ಶೀಘ್ರದಲ್ಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಫೆಬ್ರವರಿ ವೇಳೆಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು : ‘ಶೀಘ್ರದಲ್ಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಫೆಬ್ರವರಿ ವೇಳೆಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ, ಮೀಸಲಾತಿ, ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಇದ್ದ ಅಧಿಕಾರವನ್ನು ಹಿಂಪಡೆದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವುದು ಸೇರಿ ವಿವಿಧ ಕಾರಣಗಳಿಂದ ಚುನಾವಣೆ ಮುಂದಕ್ಕೆ ಹೋಗುತ್ತಿದ್ದು, ಕೊನೆಗೂ ಉಪಮುಖ್ಯಮಂತ್ರಿಗಳು ಚುನಾವಣೆ ನಡೆಸುವ ಬಗ್ಗೆ ಮೊದಲ ಬಾರಿಗೆ ಖಚಿತವಾಗಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಸದ್ಯದಲ್ಲೇ ನಡೆಯಲಿರುವುದಂತೂ ನಿಜ. ಅದನ್ನು ನಿಲ್ಲಿಸಲು ಆಗುವುದಿಲ್ಲ ಎಂದು ತಿಳಿಸಿದರು. ಕೇವಲ ಚುನಾವಣೆ ಬಂದಾಗ ಸಿದ್ಧತೆ ಮಾಡಿಕೊಳ್ಳುವುದಲ್ಲ. ಒಂದು ಚುನಾವಣೆ ಮುಗಿದ ಮರು ದಿನದಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿನ ಯಶಸ್ಸು ಮುಂದುವರೆಸಿಕೊಂಡು ಹೋಗಲು ಪಕ್ಷ ಸಂಘಟನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಪ್ರತಿ ವಿಭಾಗವಾರು ತಲುಪಿಸಲು ಪಕ್ಷ ತೀರ್ಮಾನ ಮಾಡಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
undefined
ಕಳೆದಲ್ಲಿಯೇ ಹುಡುಕಬೇಕು:
ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೇ ಅದನ್ನು ಹುಡುಕಬೇಕು ಎನ್ನುವುದು ನಮ್ಮ ತತ್ವ. ಒಂದಷ್ಟು ಕಡೆ ಲೋಕಸಭೆಯಲ್ಲಿ ಸೋತಿದ್ದೇವೆ. ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಅತ್ಯಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ಎರಡು ತಿಂಗಳು ರಾಜ್ಯಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸಂಡೂರು, ಶಿಗ್ಗಾಂವಿಯಲ್ಲಿ ಕೃತಜ್ಞತಾ ಸಮಾವೇಶ
ಶೀಘ್ರದಲ್ಲಿಯೇ ಸಂಡೂರು, ಶಿಗ್ಗಾವಿಯಲ್ಲಿ ಮತದಾರರರಿಗೆ ಕೃತಜ್ಞತಾ ಸಮಾವೇಶ ಆಯೋಜಿಸುವ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗಿದೆ. ವಿಧಾನಸಭಾ ಅಧಿವೇಶನ ನಡೆಯುವ ನಡುವೆಯೇ ಶನಿವಾರ ಅಥವಾ ಭಾನುವಾರದಂದು ಚನ್ನಪಟ್ಟಣದಲ್ಲಿ ಕೃತಜ್ಞತಾ ಸಮಾವೇಶ ಆಯೋಜಿಸುವಂತೆ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ಯೋಗೇಶ್ವರ್ ಅವರಿಗೆ ಸೂಚಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ತಿಳಿಸಿದರು.
ಮೂರೂವರೆ ವರ್ಷ ಬಳಿಕ ಚುನಾವಣೆ ಮಾತು
2021ರ ಏಪ್ರಿಲ್-ಮೇ ತಿಂಗಳಲ್ಲೇ ಜಿಪಂ ಹಾಗೂ ತಾಪಂ ಸದಸ್ಯರ ಅವಧಿ ಮುಗಿದಿತ್ತು. ಮೂರೂವರೆ ವರ್ಷ ಕಳೆದರೂ ಈ ಚುನಾವಣೆ ಪ್ರಕ್ರಿಯೆ ಶುರು ಮಾಡಿರಲಿಲ್ಲ. ಇದೀಗ ಮುಂದಿನ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ಬಗ್ಗೆ ಉಪಮುಖ್ಯಮಂತ್ರಿ ಸುಳಿವು ನೀಡಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಚುನಾವಣೆ ನಡೆದರೆ ಸುಮಾರು ನಾಲ್ಕು ವರ್ಷಗಳ ಬಳಿಕ ಚುನಾವಣೆ ನಡೆದಂತಾಗಲಿದೆ.