ಬೆಂಗಳೂರಿನ 100 ಎಕರೆ ಜಾಗದಲ್ಲಿ ಎಐ ಯುನಿವರ್ಸಿಟಿ, ಮಸೂದೆ ಮಂಡನೆಗೆ ಸರ್ಕಾರ ಸಜ್ಜು!

Published : Aug 07, 2026, 11:04 AM IST
ai university Karnataka

ಸಾರಾಂಶ

ಕರ್ನಾಟಕ ಸರ್ಕಾರವು ದೇಶದ ಮೊದಲ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿದೆ. ಈ ಯೋಜನೆಯು ಎಐ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಕರ್ನಾಟಕವನ್ನು ಜಾಗತಿಕ ಹಬ್ ಆಗಿ ರೂಪಿಸುವ ಗುರಿ ಹೊಂದಿದೆ.

ಬೆಂಗಳೂರು (ಆ.7): ಕೃತಕ ಬುದ್ಧಿಮತ್ತೆ (Artificial Intelligence - AI) ಶಿಕ್ಷಣ, ಸಂಶೋಧನೆ ಹಾಗೂ ನಾವೀನ್ಯತೆಗೆ ಜಾಗತಿಕ ಹಬ್ ರೂಪಿಸುವ ನಿಟ್ಟಿನಲ್ಲಿ ಮಹತ್ವದಜ್ಜೆ ಇಟ್ಟಿರುವ ಕರ್ನಾಟಕ ಸರ್ಕಾರ, ದೇಶದಲ್ಲೇ ಪ್ರಥಮ ಎನ್ನಲಾದ ಪ್ರತ್ಯೇಕ 'ಎಐ ವಿಶ್ವವಿದ್ಯಾಲಯ' ಸ್ಥಾಪನೆಗೆ ಧುಮುಕಿದೆ. ಈ ಸಂಬಂಧ ಮುಂಬರುವ ಅಧಿವೇಶನದಲ್ಲಿ ಪ್ರತ್ಯೇಕ ವಿಧೇಯಕ ಮಂಡಿಸಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ. ಕೈಗಾರಿಕೆಗಳು ಮತ್ತು ಸರ್ಕಾರಿ ರಂಗದಲ್ಲಿ ಎಐ ತಜ್ಞರು ಹಾಗೂ ಪರಿಣಿತ ವೃತ್ತಿಪರರಿಗೆ ದಿನೇ ದಿನೇ ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಎಐ ಶಿಕ್ಷಣವನ್ನು ಸಂಸ್ಥೆಗತಗೊಳಿಸಲು (Institutionalise) ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಶಾಶ್ವತ ಕ್ಯಾಂಪಸ್ ನಿರ್ಮಾಣವಾಗುವವರೆಗೆ ಈ ವಿಶ್ವವಿದ್ಯಾಲಯವು ತಾತ್ಕಾಲಿಕವಾಗಿ ಸರ್ಕಾರದ ಪ್ರಸ್ತುತ ಇರುವ ಕಟ್ಟಡದಲ್ಲೇ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಭೂಸ್ವಾಧೀನ ಹಾಗೂ ಕಟ್ಟಡ ನಿರ್ಮಾಣದ ವಿಳಂಬಕ್ಕೆ ಕಾಯದೆ ತಕ್ಷಣವೇ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 100 ಎಕರೆ ಜಾಗ ಹುಡುಕಾಟ

"ವಿಶ್ವವಿದ್ಯಾಲಯವನ್ನು ನಿಯಂತ್ರಿಸಲು ಹಾಗೂ ನಿರ್ವಹಿಸಲು ನಮಗೆ ಪ್ರತ್ಯೇಕ 'ಎಐ ವಿಶ್ವವಿದ್ಯಾಲಯ ಕಾಯ್ದೆ' ಅಗತ್ಯವಿದೆ. ಇದರ ಕರಡು ಮಸೂದೆ ಸಿದ್ಧಗೊಳ್ಳುತ್ತಿದ್ದು, ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು," ಎಂದು ಅತೀಕ್ ಸ್ಪಷ್ಟಪಡಿಸಿದ್ದಾರೆ.

ಈ ವಿಶ್ವವಿದ್ಯಾಲಯದ ಶಾಶ್ವತ ಕ್ಯಾಂಪಸ್‌ಗಾಗಿ ಬೆಂಗಳೂರಿನಲ್ಲಿ ಸುಮಾರು 100 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಕ್ವಿನ್‌ ಸಿಟಿ (KWIN City), ರಕ್ಷಣೆ ಮತ್ತು ಏರೋಸ್ಪೇಸ್ ಪಾರ್ಕ್ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರಮುಖ ಸ್ಥಳಗಳನ್ನಾಗಿ ಪರಿಗಣಿಸಲಾಗಿದೆ.

