*ರಾತ್ರಿ- ವಾರಾಂತ್ಯ ಕರ್ಫ್ಯೂ ಸಂದರ್ಭ ಕಟ್ಟುನಿಟ್ಟಿನ ಕ್ರಮ
*ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಕ್ರಿಮಿನಲ್ ಕೇಸ್: ಪಂತ್
* ಕರ್ಫ್ಯೂ ಅವಧಿಯಲ್ಲೇ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ
ಬೆಂಗಳೂರು(ಜ. 6): ನಗರದಲ್ಲಿ ವಾರಾಂತ್ಯ ಕರ್ಫ್ಯೂ ವೇಳೆ ಸಂಚಾರಕ್ಕೆ ‘ಪೊಲೀಸ್ ಪಾಸ್’ ವಿತರಣೆ ಮಾಡುವುದಿಲ್ಲ. ಸರ್ಕಾರ ನೀಡಿರುವ ವಲಯಗಳಿಗೆ ವಿನಾಯ್ತಿ ಹೊರತುಪಡಿಸಿದರೆ ಬೇರೆ ಯಾರಿಗೂ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ (Kamla Pant) ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಕಫ್ರ್ಯೂ ಹಾಗೂ ವಾರಾಂತ್ಯದ ಕಫ್ರ್ಯೂ ಅನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತದೆ. ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಕ್ರಿಮಿನಲ್ ಕೇಸ್ (Criminal Case) ದಾಖಲಿಸಲಾಗುತ್ತದೆ, ದಿನಸಿ ಅಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹಾಗೆಂದು ಸಿಕ್ಕ-ಸಿಕ್ಕ ಕಡೆಗಳಲ್ಲಿ ಓಡಾಡುವಂತಿಲ್ಲ. ಅಗತ್ಯ ಸೇವೆಯವರು ಗುರುತಿನ ಚೀಟಿ, ಸೂಕ್ತ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಂಡು ಸಂಚರಿಸಬೇಕು. ಇಲ್ಲವಾದಲ್ಲಿ ಪ್ರಕರಣ ದಾಖಲಿಸಿಕೊಂಡು, ದಂಡ ವಿಧಿಸುವುದರ ಜತೆಗೆ ವಾಹನ ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಯಾವುದೇ ಪಾಸ್ ಇಲ್ಲ:
ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಓಡಾಡಲು ನಾಗರಿಕರಿಗೆ ಪೊಲೀಸ್ ಇಲಾಖೆಯಿಂದ ಯಾವುದೇ ಪಾಸ್ ನೀಡುವುದಿಲ್ಲ. ವಿನಾಯ್ತಿ ಇರುವವರು ದಾಖಲೆ ತೋರಿಸಿ ಓಡಾಡಬಹುದು. ವಾರಾಂತ್ಯದಲ್ಲಿ ಸರ್ಕಾರದ ವಿನಾಯ್ತಿ ವಲಯ ಹೊರತುಪಡಿಸಿದರೆ ಇನ್ನುಳಿದ ಎಲ್ಲ ವಹಿವಾಟು ಸಂಪೂರ್ಣ ಬಂದ್ ಆಗಲಿದೆ ಎಂದು ಆಯುಕ್ತರು ಹೇಳಿದರು.ಕೊರೋನಾ ಸೋಂಕು ಹರಡುವಿಕೆಗೆ ತಡೆಗಟ್ಟಲು ಸರ್ಕಾರದ ಸೂಚನೆ, ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ವಾರಾಂತ್ಯದ ಕಪ್ರ್ಯೂ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಡಿಸಿಪಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Coronavirus ಕೊರೋನಾ ನಿಯಂತ್ರಣಕ್ಕೆ ನೋಡಲ್ ಅಧಿಕಾರಿಗಳನ್ನ ನೇಮಿಸಿದ ರಾಜ್ಯ ಸರ್ಕಾರ
ಕೊರೋನಾ ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಸಭೆ ಹಾಗೂ ಸಮಾರಂಭಗಳಲ್ಲಿ ಕಡ್ಡಾಯವಾಗಿ ನಿಗದಿತ ಸಂಖ್ಯೆಯಲ್ಲಿ ಜನರು ಇರಬೇಕು. ಅಲ್ಲದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಸರ್ಕಾರದ ಅದೇಶವನ್ನು ಪಾಲನೆ ಮಾಡಬೇಕು ಎಂದು ತಾಕೀತು ಮಾಡಿದರು.
