ತಂಗಡಿ ಮಾಡಿರುವುದು ತನಿಖೆಯ ಹಾದಿಯ ಕುರಿತು ನಾನಾ ವದಂತಿಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಈ ದಿಢೀರ್ ನಡೆಗೆ ಮತ್ತು ವರ್ಗಾವಣೆಯ ಹಿಂದಿರುವ ಕಾರಣಗಳ ಕುರಿತು ಪೊಲೀಸ್ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.

PREV
Read more Articles on
click me!

Recommended Stories

'ರೇಟ್‌ ಎಷ್ಟು? ' ಸೋಶಿಯಲ್‌ ಮೀಡಿಯಾದಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಅವಮಾನ, ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು!
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸರ್ಪ್ರೈಸ್: ದೋಸೆ ಮಾಡಿ, ಫಿಲ್ಟರ್‌ ಕಾಫಿ ಸವಿದ ಟೆಲಿಕಾಂ ಮಿನಿಸ್ಟರ್‌