*ವಾರಾಂತ್ಯ ಕರ್ಫ್ಯೂ ಹಿನ್ನೆಲೆ ತುರ್ತು ಸೇವಾ ಸಿಬ್ಬಂದಿ ಸಂಚಾರಕ್ಕೆ ಮಾತ್ರ ಬಸ್
*ಕರ್ಫ್ಯೂ ಇದ್ರೂ ವಾರಾಂತ್ಯದಲ್ಲಿ ಮೆಟ್ರೋ ರೈಲು ಓಡಾಡುತ್ತೆ
*ಬೆಳಗ್ಗೆ 8ರಿಂದ ರಾತ್ರಿ 9ರ ತನಕ ಸೇವೆ: ಪ್ರತಿ 20 ನಿಮಿಷಕ್ಕೊಂದು ರೈಲು
ಬೆಂಗಳೂರು (ಜ. 6): ಕೊರೋನಾ ಸೋಂಕು (Covid 19) ಹರಡುವುದನ್ನು ನಿಯಂತ್ರಿಸಲು ಸರ್ಕಾರ ಜಾರಿ ಮಾಡಿರುವ ವಾರಾಂತ್ಯ ಕಫä್ರ್ಯ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ನಗರದಲ್ಲಿ ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಬಿಎಂಟಿಸಿ ನಿರ್ಧರಿಸಿದೆ. ತುರ್ತು ಸೇವೆ ವಲಯದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತು ಪಡಿಸಿ ಇತರೆ ಸಾಮಾನ್ಯ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಇಲ್ಲದಂತೆ ಕ್ರಮ ವಹಿಸಲು ನಿರ್ಧರಿಸಿರುವುದಾಗಿ ಬಿಎಂಟಿಸಿ (BMTC) ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದ್ದಾರೆ. ಇನ್ನು ಕೊರೋನಾ ಸೋಂಕು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ವಾರಾಂತ್ಯದ ದಿನದಲ್ಲಿ ಮೆಟ್ರೋ ರೈಲು ಸೇವೆ ಬೆಳಗ್ಗೆ 8ರಿಂದ ರಾತ್ರಿ 9ರ ತನಕ ಮಾತ್ರ ಇರಲಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ತಿಳಿಸಿದೆ.
ಕಂಟೈನ್ಮೆಂಟ್ ವಲಯಗಳನ್ನು ಹೊರತು ಪಡಿಸಿ ಇನ್ನುಳಿದಂತೆ ಶೇ.10ರಷ್ಟು ಬಸ್‌ಗಳನ್ನು ಕರ್ಫ್ಯೂ ನಡುವೆ ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆಯವರೆಗೂ ಕಾರ್ಯಾಚರಣೆ ಮಾಡಲಿವೆ. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ, ನಿಗಮ ಮಂಡಳಿಗಳು, ನ್ಯಾಯಾಲಯಗಳು, ಪೊಲೀಸ್ ಇಲಾಖೆ, ಅಗ್ನಿ ಶಾಮಕ ಮತ್ತು ತುರ್ತು ಸೇವೆಯಲ್ಲಿ ಕಾರ್ಯನಿರ್ವಹಿಸುವವರು ಗುರುತಿನ ಚೀಟಿಯೊಂದಿಗೆ ಪ್ರಯಾಣ ಬೆಳಸಬಹುದಾಗಿದೆ.
ಜೊತೆಗೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳ ಪ್ರಯೋಗಾಲಯಗಳ ಸಿಬ್ಬಂದಿ, ಬ್ಯಾಂಕ್‌ಗಳ ಸಿಬ್ಬಂದಿ, ಪತ್ರಕರ್ತರು, ಪ್ರಯಾಣ ಟಿಕೆಟ್ ಮತ್ತು ಗುರುತಿನ ಚೀಟಿ ಹೊಂದಿರುವ ರೈಲು ಮತ್ತು ವಿಮಾನ ಪ್ರಯಾಣಿಕರು, ಪ್ರವೇಶಪತ್ರ ಹೊಂದಿದ್ದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಸರ್ಕಾರದಿಂದ ಅನುಮತಿ ಪಡೆದಿರುವ ಕೈಗಾರಿಕೆಗಳ ಸಿಬ್ಬಂದಿ ಪ್ರಯಾಣಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ.
