
ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.6): ಸಮರ್ಪಕವಾಗಿ ಕೆಲಸಕ್ಕೆ ಹಾಜರಾಗದ ಪೌರ ಕಾರ್ಮಿಕರನ್ನು ಕೆಲಸದಿಂದ ನಿರ್ದಾಕ್ಷೀಣ್ಯವಾಗಿ ವಜಾಗೊಳಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಜಿಬಿಎ ವ್ಯಾಪ್ತಿಯ ಸಂಸದರು, ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪೌರಕಾರ್ಮಿಕರನ್ನು ನಿಯೋಜಿಸಿರುವ ಸ್ಥಳಗಳಲ್ಲಿ ಸುಮಾರು ಶೇ.30ರಷ್ಟು ಮಂದಿ ಕರ್ತವ್ಯಕ್ಕೆ ಸಮರ್ಪಕವಾಗಿ ಹಾಜರಾಗುತ್ತಿಲ್ಲ. ಕೆಲಸಕ್ಕೆ ನಿಯಮಿತವಾಗಿ ಹಾಜರಾಗದ ಪೌರಕಾರ್ಮಿಕರಿಗೆ ಮೂರು ಬಾರಿ ನೋಟಿಸ್ ನೀಡಲಾಗುವುದು. ನೋಟಿಸ್‌ಗಳಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವುದು ಪೌರ ಕಾರ್ಮಿಕರ ಆದ್ಯ ಕರ್ತವ್ಯ. ಅವರು ಕಸ ಸಂಗ್ರಹಣೆಗೆ ತೆರಳದಿದ್ದರೆ ಜನ ಕಸವನ್ನು ರಸ್ತೆಗೆ ಎಸೆಯುತ್ತಾರೆ. ಇದರಿಂದ ಅನಗತ್ಯವಾಗಿ ಕಸದ ಬ್ಲಾಕ್‌ಸ್ಪಾಟ್ ನಿರ್ಮಾಣಗೊಳ್ಳುತ್ತಿವೆ. ಶೇ.30 ರಷ್ಟು ಪೌರ ಕಾರ್ಮಿಕರು ಪ್ರತಿನಿತ್ಯ ತಮ್ಮ ಕೆಲಸಕ್ಕೇ ಹಾಜರಾಗದಿದ್ದರೆ -ನಗರವನ್ನು ಸ್ವಚ್ಚವಾಗಿಡುವುದು ಹೇಗೆ? ಎಂದು ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಒಟ್ಟು 33 ಪ್ಯಾಕೇಜ್ ರೂಪಿಸಲಾಗಿದೆ. ಇದರಲ್ಲಿ 21 ಪ್ಯಾಕೇಜ್‌ಗಳಿಗೆ ಅನುಮೋದನೆ ದೊರೆತಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಪ್ರಸ್ತುತ ಇರುವ ಆಟೋ ಟಿಪ್ಪರ್‌ಗಳ ಸಾಮರ್ಥ್ಯ 1 ಟನ್ ಮಾತ್ರವಿದೆ. ಹೊಸ ಟೆಂಡರ್ ನಲ್ಲಿ ತ್ಯಾಜ್ಯ ಸಂಗ್ರಹಣೆಗೆ 3 ಟನ್ ಸಾಮರ್ಥ್ಯದ ಹೊಸ ವಾಹನಗಳನ್ನು ಬಳಸಲಾಗುವುದು. ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿರಲಿದೆ. ಪ್ರತಿಯೊಂದು ಆಟೋಗೆ ನಿರ್ದಿಷ್ಟ ಮಾರ್ಗವನ್ನು ನಿಗದಿಪಡಿಸಲಾಗುವುದು ಹಾಗೂ ಪ್ರತಿದಿನವೂ ನಿಗದಿತ ಮಾರ್ಗದಲ್ಲಿ ಸಂಚರಿಸಿ ತ್ಯಾಜ್ಯ ಸಂಗ್ರಹಿಸುವುದು ಕಡ್ಡಾಯವಾಗಿರಲಿದೆ ಎಂದು ಹೇಳಿದರು.
ಸಾರ್ವಜನಿಕರು ರಸ್ತೆಗಳಲ್ಲಿ ತ್ಯಾಜ್ಯವನ್ನು ಬಿಸಾಡುವುದನ್ನು ಸಂಪೂರ್ಣ ನಿಲ್ಲಿಸಬೇಕು. ರಸ್ತೆ ಬದಿಯಲ್ಲಿ ಕಸದ ಡಬ್ಬಿ ಇಡುವುದಿಲ್ಲ. ಪ್ರತಿಯೊಂದು ಮನೆಗೂ ತ್ಯಾಜ್ಯ ಸಂಗ್ರಹಣಾ ವಾಹನ ಕಳುಹಿಸುತ್ತೇವೆ. ಸಾರ್ವಜನಿಕರು ತಮ್ಮ ಮನೆಯ ತ್ಯಾಜ್ಯವನ್ನು ಕಡ್ಡಾಯವಾಗಿ ವಾಹನಕ್ಕೆ ನೀಡಬೇಕು. ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಬಾರದು ಎಂದು ಸಚಿವರು ಮನವಿ ಮಾಡಿದರು.
ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ತ್ಯಾಜ್ಯ ನೀಡಲು ಸಾಧ್ಯವಾಗದ ಸಂದರ್ಭಗಳಲ್ಲಿ, ಮನೆಯ ಕಾಂಪೌಂಡ್ ಅಥವಾ ಗ್ರಿಲ್‌ಗೆ ತ್ಯಾಜ್ಯದ ಚೀಲವನ್ನು ನೇತುಹಾಕಬಹುದು. ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿ ಅಲ್ಲಿಂದಲೇ ಅದನ್ನು ಸಂಗ್ರಹಿಸಿ, ಡಬ್ಬಿಗಳನ್ನು ಅಲ್ಲಿಯೇ ಇಡುತ್ತಾರೆ ಎಂದರು.