
ಬೆಂಗಳೂರು (ಮೇ.1): ಸಿಲಿಕಾನ್ ಸಿಟಿಯ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇಘಾಲಯ ಮೂಲದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ಮತ್ತು KSU ಘಟಕದ ಸದಸ್ಯೆಯಾಗಿದ್ದ ಅಗತ ಬೈತಿಯಂಗುಂ (36) ಎಂದು ಗುರುತಿಸಲಾಗಿದೆ. ಅಗತ ಕಳೆದ ಮೂರು ವರ್ಷಗಳಿಂದ ಮಣಿಪುರ ಮೂಲದ ನವಾಜ್ ಶರೀಫ್ (20) ಎಂಬ ಯುವಕನ ಜೊತೆ ಸಂಜೀವಿನಿ ನಗರದ ಬಾಡಿಗೆ ಮನೆಯೊಂದರಲ್ಲಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಅಗತ ಮತ್ತು ನವಾಜ್ ನಡುವೆ ವಯಸ್ಸಿನ ಅಂತರ (16 ವರ್ಷ) ಹೆಚ್ಚಿದ್ದರಿಂದ ಇಬ್ಬರ ನಡುವೆ ಪದೇ ಪದೇ ಮನಸ್ತಾಪ ಮತ್ತು ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ನವಾಜ್ ಶರೀಫ್ ಬೇರೆ ಯುವತಿಯರ ಜೊತೆ ಮಾತನಾಡುತ್ತಾನೆ ಎಂಬ ಸಂಶಯ ಅಗತ ಅವರಿಗಿತ್ತು. ಕಳೆದ ಬುಧವಾರ ರಾತ್ರಿ ನವಾಜ್ ತನ್ನ ತಾಯಿಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅಗತ ಅವರು ಯಾರೋ ಹುಡುಗಿಯ ಜೊತೆ ಮಾತನಾಡುತ್ತಿದ್ದೀಯ ಎಂದು ಜಗಳ ತೆಗೆದಿದ್ದರು. ಈ ಗಲಾಟೆಯಿಂದ ಬೇಸತ್ತ ನವಾಜ್ ಮನೆಯಿಂದ ಹೊರಗೆ ಹೋಗಿದ್ದರು. ಆ ಸಮಯದಲ್ಲಿ ಮನನೊಂದ ಅಗತ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.