ನಿಬಂಧನೆ:
ಬಸ್‌ಗಳ ಚಾಲಕ ಮತ್ತು ನಿರ್ವಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಸರ್ ಬಳಕೆ ಮಾಡಿ ಶುಚಿತ್ವ ಕಾಪಾಡಬೇಕು. ಆಸನಗಳು ಖಾಲಿ ಇದ್ದಲ್ಲಿ ಮಾತ್ರ ಪ್ರಯಾಣಿಕರು ಹತ್ತಲು ಅವಕಾಶ ನೀಡಬೇಕು. ಜ್ವರ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುವವರು ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡಬಾರದು. ನಿಗದಿತ ಸ್ಥಳಗಳಲ್ಲಿ ಮಾತ್ರ ಬಸ್ ನಿಲ್ಲಿಸಬೇಕು. ಮಾಸ್ಕ್ ಇಲ್ಲದ ಪ್ರಯಾಣಿಕರು ಬಸ್ ಹತ್ತಲು ಅವಕಾಶ ನೀಡಬಾರದು ಎಂದು ಸೂಚನೆ ನೀಡಲಾಗಿದೆ.
ಪ್ರಯಾಣಿಕರಿಗೆ ಎಚ್ಚರಿಕೆ ಕ್ರಮಗಳು:
ಪ್ರಯಾಣಿಕರು ಮೂಗು ಮತ್ತು ಬಾಯಿ ಮುಚ್ಚುಕೊಳ್ಳವಂತಹ ಗುಣಮಟ್ಟದ ಮಾಸ್ಕ್ ಧರಿಸಿರಬೇಕು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರತಿ ಸಾಲಿನಲ್ಲಿಯೇ ಬಸ್ ಹತ್ತಲು ಕ್ರಮ ವಹಿಸಬೇಕು. ಆಸನಗಳು ಭರ್ತಿಯಾಗಿದ್ದಲ್ಲಿ ಮುಂದಿನ ಬಸ್ಸಿಗಾಗಿ ಕಾಯಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ಕರ್ಫ್ಯೂ ಇದ್ರೂ ವಾರಾಂತ್ಯದಲ್ಲಿ ಮೆಟ್ರೋ ರೈಲು ಓಡಾಡುತ್ತೆ
ರಾಜ್ಯದಲ್ಲಿ ಮುಂದಿನ ಎರಡು ವಾರಗಳ ಕಾಲ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮೆಟ್ರೋ ತನ್ನ ಕಾರ್ಯಾಚರಣಾ ಅವಧಿಯನ್ನು ಪರಿಷ್ಕರಿಸಿದೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 8ಕ್ಕೆ ಮೊದಲ ಮೆಟ್ರೋ ತನ್ನ ಆರಂಭದ ನಿಲ್ದಾಣಗಳಾದ ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ ಮತ್ತು ಬೈಯ್ಯಪ್ಪನಹಳ್ಳಿ ನಿಲ್ದಾಣಗಳಿಂದ ಹೊರಡಲಿದೆ. ರಾತ್ರಿ 9 ಗಂಟೆಗೆ ಮೊದಲ ನಿಲ್ದಾಣದಿಂದ ದಿನದ ಕೊನೆಯ ಮೆಟ್ರೋ ಹೊರಡಲಿದೆ. ವಾರಾಂತ್ಯದ ದಿನದಲ್ಲಿ 20 ನಿಮಿಷಕ್ಕೆ ಒಂದು ಮೆಟ್ರೋ ಸಂಚರಿಸಲಿದೆ.
ಇದನ್ನೂ ಓದಿ: Mekedatu Politics: ಇದು ಕೊರೋನಾ ಕರ್ಫ್ಯೂ ಅಲ್ಲ, ರಾಜಕೀಯ ಕರ್ಫ್ಯೂ: ಡಿಕೆಶಿ
ಉಳಿದಂತೆ ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 5 ಗಂಟೆಯಿಂದ ಸೇವೆ ಆರಂಭವಾಗಿ ರಾತ್ರಿ 11 ಗಂಟೆಗೆ ಕೊನೆಯ ಮೆಟ್ರೊ ತನ್ನ ಮೊದಲ ನಿಲ್ದಾಣದಿಂದ ಹೊರಡಲಿದೆ. ಆದರೆ ಶುಕ್ರವಾರ ಮಾತ್ರ ರಾತ್ರಿ 10 ಗಂಟೆಗೆ ಆರಂಭದ ನಿಲ್ದಾಣದಿಂದ ಕೊನೆಯ ಮೆಟ್ರೋ ಹೊರಡಲಿದೆ. ಕರ್ಫ್ಯೂ ಜಾರಿಯಲ್ಲಿರುವ ಅವಧಿ ತನಕ ಈ ವೇಳಾಪಟ್ಟಿಜಾರಿಯಲ್ಲಿರಲಿದೆ ಎಂದು ನಿಗಮ ತಿಳಿಸಿದೆ.