"ಸೂಕ್ತ ಜಾಗವನ್ನು ಗುರುತಿಸಿ ಮಂಜೂರು ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (KIADB) ಸೂಚಿಸಲಾಗಿದೆ. ಜಮೀನು ಹಂಚಿಕೆಯಾಗುವವರೆಗೆ ಸರ್ಕಾರಿ ಕಟ್ಟಡದಲ್ಲೇ ವಿಶ್ವವಿದ್ಯಾಲಯದ ಕೆಲಸಗಳು ಆರಂಭವಾಗಿ, ನಂತರ ಶಾಶ್ವತ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳಲಿದೆ," ಎಂದು ಅವರು ವಿವರಿಸಿದ್ದಾರೆ.

ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಜಾಗತಿಕ ಮಾದರಿ

ಈ ವಿಶ್ವವಿದ್ಯಾಲಯವು ಎಐ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗೆ ಕರ್ನಾಟಕದ ಉನ್ನತ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಎಐ ವಲಯಕ್ಕೆ ಸಂಬಂಧಿಸಿದ ವಿಶೇಷ ಪದವಿ ಕೋರ್ಸ್‌ಗಳು ಹಾಗೂ ಪ್ರಮಾಣಪತ್ರ (Certificate) ಕೋರ್ಸ್‌ಗಳನ್ನು ನೀಡಲಾಗುತ್ತದೆ.

ವಿಶ್ವವಿದ್ಯಾಲಯ ಸಂಪೂರ್ಣವಾಗಿ ಸ್ಥಾಪನೆಯಾಗುವವರೆಗೆ ಯುವಜನರ ಕೌಶಲ್ಯಾಭಿವೃದ್ಧಿಗೆ ವಿಳಂಬವಾಗದಂತೆ ನೋಡಿಕೊಳ್ಳಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಯುಡಬ್ಲ್ಯೂಸಿಇ (UVCE) ಹಾಗೂ ಐಐಐಟಿ ಬೆಂಗಳೂರು (IIIT Bangalore) ಸಂಸ್ಥೆಗಳ ಮೂಲಕ ಎಐ ಪ್ರಮಾಣಪತ್ರ ಕೋರ್ಸ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯು ಶೈಕ್ಷಣಿಕ ಕ್ಷೇತ್ರ, ಉದ್ಯಮ ರಂಗ ಹಾಗೂ ಸರ್ಕಾರವನ್ನು ಒಂದೇ ಸೂರಿನಡಿ ತಂದು, ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಿದೆ ಎಂದು ಅತೀಕ್ ಹೇಳಿದ್ದಾರೆ.

ಈ ಬೃಹತ್ ಯೋಜನೆಗೆ ಮಾರ್ಗಸೂಚಿ (Roadmap) ಸಿದ್ಧಪಡಿಸಲು ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ಐಐಟಿ ಮುಂಬೈನ ಮಾಜಿ ನಿರ್ದೇಶಕ ಪ್ರೊ. ಮಿಶ್ರಾ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತಿದೆ. ಅಲ್ಲದೆ, ತೈವಾನ್/ಯುಎಇಯ ಎಐ ವಿಶ್ವವಿದ್ಯಾಲಯಗಳು, ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಎಐ ಮತ್ತು ಎಂಐಟಿ ಸ್ಕೂಲ್‌ ಆಫ್ ಎಐ ಸಂಸ್ಥೆಗಳ ಮಾದರಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರವೇ ಕರ್ನಾಟಕದ ಎಐ ವಿಶ್ವವಿದ್ಯಾಲಯದ ರೂಪುರೇಷೆಯನ್ನು ಅಂತಿಮಗೊಳಿಸಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರು-ಹೊಸೂರು ಪ್ರಸ್ತಾವಿತ ಮೆಟ್ರೋ ಯೋಜನೆ ವರ್ಕ್ ಔಟ್ ಆಗಲ್ಲ, ಸಬರ್ಬನ್ ರೈಲೇ ಬೆಸ್ಟ್! ತಜ್ಞರ ವಾದ
KRS Party: ವಾಲ್ಮೀಕಿ ನಿಗಮ ಹಗರಣ: ಗಂಭೀರ ಆರೋಪ ಎದುರಿಸುತ್ತಿರುವ ಬಿ ನಾಗೇಂದ್ರಗೆ ಮಂತ್ರಿಗಿರಿ ಯಾಕೆ? KRS ಪಾರ್ಟಿ ಕಿಡಿ