BMRCL ಮಾಸ್ಟರ್ ಪ್ಲಾನ್: ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ 6 ಹೊಸ ರೈಲು ಸೇರ್ಪಡೆ, 2027ಕ್ಕೆ 21 ರೈಲು ಎಂಟ್ರಿ!

Published : Sep 18, 2026, 12:14 PM IST
Namma Metro

ಸಾರಾಂಶ

ಬಿಎಂಆರ್‌ಸಿಎಲ್ ಹಸಿರು ಮಾರ್ಗದಲ್ಲಿ ಹೊಸ ಆರು ಬೋಗಿಗಳ ಮೆಟ್ರೋ ರೈಲನ್ನು ಸೇರ್ಪಡೆಗೊಳಿಸಿದೆ. ಇದರಿಂದ ಹಳೆಯ ರೈಲುಗಳ ನಿರ್ವಹಣೆಗೆ ಅನುಕೂಲವಾಗಲಿದ್ದು, 2027ರ ವೇಳೆಗೆ 21 ಹೊಸ ರೈಲುಗಳು ಬರಲಿವೆ. ತರುವಾಯ ಹಳೆಯ ರೈಲುಗಳನ್ನು ನೇರಳೆ ಮಾರ್ಗಕ್ಕೆ ವರ್ಗಾಯಿಸಿ ದಟ್ಟಣೆ ಕಡಿಮೆ ಮಾಡಲಾಗುವುದು.

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ಸೇವಾ ಜಾಲವನ್ನು ಮತ್ತಷ್ಟಯ ವಿಸ್ತರಿಸುವ ಹಾಗೂ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಮಾದವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವಿನ 33 ಕಿಲೋಮೀಟರ್ ಉದ್ದದ 'ಹಸಿರು ಮಾರ್ಗ'ಕ್ಕೆ , ‘ತಿತಾಘರ್-ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್’ (CRRC) ಒಪ್ಪಂದದಡಿಯಲ್ಲಿ ತಯಾರಿಸಲಾದ ಮೊದಲ ಆರು ಬೋಗಿಗಳ ಹೊಸ ಮೆಟ್ರೋ ರೈಲನ್ನು ಅಧಿಕೃತವಾಗಿ ಸೇರ್ಪಡೆಗೊಳಿದೆ.

ಸಿಎಂಆರ್‌ಎಸ್‌ನಿಂದ ಸುರಕ್ಷತಾ ಅನುಮೋದನೆ

ರೈಲ್ವೆ ಸುರಕ್ಷತಾ ಆಯುಕ್ತರಿಂದ ಅಗತ್ಯ ಸುರಕ್ಷತಾ ಅನುಮತಿ ದೊರೆತ ಬೆನ್ನಲ್ಲೇ ಬಿಎಂಆರ್‌ಸಿಎಲ್ ಈ ರೈಲನ್ನು ಕಂದಾಯ ಸೇವೆಗೆ ಇಳಿಸಿದೆ. ಹೀಗಾಗಿ ಶೀಘ್ರದಲ್ಲೇ ಮತ್ತಷ್ಟು ಹೊಸ ರೈಲುಗಳು ಹಸಿರು ಮಾರ್ಗದಲ್ಲಿ ಸೇವೆ ಆರಂಭಿಸಲಿದೆ. ಬಿಎಂಆರ್‌ಸಿಎಲ್ ಇದುವರೆಗೆ ಒಟ್ಟು ನಾಲ್ಕು ‘ಸಿಆರ್‌ಆರ್‌ಸಿ-ತಿತಾಘರ್’ ರೈಲು ಸೆಟ್‌ಗಳನ್ನು ಸ್ವೀಕರಿಸಿದ್ದು, ಹಂತ-ಹಂತವಾಗಿ ಹಳಿಗೆ ಹತ್ತಿಸಲು ತೀರ್ಮಾನಿಸಿದೆ.

ಹಳೆಯ ರೈಲುಗಳ ರಿಪೇರಿ ಮತ್ತು ನಿರ್ವಹಣೆಗೆ ಆದ್ಯತೆ

ಹೊಸ ರೈಲುಗಳ ಆಗಮನದಿಂದ ರೈಲುಗಳ ಸೇವಾ ಸಂಚಾರ ಸಂಖ್ಯೆ ಏರಿಕೆಯಾಗುವುದಿಲ್ಲ ಅಥವಾ ಪ್ರಯಾಣಿಕರ ಕಾಯುವ ಸಮಯ ಕಡಿತವಾಗುವುದಿಲ್ಲ. ಬದಲಿದೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಂಚರಿಸಿ ಸವೆತಕ್ಕೆ ಒಳಗಾಗಿರುವ ಹಳೆಯ ಹಂತ-1 ರ ರೈಲುಗಳನ್ನು ಪೂರ್ಣ ಸರ್ವಿಸ್‌ಗೆ ಕಳುಹಿಸಲು ಈ ಹೊಸ ರೈಲುಗಳು ನೆರವಾಗಲಿವೆ. ಪ್ರತಿಯೊಂದು ಹಳೆಯ ರೈಲಿನ ಇಂಚಿಂಚೂ ತಪಾಸಣೆಗೆ ಕನಿಷ್ಠ 15 ದಿನಗಳ ಕಾಲಾವಕಾಶ ಅಗತ್ಯವಿದ್ದು, ಹೊಸ ರೈಲುಗಳು ಆ ಜಾಗವನ್ನು ಭರ್ತಿ ಮಾಡಲಾಗುತ್ತದೆ.

