
ಬೆಂಗಳೂರು (ನ.4): ರಾಜ್ಯದಲ್ಲಿ ಚುನಾವಣೆ ನಡೆದು 2023ರಲ್ಲಿ ನಾವು ಅಧಿಕಾರಕ್ಕೆ ಬಂದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಅಂದಿನ ಸರ್ಕಾರ 1180 ಕೋಟಿ ರೂಪಾಯಿ ಬಾಕಿ ನೀಡಬೇಕಿತ್ತು. ಈಗ ನಮ್ಮ ಸರ್ಕಾರ 6362 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ಹಣ ಸರ್ಕಾರದಿಂದ ನಮಗೆ ಹಂತ ಹಂತವಾಗಿ ಬರುತ್ತದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಕಠಿಣ ಪ್ರಶ್ನೆಗೆ ತಬ್ಬಿಬ್ಬಾಗಿಯೇ ಉತ್ತರ ನೀಡಿದ ಸಚಿವರು, ಶಕ್ತಿಯಿಂದ ಲಾಸ್ ಆಗುತ್ತದೆ ಅನ್ನೋದೇಲ್ಲಾ ಸುಳ್ಳು ಎಂದರು. ಆದರೆ, ಹಾಲಿ ಕೆಎಸ್ಆರ್ಟಿಸಿಗೆ ಬರುವ 9 ಸಾವಿರ ಕೋಟಿ ಬಾಕಿ ಹಣದಲ್ಲಿ ರಾಜ್ಯ ಸರ್ಕಾರವೇ 6362 ಕೋಟಿ ರೂಪಾಯಿ ಕೊಡಬೇಕಿದೆ ಅನ್ನೋದನ್ನೂ ಒಪ್ಪಿಕೊಂಡರು.
ಮಾಧ್ಯಮದವರ ಅತಿಯಾದ ಪ್ರಶ್ನೆಗೆ ವರ್ಷವಾರು ಸರ್ಕಾರ ನೀಡಿರುವ ಹಣ ಹಾಗೂ ಬಾಕಿ ಇರಿಸಿಕೊಂಡ ಹಣದ ವಿವರವನ್ನೂ ನೀಡಿದ್ದಾರೆ. ಕೆಎಸ್ಆರ್ಟಿಸಿ 9 ಸಾವಿರ ಕೋಟಿ ನಷ್ಟದಲ್ಲಿದೆ ಅಂತಾ ಹೇಳ್ತಿದ್ದೀರಿ ಸರ್ಕಾರ ಈಗ ಬಾಕಿ ಉಳಿಸಿಕೊಂಡಿರೋ ಐದು ಸಾವಿರ ಕೋಟಿ ಒಂದೇ ವರ್ಷದಲ್ಲಿ ಕೊಡೋಕೆ ಸಾಧ್ಯಾನಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ಸಾಧ್ಯ ಎಂದು ಬೈರತಿ ಸುರೇಶ್ ಉತ್ತರಿಸಿದ್ದಾರೆ. 2023-24ರಲ್ಲಿ ಸರ್ಕಾರದಿಂದ ಕೆಎಸ್ಆರ್ಟಿಸಿಗೆ 3199 ಕೋಟಿ ರೂಪಾಯಿ ಬಿಡುಗಡೆ ಆಗಿದೆ ಎಂದು ಬೈರತಿ ಸುರೇಶ್ ಹೇಳಿದಾಗ 'ಆ ವರ್ಷ ಸರ್ಕಾರ ಎಷ್ಟು ಬಾಕಿ ಉಳಿಸಿಕೊಂಡಿತ್ತು ಅನ್ನೋದನ್ನೂ ತಿಳಿಸಿ' ಎಂದು ಮಾಧ್ಯಮದವರು ಕೇಳಿದರು. ಇದಕ್ಕೆ ಬೈರತಿ ಸುರೇಶ್ ತಬ್ಬಿಬ್ಬಾದಂತೆ ಕಂಡುಬಂದರು. ನಂತರ ಮಾತು ಮುಂದುವರಿಸಿದ ಸಚಿವರು, 2024-25ರಲ್ಲಿ 5015 ಕೋಟಿ ಸರ್ಕಾರ ನೀಡಿದೆ. 2025-26ರಲ್ಲಿ 5300 ಕೋಟಿ ರೂಪಾಯಿ ಹಣ ಸರ್ಕಾರ ನೀಡಿದೆ. ಈ ಹಣಕಾಸು ವರ್ಷ ಅಂದರೆ 2026-27ರ ಅಕ್ಟೋಬರ್ವರೆಗೆ 3080 ಕೋಟಿ ಕೊಟ್ಟಿದೆ. ಒಟ್ಟಾರೆ 2023 ರಿಂದ ಇಲ್ಲಿಯವರೆಗೆ 16,594 ಕೋಟಿ ಹಣ ನಾಲ್ಕೂ ನಿಗಮಗಳಿಗೆ ಬಂದಿದೆ ಎಂದು ಬೈರತಿ ಸುರೇಶ್ ತಿಳಿಸಿದ್ದಾರೆ.
