
ಬೆಂಗಳೂರು: ಇಡೀ ದೇಶಕ್ಕೆ ಮಾದರಿಯಾಗಿದ್ದ ಬೆಂಗಳೂರಿನಲ್ಲಿ ಈಗ ಕಸದ ಸಮಸ್ಯೆ ದೊಡ್ಡದಾಗಿದೆ. ಜನರು ಪ್ಲಾಸ್ಟಿಕ್ ಕವರ್‌ನಲ್ಲಿ ತಮ್ಮ ಮನೆಯ ಕಸ ತುಂಬಿ, ನೇರ ರಸ್ತೆ ಬದಿ ಬಂದು ಎಸೆದು ಹೋಗ್ತಾರೆ. ಇದರಿಂದ ನಮ್ಮ ಊರಿಗೆ ಕೆಟ್ಟ ಹೆಸರು ಬರ್ತಿದೆ ಎಂದು ದಿ.ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ ಸಮೀಪದ ಚೆನ್ನಕೇಶವ ನಗರದಲ್ಲಿ ಶಂಕರ್ ನಾಗ್ ಅವರ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿರುವ ಸುಂದರ ಉದ್ಯಾನವನ್ನು ಅರುಂಧತಿ ನಾಗ್ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರುಂಧತಿ ನಾಗ್ ಅವರು, ಕಸದ ಸಮಸ್ಯೆಯಿಂದ ನಮ್ಮ ಊರಿಗೆ ಕೆಟ್ಟ ಹೆಸರು ಬರ್ತಿದೆ. ಆದ್ದರಿಂದ ನಾವು ಎಲ್ಲರೂ ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲ ಎಂದರೆ, ನಮ್ಮ ಊರಿಗೆ, ನಮ್ಮ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತದೆ. ನಾವು ಎಲ್ಲರೂ ಸೇರಿ ಸಿಂಗಸಂದ್ರವನ್ನು ಬೆಂಗಳೂರಿನಲ್ಲಿಯೇ ಒಂದು ಮಾದರಿ ಕ್ಷೇತ್ರವಾಗಿ ಮಾಡೋಣಾ, ಇದಕ್ಕೆ ನಿಮ್ಮ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ನಮ್ಮ ಜನರಿಗೆ ಕೆಲವರಿಗೆ ಈ ಬಗ್ಗೆ ಪ್ರಜ್ಞೆ ಇರೋದಿಲ್ಲ. ನಾವು ಕಸದ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾನು ಸಿಂಗಸಂದ್ರಕ್ಕೆ ಬಂದು 45 ವರ್ಷಗಳಾಗಿದೆ. ನಮ್ಮ ಮನೆಯಿಂದ ಇಂದಿಗೂ ಒಂದೇ ಒಂದು ಪ್ಲಾಸ್ಟಿಕ್ ಕಸ ಹೊರಗೆ ಹಾಕಿಲ್ಲ. ಇಡೀ ವರ್ಷದ ಪ್ಲಾಸ್ಟಿಕ್ ಹಾಗೂ ಗಾಜಿನ ಕಸವನ್ನು ನಾವು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನೀಡುತ್ತೇವೆ. ನಮ್ಮ ಮನೆಯ ಪ್ಲಾಸ್ಟಿಕ್ ಕಸ ಇದುವರೆಗೂ ಡಂಪಿಂಗ್ ಯಾರ್ಡ್‌ಗೆ ಹೋಗಿಲ್ಲ ಎಂದು ಹೇಳಿದರು.
ನಾವುಗಳು ಜವಾಬ್ದಾರಿ ತೆಗೆದುಕೊಂಡು ಇಲ್ಲದಿದ್ದರೆ ಕರ್ನಾಟಕ ಹಾಳಾಗುತ್ತೆ. ಎಲ್ಲಾ ನಮ್ಮ ನಿಮ್ಮ ಕೈಯಲ್ಲಿ ಇದೆ ಬೆಂಗಳೂರು ನಗರವನ್ನು ಸುಂದರ ನಗರವಾಗಿಸೋಣ, ಜನರ ಅಜ್ಞಾನದಿಂದ ಗಾರ್ಬೇಜ್ ಸಮಸ್ಯೆ ಉಲ್ಬಣಿಸಿದೆ. ಸರ್ಕಾರ ಅವೈಜ್ಞಾನಿಕ ಕಸ ನಿರ್ವಹಣೆ ಬಗ್ಗೆ ಕಠಿಣ ಕಾನೂನು ತರಬೇಕು, ಕಳೆದ 45 ವರ್ಷದಿಂದ ನಮ್ಮ ಮನೆಯಿಂದ ಒಂದು ಪ್ಲಾಸ್ಟಿಕ್ ಹೊರಗಡೆ ಹೋಗಿಲ್ಲ. ಇಡೀ ವರ್ಷದ ಪ್ಲಾಸ್ಟಿಕ್ ಮತ್ತು ಗಾಜನ್ನು ಪ್ರತ್ಯೇಕಿಸಿ ಪಾಲಿಕೆಗೆ ನೀಡುತ್ತೇವೆ. ಇದೇ ರೀತಿ ಎಲ್ಲರೂ ಕಸ ನಿರ್ವಹಣೆ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಅರುಂಧತಿ ನಾಗ್ ಮನವಿ ಮಾಡಿದ್ದಾರೆ.
ಅರುಂಧತಿ ನಾಗ್ ಅವರ ಮನವಿಗೆ ಸ್ಪಂಧಿಸಿದ ಶಾಸಕ ಸತೀಶ್ ರೆಡ್ಡಿ ಅವರು, ನಾವು ಮನೆ ಮನೆ ಹೋಗಿ ಕಸ ಸಂಗ್ರಹ ಮಾಡುವ ವಿಧಾನವನ್ನು ಮತ್ತಷ್ಟು ವೈಜ್ಞಾನಿಕ ಮಾಡುತ್ತಿದ್ದೇವೆ. ಯಾರಾದರೂ ಮನೆಯಿಂದ ಕಸ ಕೊಟ್ಟಿಲ್ಲ ಎಂದರೆ, ಮೂರು ದಿನ ನೋಡಿ ಆ ಬಳಿಕ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಇಂತಹ ವ್ಯವಸ್ಥೆ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.