
ಬೆಂಗಳೂರು (ಅ.12): ವಿವಿಧ ಪ್ರಕರಣದಲ್ಲಿ ಅಪರಾಧಿಯಾಗಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ (Shift) ಪ್ರಕ್ರಿಯೆಯಲ್ಲಿ ಭಾರಿ ಹೈಡ್ರಾಮಾ ಸಂಭವಿಸಿದೆ. ಬೆಂಗಳೂರಿನಿಂದ ಬೆಳಗಾವಿಗೆ ಕರೆದೊಯ್ಯಲಾಗುತ್ತಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಸಿಟಿ ಆರ್ಮ್ಡ್ ರಿಸರ್ವ್ (CAR) ಪೊಲೀಸರು ತುಮಕೂರು ತಲುಪಿದ ಬಳಿಕ ದಿಢೀರನೆ ವಾಪಸ್ ಕರೆತಂದು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೇ ತಲುಪಿಸಿದ್ದಾರೆ.
ಸಲಹಾ ಸಮಿತಿ ಹಾಗೂ ಜೈಲು ಆಡಳಿತದ ಮಾರ್ಗದರ್ಶನದಂತೆ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಸುಸಜ್ಜಿತ ಹಿಂಡಲಗಾ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಗುತ್ತಿತ್ತು.
ಶನಿವಾರ ಸಂಜೆ CAR ಎಸ್ಕಾರ್ಟ್ ಸಿಬ್ಬಂದಿಗಳು ಹಾಗೂ ಸಶಸ್ತ್ರ ಪಡೆ ಪೊಲೀಸರ ತಂಡವು ಪ್ರಜ್ವಲ್ ರೇವಣ್ಣ ಅವರನ್ನು ವಾಹನದಲ್ಲಿ ಕುಳ್ಳಿರಿಸಿಕೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೆಳಗಾವಿಯತ್ತ ಪ್ರಯಾಣ ಬೆಳೆಸಿತ್ತು. ವಾಹನಗಳ ಸಾಲು ತುಮಕೂರು ತಲುಪುತ್ತಿದ್ದಂತೆಯೇ, ಬಂದೋಬಸ್ತ್‌ನಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಉನ್ನತ ಮಟ್ಟದ ಅಧಿಕಾರಿಯಿಂದ ತುರ್ತು ಫೋನ್ ಕರೆಯೊಂದು ಬಂದಿದೆ.
ಉನ್ನತ ಅಧಿಕಾರಿಯ ನಿರ್ದೇಶನದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಎಸ್ಕಾರ್ಟ್ ಸಿಬ್ಬಂದಿ, ಬೆಳಗಾವಿ ಪ್ರಯಾಣವನ್ನು ಅರ್ಧಕ್ಕೇ ಮೊಟಕುಗೊಳಿಸಿ, ವಾಹನಗಳನ್ನು ರಸ್ತೆಯಲ್ಲೇ ಯು-ಟರ್ನ್ ಮಾಡಿಕೊಂಡು ಶನಿವಾರ ಸಂಜೆ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆತಂದು ರೇವಣ್ಣ ಅವರನ್ನು ಜೈಲು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಪ್ರಮುಖ ಎರಡು ಪ್ರತ್ಯೇಕ ಪ್ರಕರಣಗಳ ತನಿಖೆ ಹಾಗೂ ನ್ಯಾಯಾಂಗ ವಿಚಾರಣೆ (Trial) ಪ್ರಸ್ತುತ ಅಂತಿಮ ಘಟ್ಟದಲ್ಲಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ (Special Court for MP/MLA) ದಿನಂಪ್ರತಿ ವಿಚಾರಣೆ ನಡೆಯುತ್ತಿದೆ.
ವಿಚಾರಣೆಯ ಸಂದರ್ಭದಲ್ಲಿ ಕೆಲವು ಪ್ರಮುಖ ಸಾಕ್ಷ್ಯಗಳ ವಿಚಾರಣೆ ಹಾಗೂ ವಾದ-ಪ್ರತಿವಾದದ ವೇಳೆ ಅಪರಾಧಿ ಪ್ರಜ್ವಲ್ ರೇವಣ್ಣ ಖುದ್ದು ನ್ಯಾಯಾಲಯದ ಕಟಕಟೆಯಲ್ಲಿ ಹಾಜರಿರುವುದು ತಾಂತ್ರಿಕವಾಗಿ ಕಡ್ಡಾಯವಾಗಿದೆ. ಒಂದು ವೇಳೆ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿದರೆ, ಪ್ರತಿಸಾರಿಯೂ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುವುದು ಭದ್ರತೆ ಹಾಗೂ ತಾಂತ್ರಿಕ ದೃಷ್ಟಿಯಿಂದ ಕಷ್ಟಕರವಾಗಲಿದೆ. ನ್ಯಾಯಾಲಯದ ಪ್ರಕ್ರಿಯೆಗೆ ವಿಳಂಬವಾಗಬಾರದು ಎನ್ನುವ ಕಾನೂನು ಕಾರಣಕ್ಕಾಗಿ ಸ್ಥಳಾಂತರ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದ್ದು, ಅಪರಾಧಿ ಪ್ರಜ್ವಲ್ ರೇವಣ್ಣ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಮುಂದುವರಿಯಲಿದ್ದಾರೆ.