ಸಿಡಿದೆದ್ದ ಬೆಂಗಳೂರು, ಡಿಯರ್ ಡಿಕೆ, ಫ್ಲೈಓವರ್ ಯಾಕೆ? 3,060 ಕೋಟಿ ಮೌಲ್ಯದ 9 ಟೆಂಡರ್‌ಗಳು ರದ್ದು!

Published : Oct 12, 2026, 11:21 AM IST
Dear DK  Flyovers

ಸಾರಾಂಶ

ಬೆಂಗಳೂರಿನಲ್ಲಿ ಬಿಎಸ್‌ಎಂಐಎಲ್ ಪ್ರಸ್ತಾಪಿಸಿರುವ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ವಿರುದ್ಧ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪರಿಸರ ನಾಶವನ್ನು ವಿರೋಧಿಸಿ ಇಂದಿರಾನಗರ ಮತ್ತು ಜಯನಗರದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ವಿರೋಧ ಹಾಗೂ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಸರ್ಕಾರವು ₹3,060 ಕೋಟಿ ಮೌಲ್ಯದ 9 ಟೆಂಡರ್‌ಗಳನ್ನು ರದ್ದುಗೊಳಿಸಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (BSMILE) ಪ್ರಸ್ತಾಪಿಸಿರುವ ಬೃಹತ್ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ವಿರುದ್ಧ ಸಾರ್ವಜನಿಕ ಆಕ್ರೋಶ ಮುಗಿಲುಮುಟ್ಟಿದೆ. ನಗರದ ಪರಿಸರ ಹಾಗೂ ಹಸಿರು ಹೊದಿಕೆಯನ್ನು ನಾಶಪಡಿಸಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸುವುದನ್ನು ವಿರೋಧಿಸಿ ಇಂದಿರಾನಗರ ಮತ್ತು ಜಯನಗರದಲ್ಲಿ ನೂರಾರು ನಿವಾಸಿಗಳು ಬೃಹತ್ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉಲ್ಲೇಖಿಸಿ ಡಿಯರ್ ಡಿ.ಕೆ, ಫ್ಲೈಓವರ್ ಯಾಕೆ? ಎಂಬ ಅಭಿಯಾನದಡಿ ಕೆಂಪು ಗುಲಾಬಿ, ಬಿತ್ತಿಪತ್ರಗಳು ಹಾಗೂ ಮೀಮ್ಸ್‌ಗಳನ್ನು ಹಿಡಿದು ನಾಗರಿಕರು ಬೃಹತ್ ರ‍್ಯಾಲಿ ನಡೆಸಿದರು.

Ctrl+Z ಮಾಡಿ! ಪೋಸ್ಟರ್‌ಗಳ ಮೂಲಕ ವ್ಯಂಗ್ಯ

ಇಂದಿರಾನಗರದ 100 ಫೀಟ್ ರೋಡ್, ಸಿಎಂಎಚ್ ರಸ್ತೆ ಹಾಗೂ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ಮೂಲಸೌಕರ್ಯ ಆದ್ಯತೆಗಳನ್ನು ತೀವ್ರವಾಗಿ ಪ್ರಶ್ನಿಸಿದರು.

ಬಿಎಸ್‌ಎಂಐಎಲ್‌ನ ಎಲಿವೇಟೆಡ್ ಕಾರಿಡಾರ್ ನಿರ್ಧಾರವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು (Ctrl+Z Undo) ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರಸ್ತಾವಿತ ಕಾರಿಡಾರ್‌ಗಳನ್ನು "ಎತ್ತರದ ಧೂಳು ಮತ್ತು ಶಾಖದ ಕಾರಿಡಾರ್‌ಗಳು ಎಂದು ಬಣ್ಣಿಸಿದ ನಿವಾಸಿಗಳು, ದಶಕಗಳಿಂದ ನೆನೆಗುದಿಗೆ ಬಿದ್ದಿರುವ 'ಈಜಿಪುರ ಫ್ಲೈಓವರ್' ಉದಾಹರಣೆ ನೀಡಿ, ಈ ಕಾರಿಡಾರ್‌ಗಳು 2047ರ ವೇಳೆಗೆ ಮುಗಿಯಬಹುದು! ಎಂದು ವ್ಯಂಗ್ಯವಾಡಿದರು.

