ಪುನೀತ್‌ ರಾಜ್‌ಕುಮಾರ್‌ ಸಾವಿನ ದಿನ ಬಿಯರ್‌ ಹಿಡಿದು ಪೋಸ್ಟ್‌, ವಿದ್ಯಾರ್ಥಿಗೆ ಎಚ್ಚರಿಕೆ ನೀಡಿ ಕೇಸ್‌ ರದ್ದು ಮಾಡಿದ ಹೈಕೋರ್ಟ್‌

Published : Sep 18, 2026, 04:44 PM IST
Puneeth Rajkumar Instagram

ಸಾರಾಂಶ

ನಟ ಪುನೀತ್ ರಾಜ್‌ಕುಮಾರ್ ನಿಧನದ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ವಿದ್ಯಾರ್ಥಿಯ ವಿರುದ್ಧದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಯುವಕನ ವಯಸ್ಸು ಮತ್ತು ಶೈಕ್ಷಣಿಕ ಭವಿಷ್ಯವನ್ನು ಪರಿಗಣಿಸಿ ಕೋರ್ಟ್‌ ಕರುಣೆ ತೋರಿದೆ.

ಬೆಂಗಳೂರು (ಸೆ.18): ಕನ್ನಡದ ಹಿರಿಯ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನದ ಸಮಯದಲ್ಲಿ 'ಇನ್‌ಸ್ಟಾಗ್ರಾಮ್'ನಲ್ಲಿ (Instagram) ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದ ಯುವ ವಿದ್ಯಾರ್ಥಿಯೊಬ್ಬನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕ್ರಿಯೆಗಳನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಗೊಳಿಸಿದೆ. ಯುವಕನ ವಯಸ್ಸು, ಆತನ ಶೈಕ್ಷಣಿಕ ಭವಿಷ್ಯವನ್ನು ಪರಿಗಣಿಸಿ ಕರುಣೆ ತೋರಿರುವ ಪೀಠವು, ಸೋಶಿಯಲ್‌ ಮೀಡಿಯಾದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಆತನಿಗೆ ಎಚ್ಚರಿಕೆ ನೀಡಿ ಅರ್ಜಿ ವಿಲೇವಾರಿ ಮಾಡಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 67 ಹಾಗೂ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153A ಅಡಿಯಲ್ಲಿ 2021 ರಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ (Justice Suraj Govindaraj) ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.

'ಪೋಸ್ಟ್‌ನ ಸಮಯ ಮತ್ತು ಸನ್ನಿವೇಶ ಅತ್ಯಂತ ಪ್ರಮುಖ': ಹೈಕೋರ್ಟ್ ಕಳವಳ

ವಿಚಾರಣೆ ವೇಳೆ ಪೀಠವು ಪೋಸ್ಟ್‌ನ ಸನ್ನಿವೇಶವನ್ನು ಗಂಭೀರವಾಗಿ ಪರಿಗಣಿಸಿತು. "ಅರ್ಜಿದಾರನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ಕೇವಲ ನೀಡಲಾದ ಹೇಳಿಕೆ ಮಾತ್ರವಲ್ಲ, ಆ ಹೇಳಿಕೆಯನ್ನು ಯಾವ ಸಮಯ ಮತ್ತು ಸನ್ನಿವೇಶದಲ್ಲಿ ಪೋಸ್ಟ್ ಮಾಡಲಾಗಿದೆ ಎಂಬುದು ಅತ್ಯಂತ ಪ್ರಮುಖವಾಗುತ್ತದೆ. ಅತ್ಯಂತ ಗೌರವಾನ್ವಿತ ನಟರೊಬ್ಬರು ನಿಧನರಾದ ತಕ್ಷಣವೇ ಇಂತಹದೊಂದು ಪೋಸ್ಟ್ ಹಾಕಿರುವುದು ನಿಜಕ್ಕೂ ಬೇಸರ ತರಿಸುವ ಸಂಗತಿ," ಎಂದು ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿತು.

"ನಿಧನರಾದ ನಟರು ತಮ್ಮ ಜೀವಿತಾವಧಿಯಲ್ಲಿ ಯುವಜನತೆ ಮದ್ಯಪಾನ ಮಾಡುವುದನ್ನು ಬಲವಾಗಿ ವಿರೋಧಿಸುತ್ತಿದ್ದರು. ಅಂತಹ ನಟ ನಿಧನರಾದ ತಕ್ಷಣ ಈ ರೀತಿಯ ಪೋಸ್ಟ್ ಹಾಕುವುದು ಸಮಾಜದ ಮೇಲೆ ಮತ್ತು ಅವರ ಅಭಿಮಾನಿಗಳ ಮೇಲೆ ಬೀರುವ ಪರಿಣಾಮದ ಅರಿವು ಅರ್ಜಿದಾರನಿಗೆ ಇರಬೇಕಿತ್ತು," ಎಂದು ಪೀಠವು ಸುಬ್ರಹ್ಮಣ್ಯನಗರ ಪೊಲೀಸರು ಸಲ್ಲಿಸಿದ್ದ ಎಫ್‌ಐಆರ್ ಅನ್ನು ಉಲ್ಲೇಖಿಸಿ ಹೇಳಿತು.

