
ಬೆಂಗಳೂರು (ಜ. 31): ಹಳೇ ಮೈಸೂರು ರಸ್ತೆ(ಮಾಗಡಿ ರಸ್ತೆ) ಹಾಗೂ ವಾಟಾಳ್ ನಾಗರಾಜ್ ರಸ್ತೆ ವೈ ಜಂಕ್ಷನ್‌ನಲ್ಲಿ ಗ್ರೇಡ್ ಸೆಪರೇಟರ್ ಯೋಜನೆ ಕಾಮಗಾರಿ ಚುರುಕಿನಿಂದ ಸಾಗಿದ್ದು, ಇನ್ನೆರಡು ತಿಂಗಳಲ್ಲಿ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಅಂದಾಜು 30 ಕೋಟಿ ರುಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಈ ವೈ ಜಂಕ್ಷನ್ ಗ್ರೇಡ್ ಸೆಪರೇಟರ್ ಯೋಜನೆಯು ಮೆಜೆಸ್ಟಿಕ್ (ಡಾ ವಾಟಾಳ್ ನಾಗರಾಜ್ ರಸ್ತೆ ಮಾರ್ಗವಾಗಿ) ರಸ್ತೆಯು ರಾಜಾಜಿನಗರ ಮಾರ್ಗವಾಗಿ ತುಮಕೂರು ರಸ್ತೆ ಮತ್ತು ಡಾ. ರಾಜ್‌ಕುಮಾರ್ ರಸ್ತೆ ಮೂಲಕ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.
ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಈ ರಸ್ತೆಯ ಓಕಳೀಪುರಂ ಜಂಕ್ಷನ್‌ನಲ್ಲಿ ಈಗಾಗಲೇ ನಿರ್ಮಾಣವಾಗಿರುವ ಅಷ್ಟಪಥ ಕಾರಿಡಾರ್ ಗ್ರೇಡರ್ ಸೆಪರೇಟರ್‌ಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಇದರಿಂದ ಮೆಜೆಸ್ಟಿಕ್ ಮತ್ತು ರಾಜಾಜಿನಗರ ಕಡೆಯಿಂದ ಬರುವ ವಾಹನಗಳು ಈ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಇರುವುದರಿಂದ ದಟ್ಟಣೆ ಪ್ರಮಾಣ ಹೆಚ್ಚುತ್ತಿದೆ.
ಇದನ್ನೂ ಓದಿ: ಹೈಕೋರ್ಟ್ ಛೀಮಾರಿ ಹಾಕಿದರೂ ಬುದ್ಧಿ ಕಲಿಯದ BBMP: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ!
ಈ ಸಂಚಾರಿ ವಾಹನ ದಟ್ಟಣೆ ನಿವಾರಿಸಲು ವಾಟಾಳ್ ನಾಗರಾಜ್ ರಸ್ತೆ ಮತ್ತು ಮಾಗಡಿ ವಿಭಾಗಿಸುವ ರಸ್ತೆ ವೈ ಜಂಕ್ಷನ್‌ನಲ್ಲಿ ಮೆಜೆಸ್ಟಿಕ್ ಮತ್ತು ರಾಜಾಜಿನಗರ ಕಡೆ ಒಂದು 11 ಮೀಟರ್ ಅಗಲದ ತ್ರಿಪಥದ ಕೆಳಸೇತುವೆ ಹಾಗೂ ಮಾಗಡಿ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ 7 ಮೀಟರ್ ಅಗಲದ ದ್ವಿಪಥದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಈಗಾಗಲೇ ಕೆಳಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರವೂ ಯಶಸ್ವಿಯಾಗಿ ನಡೆಯುತ್ತಿದೆ.