ಮೇಲೆ ಕಾಂಕ್ರೀಟ್, ಕೆಳಗೆ ಬಿಕ್ಕಟ್ಟು, 'ಗಾರ್ಡನ್ ಸಿಟಿ ಬೇಕು, ಕಾಂಕ್ರೀಟ್ ಕಾಡು ಬೇಡ' ಹಾಗೂ'BSMILE ಸಂಸ್ಥೆಯು ನಾಗರಿಕರ ಮುಖದಿಂದ ನಗುವನ್ನೇ ಕಸಿದುಕೊಳ್ಳುತ್ತಿದೆ ಎಂಬ ಘೋಷವಾಕ್ಯದ ಬ್ಯಾನರ್‌ಗಳು ಗಮನಸೆಳೆದವು.

ದಕ್ಷಿಣ ಬೆಂಗಳೂರಿನಲ್ಲೂ ಪ್ರತಿಭಟನೆ

ಇನ್ನೊಂದೆಡೆ ದಕ್ಷಿಣ ಬೆಂಗಳೂರಿನ ರಾಗಿಗುಡ್ಡದಿಂದ ತಲಘಟ್ಟಪುರ (ಕನಕಪುರ ರಸ್ತೆ) ವರೆಗಿನ ಎಲಿವೇಟೆಡ್ ಕಾರಿಡಾರ್ ವಿರೋಧಿಸಿ ಆರ್‌ವಿ ರಸ್ತೆ ಮೆಟ್ರೋ ಸಮೀಪದ ರೋಸ್ ಗಾರ್ಡನ್ ಜಂಕ್ಷನ್‌ನಲ್ಲಿ ನಿವಾಸಿಗಳು ಮಾನವ ಸರಪಳಿ ರಚಿಸಿದರು.

ಈ ಯೋಜನೆಯಿಂದ ರೋಸ್ ಗಾರ್ಡನ್, ತಲಘಟ್ಟಪುರ ಮತ್ತು ಗುಬ್ಬಲಾಲ ಸರೋವರ ಉದ್ಯಾನವನಗಳು ಹಾಗೂ ಕನಕಪುರ ರಸ್ತೆಯ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ಭಾರಿ ಹಾನಿಯಾಗಲಿದೆ. ಅಷ್ಟೇ ಅಲ್ಲದೆ, ನಗರಕ್ಕೆ ನೀರು ಪೂರೈಸುವ ಐದು ಬೃಹತ್ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಪ್ರಸ್ತಾವಿತ ಮಾರ್ಗದಲ್ಲಿದ್ದು, ಈ ಯೋಜನೆ ಅವುಗಳಿಗೆ ಗಂಭೀರ ಅಪಾಯ ತಂದೊಡ್ಡಲಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 20 ವರ್ಷಗಳಿಂದ ಶಾಂತಿಯುತವಾಗಿ ವಾಸಿಸುತ್ತಿರುವ ತೆರಿಗೆದಾರರನ್ನು ಸ್ವಂತ ಮನೆಗಳಿಂದ ಹೊರಹಾಕುವ ಪ್ರಯತ್ನ ನಿಲ್ಲಬೇಕು ಎಂದು ಅವರು ಆಗ್ರಹಿಸಿದ್ದಾರೆ.

126 ಕಿ.ಮೀ. ಯೋಜನೆಯ ವೆಚ್ಚ ₹18,000 ಕೋಟಿ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಒತ್ತಾಯ