2027ರ ವೇಳೆಗೆ 21 ಹೊಸ ರೈಲುಗಳು

ವರದಿಗಳ ಪ್ರಕಾರ, 2027ರ ಎರಡನೇ ತ್ರೈಮಾಸಿಕದ ವೇಳೆಗೆ ಬಿಎಂಆರ್‌ಸಿಎಲ್ ಒಟ್ಟು 21 ಹೊಸ 'ಡಿಟಿಜಿ' ಆರು-ಬೋಗಿ ರೈಲುಗಳನ್ನು ಹೊಂದಿರಲಿದೆ. ಈ ಎಲ್ಲಾ 21 ರೈಲುಗಳನ್ನು ಹಸಿರು ಮಾರ್ಗದಲ್ಲೇ ನಿಯೋಜಿಸಿ, ಅವುಗಳ ಉಸ್ತುವಾರಿಯನ್ನು ಪೀಣ್ಯ ಡಿಪೋದಲ್ಲಿ ಕೇಂದ್ರೀಕರಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಪಶ್ಚಿಮ ಬಂಗಾಳದ ತಿತಾಘರ್ ಸಂಸ್ಥೆಯ ಉತ್ತರಪಾರ ಘಟಕದಲ್ಲಿ ಬಾಕಿ ಉಳಿದ 20 ರೈಲುಗಳ ತಯಾರಿಕೆ ಭರದಿಂದ ಸಾಗಿದೆ.

ನೇರಳೆ ಮಾರ್ಗಕ್ಕೆ ಹೆಚ್ಚುವರಿ ಬಲ

ಹಸಿರು ಮಾರ್ಗಕ್ಕೆ 21 ಹೊಸ ರೈಲುಗಳು ಪೂರ್ಣ ಪ್ರಮಾಣದಲ್ಲಿ ಸೇರ್ಪಡೆಯಾದ ನಂತರ, ಅಲ್ಲಿ ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ 17 ಬಿಇಎಂಎಲ್ (BEML) ತಯಾರಿಕಾ ರೈಲುಗಳನ್ನು ನಗರದ ಅತ್ಯಂತ ಜನನಿಬಿಡ ಮಾರ್ಗವಾದ 'ನೇರಳೆ ಮಾರ್ಗ'ಕ್ಕೆ ಅಂದರೆ ಚಲ್ಲಘಟ್ಟ ದಿಂದ ವೈಟ್‌ಫೀಲ್ಡ್ ಸಂಚರಿಸುವ ಮಾರ್ಗಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ನೇರಳೆ ಮಾರ್ಗದಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ದಟ್ಟಣೆ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.

ದೈನಂದಿನ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೆ ಹತ್ತಿರ

ಪ್ರಸ್ತುತ ನಮ್ಮ ಮೆಟ್ರೋದ ನೇರಳೆ ಮಾರ್ಗ 43 ಕಿ.ಮೀ ಹಾಗೂ ಹಸಿರು ಮಾರ್ಗ 33 ಕಿ.ಮೀ ಸೇರಿ ಒಟ್ಟು 57 ಆರು ಬೋಗಿಗಳ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿ ಆರು ಬೋಗಿಯ ರೈಲು ಸುಮಾರು 2,002 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ನಗರದಲ್ಲಿ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ ಸುಮಾರು 10 ಲಕ್ಷ ತಲುಪಿದ್ದು, ಪೀಕ್ ಅವರ್‌ಗಳಲ್ಲಿ ತೀವ್ರ ಜನದಟ್ಟಣೆ ಕಂಡುಬರುತ್ತಿದೆ. ಪ್ರಸ್ತುತ ಪ್ರತಿ 3 ನಿಮಿಷಕ್ಕೊಮ್ಮೆ ರೈಲು ಕಾರ್ಯಾಚರಣೆಗೆ ಅವಕಾಶವಿದ್ದು, ಭವಿಷ್ಯದಲ್ಲಿ ಪ್ರತಿ 2 ನಿಮಿಷಕ್ಕೊಮ್ಮೆ ರೈಲು ಸಂಚರಿಸುವಂತೆ ಮಾಡಲು ಸಿಗ್ನಲಿಂಗ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

PREV
Read more Articles on
click me!

Recommended Stories

₹20 ಲಕ್ಷ ಸಾಲ ವಾಪಸ್ ಕೊಡದ ಭಕ್ತ; ಮನೆ ಬಾಗಿಲಿಗೆ ಬಂದು ಕುಳಿತ ಶ್ರೀ 1008 ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ!
ಬೆಂಗಳೂರಿನ ಅಕ್ರಮ ಪಿಜಿಗಳಿಗೆ ಹೈಕೋರ್ಟ್ ಶಾಕ್, 81 ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ, ಪೂರ್ವ ಭಾಗದಲ್ಲೇ ಅತೀ ಹೆಚ್ಚು!