ಪ್ರಕರಣದ ಹಿನ್ನೆಲೆ ಏನು?

2021 ರಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ, ದುಃಖಿತರಾದ ಅಭಿಮಾನಿಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಮುನ್ನೆಚ್ಚರಿಕೆಯಿಂದ ರಾಜ್ಯ ಸರ್ಕಾರ ತಕ್ಷಣವೇ ಮಧ್ಯ ಮಾರಾಟವನ್ನು ನಿಷೇಧಿಸಿತ್ತು. ಈ ವೇಳೆಯಲ್ಲಿ ಅರ್ಜಿದಾರ ಯುವಕನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಂಗ್‌ಫಿಶರ್ ಬೀರ್ (Kingfisher Beer) ಬಾಟಲಿಯ ಚಿತ್ರವನ್ನು ಅಪ್‌ಲೋಡ್ ಮಾಡಿ, ಅದರಲ್ಲಿ ಅಸಭ್ಯ ಹಾಗೂ ಆಕ್ಷೇಪಾರ್ಹ ವಾಕ್ಯಗಳನ್ನು ಬಳಸಿ ಪೋಸ್ಟ್ ಮಾಡಿದ್ದ.

ಈ ಪೋಸ್ಟ್ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿ, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತಂದಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಇದರ ಆಧಾರದ ಮೇಲೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ವಕೀಲರ ವಾದವೇನಿತ್ತು?

ಅರ್ಜಿದಾರನ ಪರ ವಾದ ಮಂಡಿಸಿದ ವಕೀಲರು, "ಐಟಿ ಕಾಯ್ದೆಯ ಸೆಕ್ಷನ್ 67 ಅಡಿಯಲ್ಲಿ ಅಪರಾಧ ನಿರೂಪಿಸಲು ಇರಬೇಕಾದ ಕಾಮ ಪ್ರಚೋದಕ ಅಥವಾ ಅಶ್ಲೀಲ ಅಂಶಗಳು ಈ ಪೋಸ್ಟ್‌ನಲ್ಲಿ ಇರಲಿಲ್ಲ. ಈ ಪೋಸ್ಟ್ ಅನ್ನು ಅರ್ಜಿದಾರ ಹಾಕಿಲ್ಲ, ಬದಲಿಗೆ ಆತನ ಸ್ನೇಹಿತನೊಬ್ಬ ಹಾಕಿದ್ದ. ಅಲ್ಲದೆ, ಪೋಸ್ಟ್‌ನಲ್ಲಿ ಬಳಸಲಾದ ಹೆಸರು ಸಾಮಾನ್ಯವಾಗಿದ್ದು, ಅದು ಆತನ ಸ್ನೇಹಿತರಲ್ಲಿ ಒಬ್ಬರ ಉಲ್ಲೇಖವಾಗಿರಬಹುದು. ಇದೊಂದು ಕೆಟ್ಟ ಅಭಿರುಚಿಯ ಕೃತ್ಯವಿರಬಹುದೇ ವಿನಃ ಅಪರಾಧವಲ್ಲ," ಎಂದು ವಾದಿಸಿದರು.

ಮುಂದುವರಿದು, "ಅರ್ಜಿದಾರನು ಲಂಡನ್‌ನಲ್ಲಿ ಹುಟ್ಟಿ ಬೆಳೆದಿದ್ದು, ಘಟನೆಗೆ ಕೇವಲ 6 ತಿಂಗಳ ಮುಂಚೆಯಷ್ಟೇ ಭಾರತಕ್ಕೆ ಬಂದಿದ್ದರಿಂದ ಇಲ್ಲಿನ ಪರಿಸ್ಥಿತಿ ಹಾಗೂ ಕಾನೂನಿನ ಪರಿಣಾಮಗಳ ಅರಿವು ಆತನಿಗಿರಲಿಲ್ಲ. ಪ್ರಸ್ತುತ ಆತ ಸೋನಿಪತ್‌ನ ಪ್ರಸಿದ್ಧ ಅಶೋಕ ವಿಶ್ವವಿದ್ಯಾಲಯದಲ್ಲಿ ಬಿಎ ಎಕನಾಮಿಕ್ಸ್ ವ್ಯಾಸಂಗ ಮಾಡುತ್ತಿದ್ದು, ಸಂಗೀತಗಾರನೂ ಆಗಿದ್ದಾನೆ. ಈ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿದಲ್ಲಿ ಆತನ ಭವಿಷ್ಯ ಹಾಗೂ ವೃತ್ತಿಜೀವನದ ಮೇಲೆ ತೀವ್ರ ಪೆಟ್ಟು ಬೀಳಲಿದೆ," ಎಂದು ಮನವಿ ಮಾಡಿದರು.

