
ಬೆಂಗಳೂರು (ಸೆ.18): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರ ಪಾರ್ಕಿಂಗ್ ತಲೆನೋಡಿಗೆ ಮುಕ್ತಿ ಹಾಡಲು ಮಹತ್ವದ ಹೆಜ್ಜೆ ಇಡಲಾಗಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಜನನಿಬಿಡ ಜಯನಗರದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅತ್ಯಾಧುನಿಕ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಪಾಲಿಕೆ ಸಿದ್ಧತೆ ನಡೆಸಿದೆ. ಈ ಕುರಿತು 'ಪಾರ್ಕ್ ಲೆನ್ಸ್' (Park Lens) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಟ್ರಾಫಿಕ್ ಪೊಲೀಸ್ ಹಾಗೂ ಬೆಸ್ಕಾಂ ಇಲಾಖೆಗಳ ಸಮನ್ವಯದೊಂದಿಗೆ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
1. ಓರೆಯಾದ (Angular) ಮಾದರಿಯಲ್ಲಿ ಪಾರ್ಕಿಂಗ್:
ವಾಹನಗಳ ಅಡ್ಡಾದಿಡ್ಡಿ ಹಾಗೂ ಕ್ರಾಸ್ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಓರೆಯಾಗಿ ವಾಹನ ನಿಲ್ಲಿಸುವ (Angular) ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಇದರಿಂದ ರಸ್ತೆಯಲ್ಲಿ ಹೆಚ್ಚು ವಾಹನಗಳನ್ನು ನಿಲ್ಲಿಸಲು ಅವಕಾಶ ಸಿಗುವುದಲ್ಲದೆ, ವಾಹನ ತೆಗೆಯುವಾಗ ಇಲಾಖೆ ಹಾಗೂ ಇತರ ಸವಾರರಿಗೆ ತೊಂದರೆಯಾಗುವುದಿಲ್ಲ.
2. ಎಐ ಕ್ಯಾಮೆರಾ ಹಾಗೂ ಕ್ಯೂಆರ್ ಕೋಡ್ ಪಾವತಿ:
ಪಾರ್ಕ್ ಲೆನ್ಸ್ ಸಂಸ್ಥೆಯು ಎಐ ಕ್ಯಾಮೆರಾಗಳ ನೆಟ್‌ವರ್ಕ್ ಮೂಲಕ ನೈಜ ಸಮಯದಲ್ಲಿ (Real-time) ಖಾಲಿ ಇರುವ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಿದೆ. ಸಾರ್ವಜನಿಕರು ಸ್ಥಳದಲ್ಲೇ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಯುಪಿಐ (UPI) ಮೂಲಕ ಶುಲ್ಕ ಪಾವತಿಸಬೇಕು. ವಾಹನ ನಿಲ್ಲಿಸಿದ ಮೊದಲ ಐದು ನಿಮಿಷಗಳಲ್ಲಿ ಡಿಜಿಟಲ್ ಪಾವತಿ ಮಾಡುವುದು ಕಡ್ಡಾಯವಾಗಿರುತ್ತದೆ.
3. ನಿಯಮ ಉಲ್ಲಂಘಿಸಿದರೆ ಕಠಿಣ ದಂಡ ಮತ್ತು ವೀಲ್ ಲಾಕ್:
ಸ್ಮಾರ್ಟ್ ಪಾರ್ಕಿಂಗ್ ನಿಯಮ ಉಲ್ಲಂಘಿಸುವವರ ವಿರುದ್ಧ ಎರಡು ಹಂತಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ:
ಅನ್‌ಪೇಯ್ಡ್ ಉಲ್ಲಂಘನೆ: ನಿಗದಿತ ಸಮಯದೊಳಗೆ ಶುಲ್ಕ ಪಾವತಿಸದಿರುವುದು.
ಓವರ್‌ಸ್ಟೇ ಉಲ್ಲಂಘನೆ: ಸಮಯ ಮುಗಿದರೂ ಪಾರ್ಕಿಂಗ್ ಅವಧಿಯನ್ನು ಡಿಜಿಟಲ್ ಆಗಿ ವಿಸ್ತರಿಸದೆ ಹೆಚ್ಚುವರಿ ಸಮಯ ನಿಲ್ಲಿಸುವುದು.
ಈ ಸಂದರ್ಭದಲ್ಲಿ ಸ್ವಯಂಚಾಲಿತ ಎಚ್ಚರಿಕೆ ರವಾನೆಯಾಗಲಿದ್ದು, ಸ್ಥಳಕ್ಕೆ ಬರುವ ಅಧಿಕಾರಿಗಳು ವಾಹನದ ಚಕ್ರಗಳಿಗೆ ವೀಲ್ ಲಾಕ್ (Wheel clamp) ಹಾಕಿ ದಂಡ ವಿಧಿಸಲಿದ್ದಾರೆ. ದಂಡ ಪಾವತಿಸಿದ ಬಳಿಕವೇ ವಾಹನ ತೆರವುಗೊಳಿಸಲು ಅವಕಾಶವಿರುತ್ತದೆ.
4. ಬೆಸ್ಕಾಂ ಮತ್ತು ಪೊಲೀಸರ ಸಹಕಾರ:
ಎಐ ಕ್ಯಾಮೆರಾಗಳಿಗೆ ನಿರಂತರ ವಿದ್ಯುತ್ ಒದಗಿಸಲು ಬೆಸ್ಕಾಂಗೆ ಸೂಚಿಸಲಾಗಿದ್ದು, ಕ್ಯಾಮೆರಾ ಅಳವಡಿಕೆಗೆ ಪಾಲಿಕೆಯ ಬೀದಿ ದೀಪದ ಕಂಬಗಳನ್ನು ಬಳಸಿಕೊಳ್ಳಲು ತಿಳಿಸಲಾಗಿದೆ. ಆರಂಭದಲ್ಲಿ ಜಯನಗರದ ಆಯ್ದ ಪ್ರಮುಖ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ (Pilot testing) ಈ ಯೋಜನೆ ಜಾರಿಗೆ ಬರಲಿದ್ದು, ಸಾರ್ವಜನಿಕರ ಸ್ಪಂದನೆ ನೋಡಿ ಸಂಪೂರ್ಣವಾಗಿ ವಿಸ್ತರಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಸಭೆಯಲ್ಲಿ ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು, ಟ್ರಾಫಿಕ್ ಡಿಸಿಪಿ ಗೋಪಾಲ್ ಬ್ಯಾಕೋಡ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.