
ಬೆಂಗಳೂರು [ಅ.15] : ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು ಪರಮೇಶ್ವರ್ ಕಾರು ಚಾಲಕನನ್ನು ಮತ್ತೊಮ್ಮೆ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ರಮೇಶ್ ಸ್ನೇಹಿತರ ಪೈಕಿ ಪರಮೇಶ್ವರ್ ಅವರ ಕಾರು ಚಾಲಕ ಅನಿಲ್‌ಗೂ ಕರೆ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಅನಿಲ್ ವಿಚಾರಣೆ ವೇಳೆ, ರಮೇಶ್ ಅ.10 ರಂದು ಕರೆ ಮಾಡಿದ್ದರು. ಮಿಸ್ ಆಗಿ ಫೋನ್ ಮಾಡಿದ್ದೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಪುನಃ ನಾನು ರಮೇಶ್‌ಗೆ ಕರೆ ಮಾಡಿದ್ದೆ, ಅವರ ಕರೆ ಸ್ವೀಕರಿಸಲಿಲ್ಲ. ಕೆಲ ಸಮಯದ ಬಳಿಕ ಅವರ ಆತ್ಮಹತ್ಯೆ ಸುದ್ದಿ ತಿಳಿಯಿತು ಎಂದು ಹೇಳಿಕೆ ನೀಡಿದ್ದಾರೆ. ಅನಿಲ್ ಹೇಳಿಕೆಯಲ್ಲಿ ಅನುಮಾನಗಳಿದ್ದು, ಮತ್ತೊಮ್ಮೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ಘಟನೆ ಹಿನ್ನೆಲೆಯಲ್ಲಿ ರಮೇಶ್ ಒಳ ಹಾಗೂ ಹೊರ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.