ಬಿಎಸ್‌ಎಂಐಎಲ್ ಸಂಸ್ಥೆಯು ನಗರದಾದ್ಯಂತ ಒಟ್ಟು 126 ಕಿ.ಮೀ. ಉದ್ದದ 13 ಎಲಿವೇಟೆಡ್ ಕಾರಿಡಾರ್‌ಗಳನ್ನು ₹18,000 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿದೆ. ಪ್ರತಿಭಟನಾಕಾರರು ಹಾಗೂ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಅವರು ಈ ಯೋಜನೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಾವಿರಾರು ಕೋಟಿ ಹಣವನ್ನು ಮೇಲ್ಸೇತುವೆಗಳಿಗೆ ಖರ್ಚು ಮಾಡುವ ಬದಲು, ಸ್ವತಂತ್ರ ಸಂಚಾರ ಮತ್ತು ಪರಿಸರ ಅಧ್ಯಯನಗಳನ್ನು ಪ್ರಕಟಿಸಬೇಕು. ಫ್ಲೈಓವರ್‌ಗಳು ಸಂಚಾರ ದಟ್ಟಣೆಯನ್ನು ಪರಿಹರಿಸುವುದಿಲ್ಲ, ಬದಲಿಗೆ ಸಮಸ್ಯೆಯನ್ನು ಒಂದು ಜಂಕ್ಷನ್‌ನಿಂದ ಇನ್ನೊಂದಕ್ಕೆ ವರ್ಗಾಯಿಸುತ್ತವೆ. ಬದಲಾಗಿ ಮೆಟ್ರೋ ಯೋಜನೆಯನ್ನು ತ್ವರಿತಗೊಳಿಸಿ, ಬಸ್ ಸಾರಿಗೆ ಹಾಗೂ ಜಂಕ್ಷನ್ ನವೀಕರಣಕ್ಕೆ ಆದ್ಯತೆ ನೀಡಬೇಕು" ಎಂದು ಸಂಸದರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ: ₹3,060 ಕೋಟಿ ಮೌಲ್ಯದ 9 ಟೆಂಡರ್‌ಗಳು ರದ್ದು!

ನಾಗರಿಕರ ತೀವ್ರ ವಿರೋಧ ಹಾಗೂ ತಜ್ಞರ ಸಮಿತಿಯ ಪರಿಶೀಲನೆಯ ಬೆನ್ನಲ್ಲೇ, ನಗರಾಭಿವೃದ್ಧಿ ಇಲಾಖೆಯು ಸುಮಾರು ₹3,060 ಕೋಟಿ ಮೌಲ್ಯದ 9 ಫ್ಲೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್ ಬಿಡ್ಡಿಂಗ್ (ಟೆಂಡರ್) ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ಟೆಂಡರ್ ಪ್ರಕ್ರಿಯೆಯಲ್ಲಿ ಗ್ರಾಮೀಣ ಕಾಮಗಾರಿ ಮತ್ತು ರೈಲ್ವೆ ಮೇಲ್ಸೇತುವೆಗಳ ಅನುಭವ ಹೊಂದಿದ ಸಂಸ್ಥೆಗಳನ್ನು ನಿಯಮಬಾಹಿರವಾಗಿ ಪರಿಗಣಿಸಿರುವುದು ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರ್ಗಸೂಚಿ ಮತ್ತು ಕರ್ನಾಟಕ ಕಾಮಗಾರಿ ನಿಯಮಗಳ ಉಲ್ಲಂಘನೆಯಾಗಿರುವುದು ಈ ರದ್ದತಿಗೆ ಪ್ರಮುಖ ಕಾರಣವಾಗಿದೆ.

ಪ್ರತಿಭಟನಾಕಾರರ ಬೇಡಿಕೆಗಳನ್ನು ಸರ್ಕಾರ ಸಂಪೂರ್ಣವಾಗಿ ಈಡೇರಿಸದಿದ್ದರೆ, ಪ್ರಸ್ತಾವಿತ ಯೋಜನೆಯನ್ನು ಸಂಪೂರ್ಣವಾಗಿ ತಡೆಹಿಡಿಯಲು ಕಾನೂನು ಹೋರಾಟ ನಡೆಸುವುದಾಗಿ ನಾಗರಿಕ ಒಕ್ಕೂಟಗಳು ಎಚ್ಚರಿಸಿವೆ.

PREV
Read more Articles on
click me!

Recommended Stories

Shankar Nag: ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ, ಬೇಸರ ವ್ಯಕ್ತಪಡಿಸಿದ ಅರುಂಧತಿ ನಾಗ್
ನಮ್ಮ ಮೆಟ್ರೋ ಪಿಂಕ್ ಲೈನ್ ಪ್ರಯಾಣಿಕರಿಗೆ BMTC ಭರ್ಜರಿ ಗಿಫ್ಟ್‌: 5 ಪ್ರಮುಖ ನಿಲ್ದಾಣಗಳಿಗೆ 30 ವಿಶೇಷ ಫೀಡರ್ ಬಸ್