KPL ಫಿಕ್ಸಿಂಗ್‌: ಬೆಂಗಳೂರು ಬ್ಲಾಸ್ಟರ್‌ನ ನಿಶಾಂತ್‌ ಸೆರೆ

By Kannadaprabha NewsFirst Published Nov 6, 2019, 8:00 AM IST
Highlights

ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣವನ್ನು ಬಗೆದಷ್ಟೂಆಘಾತಕಾರಿ ಅಂಶಗಳು ಸಿಸಿಬಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬರುತ್ತಿದ್ದು, ಬೆಂಗಳೂರು ಬ್ಲಾಸ್ಟರ್‌ ತಂಡದ ಆಲ್‌ರೌಂಡರ್‌ ಆಟಗಾರನೊಬ್ಬನನ್ನು ಬಂಧಿಸಲಾಗಿದೆ.

ಬೆಂಗಳೂರು(ನ.06): ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣವನ್ನು ಬಗೆದಷ್ಟೂಆಘಾತಕಾರಿ ಅಂಶಗಳು ಸಿಸಿಬಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬರುತ್ತಿದ್ದು, ಬೆಂಗಳೂರು ಬ್ಲಾಸ್ಟರ್‌ ತಂಡದ ಆಲ್‌ರೌಂಡರ್‌ ಆಟಗಾರನೊಬ್ಬನನ್ನು ಬಂಧಿಸಲಾಗಿದೆ.

ಬೆಂಗಳೂರು ಬ್ಲಾಸ್ಟರ್‌ ತಂಡದ ಬ್ಯಾಟ್ಸ್‌ಮನ್‌ ನಿಶಾಂತ್‌ ಸಿಂಗ್‌ ಶೆಖಾವತ್‌ (29) ಅಲಿಯಾಸ್‌ ಚೋಟು ಬಂಧಿತ. ಆರೋಪಿ ಪ್ರಮುಖ ಬುಕ್ಕಿಗಳ ಜತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

KPL ಫಿಕ್ಸಿಂಗ್: ಇಬ್ಬರು ಕ್ರಿಕೆಟಿಗರು ಬಂಧನ..

ಕೆಪಿಎಲ್‌ನ ಎಂಟನೇ ಆವೃತ್ತಿಯಲ್ಲಿ ಬೆಟ್ಟಿಂಗ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌ ನಡೆಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ತಂಡದ ಮಾಲಿಕ ಅಶ್ಪಾಕ್‌ ಅಲಿ, ಬಳ್ಳಾರಿ ಟಸ್ಕರ್ಸ್‌ ತಂಡದ ಡ್ರಮ್ಮರ್‌ ಭವೇಶ್‌ ಹಾಗೂ ಬೆಂಗಳೂರು ಬ್ಲಾಸ್ಟರ್‌ ತಂಡದ ಬೌಲಿಂಗ್‌ ಕೋಚ್‌ ವಿನು ಪ್ರಸಾದ್‌ ಮತ್ತು ಬ್ಯಾಟ್ಸ್‌ಮನ್‌ ವಿಶ್ವನಾಥನ್‌ ಅವರನ್ನು ಸಿಸಿಬಿ ಪೊಲೀಸರು ಈ ಹಿಂದೆಯೇ ಬಂಧಿಸಿದ್ದಾರೆ.

ರಾಜಸ್ಥಾನದ ನಿಶಾಂತ್‌ ಸಿಂಗ್‌:

ನಿಶಾಂತ್‌ ಸಿಂಗ್‌ ಶೆಖಾವತ್‌ ರಾಜಸ್ಥಾನ ಮೂಲದವನಾಗಿದ್ದು, ಕರ್ನಾಟಕ ಪ್ರೀಮಿಯರ್‌ ಲೀಗ್‌ ಆರಂಭವಾದಾಗಿನಿಂದ ಹುಬ್ಬಳ್ಳಿ ಟೈಗ​ರ್‍ಸ್, ಮಂಗಳೂರು, ಶಿವಮೊಗ್ಗ ತಂಡವನ್ನು ಪ್ರತಿನಿಧಿಸಿದ್ದಾನೆ. ಪ್ರಸ್ತುತ ಬೆಂಗಳೂರು ಬ್ಲಾಸ್ಟರ್‌ ತಂಡದ ಪರ ಆಡುತ್ತಿದ್ದ.

