ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್: ಜೂನ್‌ನಲ್ಲಿ ಪಿಂಕ್ ಲೈನ್ ಓಪನ್; ಇಂದಿನಿಂದ 15 ದಿನ ಹೈಟೆಕ್ ತಪಾಸಣೆ!

Published : May 02, 2026, 03:57 PM IST
namma metro pink line

ಸಾರಾಂಶ

ಬೆಂಗಳೂರಿನ ನಮ್ಮ ಮೆಟ್ರೋ 'ಪಿಂಕ್ ಲೈನ್' ಜೂನ್ ತಿಂಗಳಲ್ಲಿ ಮೊದಲ ಹಂತದ ಸಂಚಾರಕ್ಕೆ ಸಜ್ಜಾಗುತ್ತಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದಲ್ಲಿ, ರೈಲ್ವೆ ಇಲಾಖೆಯು ಕಟ್ಟುನಿಟ್ಟಿನ ಸುರಕ್ಷತಾ ತಪಾಸಣೆ ನಡೆಸುತ್ತಿದ್ದು, ಚಾಲಕರಹಿತ ರೈಲುಗಳ ಪರೀಕ್ಷೆ ಅಂತಿಮ ಹಂತದಲ್ಲಿದೆ.

ಬೆಂಗಳೂರು (ಮೇ.2): ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ನಮ್ಮ ಮೆಟ್ರೋ 'ಪಿಂಕ್ ಲೈನ್' (Pink Line) ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದ ಮೊದಲ ಹಂತದ ಉದ್ಘಾಟನೆಗೆ ಸಿದ್ಧತೆಗಳು ವೇಗ ಪಡೆದುಕೊಂಡಿದ್ದು, ಜೂನ್ ತಿಂಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವುದು ಬಹುತೇಕ ಖಚಿತವಾಗಿದೆ. ಕೇಂದ್ರ ರೈಲ್ವೆ ಇಲಾಖೆಯ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) ಇಂದಿನಿಂದ ಪಿಂಕ್ ಲೈನ್ ಮಾರ್ಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಿದೆ. ಮುಂದಿನ 15 ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ

ರೈಲಿನ ಗರಿಷ್ಠ ವೇಗ ಮತ್ತು ಅತಿ ಹೆಚ್ಚು ಪ್ರಯಾಣಿಕರಿದ್ದಾಗ ರೈಲಿನ ಸಮತೋಲನ ಹೇಗಿರುತ್ತದೆ ಎನ್ನುವ ಕುರಿತು ಸ್ಪೀಡ್ ಮತ್ತು ಲೋಡ್ ಟೆಸ್ಟ್. ಮೆಟ್ರೋ ಹಳಿಗಳ ಗುಣಮಟ್ಟ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆಯ ಸ್ಥಿತಿಗತಿ ನೋಡಲು ಟ್ರ್ಯಾಕ್ ಮತ್ತು ಪವರ್ ಚೆಕ್ಕಿಂಗ್, ನಿಲ್ದಾಣಗಳಲ್ಲಿನ ಸೌಲಭ್ಯಗಳು ಮತ್ತು ತಾಂತ್ರಿಕ ಸುರಕ್ಷತಾ ಕ್ರಮಗಳ ಅವಲೋಕನ ಮಾಡಲಿದೆ.

ಜೂನ್‌ನಲ್ಲಿ ಸಂಚಾರ ಪಕ್ಕಾ!

ಮೇ ತಿಂಗಳಲ್ಲೇ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 6 ಎಲಿವೇಟೆಡ್ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್‌ಸಿಎಲ್ ಯೋಜಿಸಿತ್ತು. ಆದರೆ, ಅಂತಿಮ ಹಂತದ ತಾಂತ್ರಿಕ ಪರೀಕ್ಷೆಗಳು ವಿಳಂಬವಾದ ಕಾರಣ, ಈಗ ಜೂನ್ ತಿಂಗಳಲ್ಲಿ ವಾಣಿಜ್ಯ ಸಂಚಾರಕ್ಕೆ ಚಾಲನೆ ಸಿಗಲಿದೆ. ಪಿಂಕ್ ಲೈನ್‌ಗಾಗಿ ಬಿಇಎಂಎಲ್ (BEML) ನಿಂದ ಒಟ್ಟು 6 ಚಾಲಕರಹಿತ (Driverless) ರೈಲುಗಳು ಬರಬೇಕಿದೆ. ಈಗಾಗಲೇ 5 ರೈಲುಗಳು ಬೆಂಗಳೂರಿಗೆ ಆಗಮಿಸಿದ್ದು, ಮೇ ಮೊದಲ ವಾರದಲ್ಲಿ ಆರನೇ ರೈಲು ಕೂಡ ಲಗ್ಗೆ ಇಡಲಿದೆ. ಈ 6 ರೈಲುಗಳ ಪರೀಕ್ಷೆ ಮುಗಿಯುತ್ತಿದ್ದಂತೆ ಸಂಚಾರ ಆರಂಭವಾಗಲಿದೆ.

ಪಿಂಕ್ ಲೈನ್ ಹೈಲೈಟ್ಸ್

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.25 ಕಿ.ಮೀ ಉದ್ದದ ಲೈನ್‌ ಇದಾಗಿದೆ. 12 ಭೂಗತ ಮತ್ತು 6 ಎಲೆವೇಟೆಡ್‌ ನಿಲ್ದಾಣಗಳು ಸೇರಿದಂತೆ ಒಟ್ಟು 18 ಸ್ಟೇಷನ್‌ಗಳನ್ನು ಹೊಂದಿದೆ. ಮೊದಲ ಹಂತದ 6 ಎಲಿವೇಟೆಡ್ ನಿಲ್ದಾಣಗಳು ಜೂನ್‌ನಲ್ಲಿ ಆರಂಭ. ಉಳಿದ 13.76 ಕಿ.ಮೀ ಭೂಗತ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ವರ್ಷಾಂತ್ಯಕ್ಕೆ ಪೂರ್ಣ ಮಾರ್ಗ ಓಪನ್ ಆಗುವ ಸಾಧ್ಯತೆ ಇದೆ.

 

PREV
Read more Articles on
click me!

Recommended Stories

ಬೆಂಗಳೂರು: ಅಪರಿಚಿತ ವೃದ್ದೆಯ ಬರ್ಬರ ಹತ್ಯೆ, ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ಬೆಂಗಳೂರು: ಮನೆಯೇ ಆಗಿದ್ದ ಆಟೋ ಮೇಲೆ ಬಿದ್ದ ಮರ, ಗಾಢ ನಿದ್ರೆಯಲ್ಲಿದ್ದ ಚಿಕ್ಕಮಗಳೂರು ಮೂಲದ ಚಾಲಕ ಪವಾಡ ಸದೃಶ ಪಾರು!