144 ಸೆಕ್ಷನ್ ಜಾರಿ
ನಗರ ವ್ಯಾಪ್ತಿಯಲ್ಲಿ ರಾತ್ರಿ ಕಪ್ರ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಅವಧಿಯಲ್ಲೇ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಆಯುಕ್ತ ಕಮಲ್ ಪಂತ್ ಬುಧವಾರ ಆದೇಶ ಹೊರಡಿಸಿದ್ದಾರೆ. ರಾತ್ರಿ ಕಪ್ರ್ಯೂ ವೇಳೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆ ತನಕ ಹಾಗೂ ವಾರಾಂತ್ಯದ ಕಪ್ರ್ಯೂ ವೇಳೆ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5 ಗಂಟೆವೆರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ.
ಬ್ಯಾಟರಾಯನಪುರ ಠಾಣೆ ಮಹಿಳಾ ಎಸೈಗೆ ಸೋಂಕು
ಮೊದಲೆರೆಡು ಅಲೆಗಳಲ್ಲಿ ಸಾಕಷ್ಟುಸಾವು-ನೋವು ಅನುಭವಿಸಿದ್ದ ಪೊಲೀಸರಿಗೆ ಈಗ ಮತ್ತೆ ಕೊರೋನಾ ಸೋಂಕು ಭೀತಿ ಸೃಷ್ಟಿಸಿದೆ. ಈಗಾಗಲೇ ಕೆಲ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಠಾಣೆಗಳನ್ನು ಸ್ಯಾನಿಟೈಸ್ ಸಹ ಮಾಡಲಾಗಿದೆ. ಬ್ಯಾಟರಾಯನಪುರ ಠಾಣೆ ಮಹಿಳಾ ಪಿಎಸ್‌ಐ ಅವರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಠಾಣೆಯ 60 ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಪೊಲೀಸರಿಗೆ ಅಗತ್ಯವಾದ ಸುರಕ್ಷಾತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂರೇ ದಿನಕ್ಕೆ 4 ಪಟ್ಟು ಸೋಂಕು ಹೆಚ್ಚಳ
ರಾಜಧಾನಿಯಲ್ಲಿ ಕೊರೋನಾ ಸೋಂಕು ಮೂರೇ ದಿನಕ್ಕೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಅಲ್ಲದೆ, ಸೋಂಕು ಪರೀಕ್ಷೆಗೊಳಗಾಗದ ಪ್ರತಿ 100 ಮಂದಿಯಲ್ಲಿ ಐದು ಮಂದಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ಬುಧವಾರ 3605 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. 264 ಮಂದಿ ಗುಣಮುಖರಾಗಿದ್ದು, ಇಂದಿಗೂ 14,762 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 12.72 ಲಕ್ಷಕ್ಕೆ, ಗುಣಮುಖರ ಸಂಖ್ಯೆ 12.4 ಲಕ್ಷಕ್ಕೆ, ಸಾವಿಗೀಡಾದವರ ಸಂಖ್ಯೆ 16,414 ಕ್ಕೆ ಹೆಚ್ಚಳವಾಗಿದೆ.
ಇದನ್ನೂ ಓದಿ: New Covid-19 variant : ಫ್ರಾನ್ಸ್ ನಲ್ಲಿ ಪತ್ತೆಯಾಗಿದೆ IHU, ಒಮಿಕ್ರಾನ್ ಗಿಂತ ಡೇಂಜರ್!
ಜ.1ರಂದು 810, ಜ.2ರಂದು 923, ಜ.3ರಂದು 1041, ಜ.4ರಂದು 2053 ಹೊಸ ಪ್ರಕರಣಗಳು ವರದಿಯಾಗಿದ್ದವು. ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಸಾಗಿ ಬುಧವಾರ ಮೂರೂವರೆ ಸಾವಿರಕ್ಕೆ ಹೆಚ್ಚಿವೆ. ಇದರೊಂದಿಗೆ ಕಳೆದ ಮೂರು ದಿನಗಳ ಹಿಂದೆ ಒಂದು ಸಾವಿರ ಗಡಿದಾಟಿದರ ಹೊಸ ಪ್ರಕರಣಗಳು ಮೂರೇ ದಿನದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿವೆ. 183 ದಿನಗಳ(ಜೂ.3) ಬಳಿಕೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಸೋಂಕಿತರ ಸಾವಿನಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.