ಡಾ. ವಾಟಾಳ್ ನಾಗರಾಜ್ ರಸ್ತೆಯಿಂದ ಬರುವ ವಾಹನಗಳು ವೈ ಜಂಕ್ಷನ್‌ನಲ್ಲಿ ಮಾಗಡಿ ರಸ್ತೆ ಮತ್ತು ರಾಜಾಜಿನಗರ ರಸ್ತೆಗೆ ಕಡೆಗೆ ವಿಭಾಗಗೊಳ್ಳಲಿವೆ. ಅದಕ್ಕಾಗಿ ಸಿಗ್ನಲ್ ಫ್ರೀ ವೈ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಮೇಲ್ಸೇತುವೆ ಉದ್ದ 416.646 ಮೀಟರ್(ವಯಾಡಿಕ್ಟ್ ಸೇರಿ) ಇರಲಿದೆ. ವಯಾಡಿಕ್ಟ್ ಉದ್ದ 110 ಮೀಟರ್, ಕ್ಯಾರೇಜ್‌ವೇ ಅಗಲ 7 ಮೀಟರ್ ಇದ್ದು, ರಸ್ತೆ ತಡೆಗೋಡೆಯು ಮಾಗಡಿ ರಸ್ತೆ ಕಡೆಗೆ 95.80 ಮೀಟರ್ ಮತ್ತು ಮೆಜೆಸ್ಟಿಕ್ ಕಡೆ 118 ಮೀಟರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bengaluru Roads: ರಸ್ತೆಗಳು ದೀರ್ಘಾವಧಿಗೆ ಏಕೆ ಬಾಳಲ್ಲ ಎಂದು ಪ್ರಶ್ನಿಸಿದ ಹೈಕೋರ್ಟ್
ಮುಂದಿನ ವಾರ ಕಾಂಕ್ರೀಟ್ ಕಾಮಗಾರಿ: ಮಾಗಡಿ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಬರುವ ರಸ್ತೆಯ ಜಂಕ್ಷನ್‌ನ ಚಾವಣಿ ನಿರ್ಮಾಣದ ತಯಾರಿ ನಡೆಯುತ್ತಿದ್ದು, 1900 ಘನ ಮೀಟರ್ ಕಾಂಕ್ರೀಟ್ ಹಾಕಬೇಕಿದೆ. ಮುಂದಿನ ವಾರದಿಂದ ಚಾವಣಿ (ರೂಫಿಂಗ್) ಕಾರ್ಯ ಆರಂಭವಾಗಲಿದೆ. ಆ ನಂತರ ಸತತ ಏಳು ದಿನ ಕಾಂಕ್ರಿಟ್ ಕಾಮಗಾರಿ ನಡೆಯಲಿದೆ. ಈಗಾಗಲೆ ಸೆಂಟ್ರಿಂಗ್ ಕೆಲಸ ನಡೆಯುತ್ತಿದೆ.ಬಳಿಕ ಒಂದು ದಿನಕ್ಕೆ 250 ಘನ (ಕ್ಯುಬಿಕ್) ಮೀಟರ್ ಕಾಂಕ್ರಿಟ್ ತುಂಬುವ (ಫ್ಲೋರ್) ಕಾರ್ಯ ನಡೆಯಲಿದೆ.
ಹೀಗೆ ಗಂಟೆಗೆ ಮೂರು ಲಾರಿಗಳಂತೆ ನಿತ್ಯ 50ರಿಂದ 70 ಲಾರಿಗಳು ಕಾಂಕ್ರಿಟ್ ಸುರಿಯಲಿವೆ. ಸತತ ಏಳು ದಿನಗಳ ಕಾಲ ಕಾಂಕ್ರಿಟ್ ಕಾಮಗಾರಿ ನಡೆಯುತ್ತದೆ. ಈಗಾಗಲೇ ಸ್ಟೀಲ್ ಕಟ್ಟುವ ಕಾಮಗಾರಿಯನ್ನು ಆರಂಭಿಸಲಾಗಿದೆ. ಮಾಚ್‌ರ್ 31ರೊಳಗೆ ವೈ ಜಂಕ್ಷನ್ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ಹಿರಿಯ ಎಂಜಿನಿಯರ್‌ಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
"ವೈ ಜಂಕ್ಷನ್ ಕಾಮಗಾರಿಯನ್ನು ಮಾ.31ರೊಳಗೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದ್ದು, ಏ.15ರೊಳಗೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಮಾಗಡಿ ರಸ್ತೆ, ರಾಜಾಜಿ ನಗರ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವಾಗ ಉಂಟಾಗುತ್ತಿದ್ದ ವಾಹನ ದಟ್ಟಣೆ ನಿವಾರಣೆ ಈ ರಸ್ತೆ ಸಹಕಾರಿಯಾಗಲಿದೆ. ಇದೊಂದು ಸಿಗ್ನಲ್ ಫ್ರೀ ಕಾರಿಡಾರ್ ಆಗಿದೆ" ಎಂದು ರಸ್ತೆ, ಮೂಲಭೂತ ಸೌಕರ್ಯ, ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದ್ದಾರೆ.
ಸಂಪತ್ ತರೀಕೆರೆ, ಕನ್ನಡಪ್ರಭ ವಾರ್ತೆ