ನಿಶಾಂತ್‌, ತಲೆಮರೆಸಿಕೊಂಡಿರುವ ಪ್ರಮುಖ ಬುಕ್ಕಿಗಳಾದ ಸಯ್ಯಾಂ, ಜತ್ತಿನ್‌ ಮತ್ತು ಚಂಡೀಗಢ ಮೂಲದ ಬುಕ್ಕಿ ಮನೋಜ್‌ ಕುಮಾರ್‌ ಜತೆ ನಿರಂತರವಾಗಿ ಸಂಪರ್ಕದಲ್ಲಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈಗಾಗಲೇ ಬಂಧನಕ್ಕೊಳಗಾಗಿರುವ ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ಬೌಲಿಂಗ್‌ ಕೋಚ್‌ ವಿನು ಪ್ರಸಾದ್‌ನನ್ನು ಬುಕ್ಕಿ ಮನೋಜ್‌ಗೆ ನಿಶಾಂತ್‌ ಪರಿಚಯಿಸಿದ್ದ.

KPL ಬೆಟ್ಟಿಂಗ್; ಬೆಳಗಾವಿ ಬಳಿಕ ಬಳ್ಳಾರಿ ಟೀಂ ಮಾಲಿಕನ ವಿಚಾರಣೆ!

2018ರ ಆ.31ರಂದು ಹುಬ್ಬಳ್ಳಿ ಟೈಗ​ರ್‍ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ನಡುವಿನ 18ನೇ ಪಂದ್ಯ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಮೈದಾನದಲ್ಲಿ ನಡೆದಿತ್ತು. ಪಂದ್ಯ ನಡೆಯುವ ವಾರಕ್ಕೂ ಮುಂಚೆ ಮೈಸೂರಿನ ಹೋಟೆಲ್‌ ಒಂದರಲ್ಲಿ ಬುಕ್ಕಿ ಮನೋಜ್‌ನನ್ನು ನಿಶಾಂತ್‌ ಸಂಪರ್ಕಿಸಿದ್ದ. ಬಳಿಕ ಬೌಲಿಂಗ್‌ ಕೋಚ್‌ ವಿನುಪ್ರಸಾದ್‌ ಮತ್ತು ಬ್ಯಾಟ್ಸ್‌ಮನ್‌ ವಿಶ್ವನಾಥನ್‌ ಬಳಿಗೆ ಕರೆದೊಯ್ದು ಪರಿಚಯಿಸಿಕೊಟ್ಟಿದ್ದ. ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಈತ ಹಣ ಪಡೆದಿರುವ ಶಂಕೆಯಿದೆ.

ನಿಶಾಂತ್‌ 2015ರಿಂದ ಕೆಪಿಎಲ್‌ ಟೂರ್ನಿಯಲ್ಲಿ ಆಡುತ್ತಿದ್ದಾನೆ. ಹುಬ್ಬಳ್ಳಿ ಟೈಗರ್ಸ್‌, ಮಂಗಳೂರು ಹಾಗೂ ನಮ್ಮ ಶಿವಮೊಗ್ಗ ತಂಡದಲ್ಲಿ ಆಡಿದ್ದ. ಹೀಗಾಗಿ, ಆತನಿಗೆ ಎಲ್ಲ ತಂಡಗಳ ಕೋಚ್‌ ಮತ್ತು ಆಟಗಾರರ ಪರಿಚಯವಿತ್ತು. ಆಟಗಾರರು ಮತ್ತು ಬುಕ್ಕಿಗಳ ಮಧ್ಯೆ ಸಂಪರ್ಕ ಕೊಂಡಿಯಾಗಿದ್ದ. ಈತನೇ ಹಲವು ಆಟಗಾರರೊಂದಿಗೆ ಸಂಪರ್ಕ ಮಾಡಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!.

ನಿಶಾಂತ್‌ ಸಿಂಗ್‌ ಶೆಖಾವತ್‌ ಬುಕ್ಕಿಗಳು ಮತ್ತು ಆಟಗಾರರ ಜತೆ ನಿರಂತರವಾಗಿ ಸಂಪರ್ಕದಲ್ಲಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈತ ತಾನು ಆಡುವ ವೇಳೆ ಮೈದಾನದಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಮಾಡಿರುವ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ (ಸಿಸಿಬಿ) ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

click me!