ಒನ್ ಟೈಮ್ ಸೆಟಲ್‌ಮೆಂಟ್ (ಒಟಿಎಸ್) ಯೋಜನೆಯಿಂದ ಬಿಬಿಎಂಪಿಗೆ ದಾಖಲೆಯ ₹4,284 ಕೋಟಿ ಆಸ್ತಿ ತೆರಿಗೆ ವಸೂಲಿಯಾಗಿದೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದ್ದು, ಒಟ್ಟಾರೆ ಗುರಿ ಸಾಧನೆಗೆ ಇನ್ನೂ ₹1,036 ಕೋಟಿ ಬಾಕಿ ಇದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು: ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಅನುಕೂಲಕ್ಕೆ ಜಾರಿಗೊಳಿಸಲಾದ ‘ಒನ್ ಟೈಮ್ ಸೆಟಲ್‌ಮೆಂಟ್’ (ಒಟಿಎಸ್) ಯೋಜನೆ ಅಂತ್ಯವಾಗಿದ್ದು, ಒಟಿಎಸ್‌ನಿಂದ ಬಿಬಿಎಂಪಿಗೆ ದಾಖಲೆಯ ₹4,284 ಕೋಟಿ ಆಸ್ತಿ ತೆರಿಗೆ ವಸೂಲಿಯಾಗಿದೆ. ಬಾಕಿ ಆಸ್ತಿ ತೆರಿಗೆ ವಸೂಲಿಗೆ ರಾಜ್ಯ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಜಾರಿಗೆ ತಂದಿದ್ದ ಒಟಿಎಸ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಿದ ಪರಿಣಾಮ ಬಿಬಿಎಂಪಿಯಲ್ಲಿ ಮೊದಲ ಬಾರಿ ದಾಖಲೆಯ ನಾಲ್ಕು ಸಾವಿರ ಕೋಟಿಗೂ ಅಧಿಕ ಮೊತ್ತ ವಸೂಲಿಯಾಗಿದೆ. ಕಳೆದ 2023-24 ಆರ್ಥಿಕ ವರ್ಷದಲ್ಲಿ ₹3901 ಕೋಟಿ ವಸೂಲಿಯಾಗಿತ್ತು.
ಗುರಿ ಸಾಧನೆಗೆ ಸಾವಿರ ಕೋಟಿ ಬೇಕು:
2024-25ನೇ ಸಾಲಿನಲ್ಲಿ ಬಿಬಿಎಂಪಿ ₹5,210 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ₹4,284 ಕೋಟಿ ಸಂಗ್ರಹಿಸಿದೆ. ಆರ್ಥಿಕ ವರ್ಷ ಪೂರ್ಣಕ್ಕೆ ಬಾಕಿ ಇರುವ ನಾಲ್ಕು ತಿಂಗಳ ಅವಧಿಯಲ್ಲಿ ಗುರಿ ಸಾಧನೆಗೆ ₹1,036 ಕೋಟಿ ವಸೂಲಿ ಮಾಡಬೇಕಿದೆ.
undefined
ಕೊನೆಯ ದಿನ ₹140 ಕೋಟಿ ಸಂಗ್ರಹ:
ಒಟಿಎಸ್ ಯೋಜನೆಯ ಕೊನೆಯ ದಿನವಾದ ಶನಿವಾರ ಒಟ್ಟು ₹140 ಕೋಟಿ ವಸೂಲಿಯಾಗಿದ್ದು, ಈ ಪೈಕಿ ಆನ್‌ಲೈನ್ ಮೂಲಕ ₹56.70 ಕೋಟಿ ಆಫ್‌ಲೈನ್ (ಚೆಕ್ ಹಾಗೂ ಡಿಡಿ) ರೂಪದಲ್ಲಿ ₹82.51 ಕೋಟಿ ನೀಡಿದ್ದಾರೆ. ಈವರೆಗೆ ವಸೂಲಿಯಾದ ₹4284 ಕೋಟಿಯಲ್ಲಿ ₹3762.81 ಕೋಟಿ ಆಸ್ತಿ ತೆರಿಗೆ ಆನ್‌ಲೈನ್‌ನಲ್ಲಿ, ಉಳಿದ ₹521.35 ಕೋಟಿ ಚೆಕ್ ಹಾಗೂ ಡಿಡಿ ರೂಪದಲ್ಲಿ ಆಪ್‌ಲೈನ್‌ನಲ್ಲಿ ಸಂಗ್ರಹವಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
₹1,100 ಕೋಟಿ ದಾಟಿದ ಮಹದೇವಪುರ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವ ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ₹1,042.60 ಕೋಟಿ ವಸೂಲಿ ಆಗಿದ್ದರೆ. ಈ ವರ್ಷ ನವೆಂಬರ್ ಅಂತ್ಯಕ್ಕೆ ₹1148.35 ಕೋಟಿ ಸಂಗ್ರಹವಾಗಿದೆ. ಆದರೆ, ಈ ಬಾಕಿ ಮಹದೇವಪುರ ವಲಯದಿಂದ ₹1,309.04 ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಗುರಿ ಸಾಧನೆಗೆ ಇನ್ನೂ ₹160 ಕೋಟಿ ವಸೂಲಿ ಮಾಡಬೇಕಿದೆ.ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ ₹)
ವಲಯ ಗುರಿ ಸಂಗ್ರಹ
ಪೂರ್ವ 891.89710.31
ಮಹದೇವಪುರ 1,309.041148.35
ದಾಸರಹಳ್ಳಿ 164.95136.02
ಬೊಮ್ಮನಹಳ್ಳಿ 585.11418.78
ಆರ್‌ಆರ್‌ನಗರ 434.35335.72
ದಕ್ಷಿಣ 769.50606.48
ಪಶ್ಚಿಮ 610.39483.67
ಯಲಹಂಕ 445.24408.29
ಕೇಂದ್ರ ಕಚೇರಿ-36.36
ಒಟ್ಟು 5,210.484,284.16 (ನ.30)
ಹಿಂದಿನ ವರ್ಷಗಳ ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ ರು)
100 ಅಧಿಕಾರಿಗಳಿಗೆ ಪ್ರಶಂಸನಾ ಪತ್ರ
ಒಟಿಎಸ್ ಯೋಜನೆಯ ಕೊನೆಯ ದಿನ ತಡ ರಾತ್ರಿ 12 ಗಂಟೆ ವರೆಗೆ ಕಾರ್ಯ ನಿರ್ವಹಿಸಿದ ಬಿಬಿಎಂಪಿಯ ಕೇಂದ್ರ ಕಚೇರಿಯ ಜಂಟಿ ಆಯುಕ್ತರು ಸೇರಿದಂತೆ ಎಲ್ಲ ಉಪ ಕಂದಾಯ ವಿಭಾಗದ 64 ಸಹಾಯಕ ಕಂದಾಯ ಅಧಿಕಾರಿಗಳು, 30 ಕಂದಾಯ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡುವುದಾಗಿ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.