ಇನ್ನು ಬಾಕಿ ವಿಚಾರಕ್ಕೆ ಬಂದರೆ 2023-24ರಲ್ಲಿ 1180 ಕೋಟಿ ರೂಪಾಯಿ, 2024-25 ರಲ್ಲಿ 1170 ಕೋಟಿ, 2025-26 ರಲ್ಲಿ2401 ಕೋಟಿ ಹಾಗೂ ಈ ಹಣಕಾಸು ವರ್ಷದಲ್ಲಿ 1610 ಕೋಟಿ ಸರ್ಕಾರಿ ಬಾಕಿ ಕೊಡಬೇಕು. ಒಟ್ಟಾರೆಯಾಗಿ ಸರ್ಕಾರದಿಂದ ಕೆಎಸ್ಆರ್ಟಿಸಿ 6300 ಕೋಟಿ ಹಣ ಬರೋದು ಬಾಕಿ ಇದೆ ಎಂದು ಮಾಹಿತಿ ನೀಡಿದರು. ಇದರಲ್ಲಿ ಶಕ್ತಿ ಸ್ಕೀಮ್ವೊಂದರಿಂದಲೇ 5 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ ಎಂದಿದ್ದಾರೆ.
2023ರಲ್ಲಿ ನಾವು ಅಧಿಕಾರಕ್ಕೆ ಬಂದಾಗ 1180 ಕೋಟಿ ಬಾಕಿ ಹಣ ಇತ್ತು. ಅದು ಪೆಂಡಿಂಗ್ ಅನ್ಸಲ್ವಾ ಎಂದು ಬೈರತಿ ಸುರೇಶ್ ಮಾಧ್ಯಮದವರಿಗ ಪ್ರಶ್ನೆ ಮಾಡಿದಾಗ, ಅವರು ಮಾಡಿದ್ದನ್ನೇ ನೀವು ಫಾಲೋ ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು. ಆಗ ಸಮಜಾಯಿಷಿ ನೀಡಿದ ಸಚಿವರು, ಸರ್ಕಾರ ಅಂದ್ರೆ ಇಂದಿನ ಸಾಲಗಳು ಮುಂದಿನ ಸರ್ಕಾರಕ್ಕ ಫಾರ್ವಡ್ ಆಗುತ್ತೆ. ಯಾವುದೇ ಸರ್ಕಾರ ಕೂಡ ತನ್ನ ಆಡಳಿತದಲ್ಲಿ ಎಲ್ಲಾ ಬಿಲ್ಗಳನ್ನೂ ಕ್ಲಿಯರ್ ಮಾಡಿ ಹೋಗೋದಿಲ್ಲ. ಪ್ರತಿ ಕಾಮಗಾರಿ ಆಗಲಿ, ನಿಗಮ ಮಂಡಳಿಗಾಗಲಿ ಬಾಕಿ ಇರಿಸಿಯೇ ಹೋಗುತ್ತದೆ. ಯಾವ ಸರ್ಕಾರ ಕೂಡ ಕ್ಲೀಯರ್ ಮಾಡೋದಿಲ್ಲ. ಸರ್ಕಾರ ಅನ್ನೋದು ನಿತ್ಯ ನಿರಂತರ ನಡಿತಾ ಇರುತ್ತೆ. ಬಾಕಿ ಕ್ಲಿಯರ್ ಆಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.
ಯಾವುದೇ ಸರ್ವೀಸ್ ಲಾಭದಾಯಕವಾಗಬೇಕು ಅಂತಾ ನಾವೂ ಬಯಸಲ್ಲ. ಲಾಭದಾಯಕವಾಗಿ ಸಂಸ್ಥೆ ನಡೀಬೇಕು ಅಂತಾ ನಾವೇನು ಫ್ಯಾಕ್ಟರಿ ನಡೆಸುತ್ತಿಲ್ಲ. ನಮ್ಮದು ಸೇವಾ ಸಂಸ್ಥೆ. ಆದರೆ, ಸಂಸ್ಥೆ ಉಳಿಯಬೇಕಲ್ಲ. ಅದಕ್ಕಾಗಿ ಈ ಏರಿಕೆ ಮಾಡಿದ್ದೇವೆ ಎಂದ ಅವರು ಈ ದರ ಏರಿಕೆಯಿಂದ ಸಂಸ್ಥೆ ಲಾಭದಲ್ಲಿ ಬರೋದಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ. ನಿಗಮ ಮಂಡಳಿಗೆ ನಷ್ಟವಾಗಿದೆ. ಅದನ್ನು ಸರಿ ದಾರಿಕೆ ತರೋಕೆ ಇದೆಲ್ಲಾ ಅನಿವಾರ್ಯ. ಇದರ ಹೊರತಾಗಿ ನಿಮ್ಮಲ್ಲೇ ಬೇರೆ ಉಪಾಯ ಇದ್ದರೆ ಅದನ್ನೂ ತಿಳಿಸಿ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದ್ದಾರೆ.