ನ್ಯಾಯಪೀಠದ ಖಡಕ್ ಪ್ರಶ್ನೆಗಳು ಹಾಗೂ ಅಂತಿಮ ತೀರ್ಪು

ಆದರೆ, ಈ ಪೋಸ್ಟ್ ಹಾನಿಕಾರಕವಲ್ಲ ಎಂಬ ವಾದವನ್ನು ಒಪ್ಪದ ನ್ಯಾಯಾಧೀಶರು, ವಿಚಾರಣೆ ವೇಳೆ ವಕೀಲರನ್ನು ಮೌಖಿಕವಾಗಿ ತೀವ್ರವಾಗಿ ಪ್ರಶ್ನಿಸಿದರು. "ನಿಮ್ಮ ಬಳಿ ಸಾಮಾಜಿಕ ಜಾಲತಾಣದ ಪ್ರವೇಶಾವಕಾಶ (Access) ಇದೆ ಎಂದ ತಕ್ಷಣ ನೀವು ಏನೆಂದರೆ ಅದನ್ನು ಪೋಸ್ಟ್ ಮಾಡಬಹುದೇ? ರಾಜ್‌ಕುಮಾರ್ ಅವರ ಪುತ್ರ ನಿಧನರಾದಾಗ ನೀವು ಇಂತಹ ಪದಗಳನ್ನು ಬಳಸಿ ಪೋಸ್ಟ್ ಮಾಡುತ್ತೀರಾ? ರಾಜ್‌ಕುಮಾರ್ 'ಖಾಲಿ' ನಮ್ಮನ್ನು ತಡೆಯಲು ಸಾಧ್ಯವಿಲ್ಲ' ಎಂಬ ಸಾಲು ಯಾರನ್ನು ಉದ್ದೇಶಿಸಿ ಬರೆದದ್ದು?" ಎಂದು ಪ್ರಶ್ನೆ ಮಾಡಿದ್ದಾರೆ.

ಆದಾಗ್ಯೂ, ಅರ್ಜಿದಾರನು ವಿದೇಶದಿಂದ ಇತ್ತೀಚೆಗಷ್ಟೇ ಬಂದಿರುವುದು ಹಾಗೂ ಪ್ರಸ್ತುತ ಉತ್ತಮ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವುದನ್ನು ಗಮನಿಸಿದ ಕೋರ್ಟ್, ಪ್ರಕರಣ ಮುಂದುವರಿಸಿದರೆ ಆತನ ಶೈಕ್ಷಣಿಕ ಭವಿಷ್ಯ ಹಾಳಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

"ಪೋಸ್ಟ್‌ನ ಸನ್ನಿವೇಶವು ಸೆಕ್ಷನ್ 67 ರ ವ್ಯಾಪ್ತಿಗೆ ಬರುತ್ತದೆಯಾದರೂ, ಯುವಕನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿನಾಯಿತಿ (Leniency) ನೀಡುವುದು ಸೂಕ್ತ. ಅರ್ಜಿದಾರನಿಗೆ ಸೂಕ್ತ ಎಚ್ಚರಿಕೆ ನೀಡಲಾಗುತ್ತಿದ್ದು, ಆತನ ವಕೀಲರು ಕೂಡ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆಯ ಬಗ್ಗೆ ಆತನಿಗೆ ಬುದ್ಧಿವಾದ ಹೇಳಬೇಕು," ಎಂದು ನಿರ್ದೇಶಿಸಿ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್, ಆತನ ವಿರುದ್ಧದ ಎಲ್ಲಾ ಕ್ರಿಮಿನಲ್ ನಡಾವಳಿಗಳನ್ನು ರದ್ದುಗೊಳಿಸಿ ತೀರ್ಪು ನೀಡಿದೆ.

PREV
Read more Articles on
click me!

Recommended Stories

ಎತ್ತಿನ ಬಂಡಿಗಳಿಂದ ತುಂಬಿದ್ದ ಬೆಂಗಳೂರಿನ ರಸ್ತೆಗೆ ಇಳಿದ ಮೊದಲ ಕಾರಿನ ಕಥೆ ಗೊತ್ತೇ? ಯಾರಾಗಿದ್ರು ಫಸ್ಟ್ ಓನರ್?
ಹಸಿವು, ಅವಮಾನ, ಬಿರಿಯಾನಿ ಮತ್ತು ಲಕ್ಷಾಂತರ ಹಣ! – ಕನ್ನಡದ ಹಿರಿಯ ನಟನ ಕಂಪ್ಲೀಟ್ ಚೇಂಜ್-ಓವರ್ ಜರ್ನಿ!