ಬೆಂಗಳೂರಿನಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ RTO ಕಾರ್ಯಾಚರಣೆ: 263 ವಾಹನ ಜಪ್ತಿ, ರೈಡರ್ಸ್ ಆಕ್ರೋಶ!

Published : Aug 06, 2026, 11:31 PM IST
Bengaluru Bike Taxi

ಸಾರಾಂಶ

ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯು ಕಾನೂನುಬಾಹಿರ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದೆ. ವೈಯಕ್ತಿಕ ಬಳಕೆಯ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ರ‍್ಯಾಪಿಡೋ, ಉಬರ್‌ನ 263 ಬೈಕ್‌ಗಳನ್ನು ಆರ್‌ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ದಿಢೀರ್ ಕ್ರಮದಿಂದ ಬೈಕ್ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು (ಆ.06): ಬೆಂಗಳೂರಿನಲ್ಲಿ ವೈಯಕ್ತಿಕ ಬಳಕೆಯ (ವೈಟ್ ಬೋರ್ಡ್) ದ್ವಿಚಕ್ರ ವಾಹನಗಳನ್ನು ಕಾನೂನುಬಾಹಿರವಾಗಿ ವಾಣಿಜ್ಯ ಬಳಕೆಗೆ (ಬೈಕ್ ಟ್ಯಾಕ್ಸಿ) ಉಪಯೋಗಿಸುತ್ತಿರುವವರ ವಿರುದ್ಧ ರಾಜ್ಯ ಸಾರಿಗೆ ಇಲಾಖೆ ಸಮರ ಸಾರಿದೆ. ಆರ್‌ಟಿಒ (RTO) ಅಧಿಕಾರಿಗಳು ನಗರಾದ್ಯಂತ ನಡೆಸಿದ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ ಒಟ್ಟು 263 ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ 11 ಆರ್‌ಟಿಒ ಕಚೇರಿಗಳ ವ್ಯಾಪ್ತಿಯಲ್ಲಿ ಈ ಬೃಹತ್ ತಪಾಸಣೆ ನಡೆದಿದ್ದು, ರ‍್ಯಾಪಿಡೋ (Rapido), ಉಬರ್ (Uber) ಸೇರಿದಂತೆ ವಿವಿಧ ಆ್ಯಪ್‌ಗಳ ಮೂಲಕ ಅನಧಿಕೃತವಾಗಿ ಚಲಿಸುತ್ತಿದ್ದ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಪರ ಸಾರಿಗೆ ಆಯುಕ್ತರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಕ್ ಟ್ಯಾಕ್ಸಿ ಚಾಲಕರ ಆತಂಕ ಮತ್ತು ಆಕ್ರೋಶ:

ಆರ್‌ಟಿಒ ಅಧಿಕಾರಿಗಳ ಈ ದಿಢೀರ್ ಕಾರ್ಯಾಚರಣೆಯಿಂದ ದಿನಗೂಲಿ ನೆಚ್ಚಿಕೊಂಡಿದ್ದ ಬೈಕ್ ಟ್ಯಾಕ್ಸಿ ಚಾಲಕರು ಕಂಗಾಲಾಗಿದ್ದಾರೆ. ‘ನಾವು ದಿನಕ್ಕೆ 800 ರಿಂದ 900 ರೂಪಾಯಿ ದುಡಿಯುತ್ತೇವೆ. ಯಾವುದೇ ಮುನ್ಸೂಚನೆ ನೀಡದೆ ಬೈಕ್ ಜಪ್ತಿ ಮಾಡಿ, ಸಾವಿರಾರು ರೂಪಾಯಿ ದಂಡ ಕಟ್ಟಿ ಅಂದರೆ ನಾವು ಎಲ್ಲಿಂದ ತರಬೇಕು? ಸರ್ಕಾರಕ್ಕೆ ಅನಧಿಕೃತ ಬೈಕ್ ಟ್ಯಾಕ್ಸಿ ಬೇಡವೆಂದರೆ ನೇರವಾಗಿ ರ‍್ಯಾಪಿಡೋ, ಉಬರ್ ಆ್ಯಪ್‌ಗಳನ್ನೇ ಪ್ಲೇಸ್ಟೋರ್‌ನಿಂದ ಬಂದ್ ಮಾಡಲಿ. ಅದನ್ನು ಬಿಟ್ಟು ಬಡ ಚಾಲಕರಿಗೆ ತೊಂದರೆ ಕೊಡುವುದು ಎಷ್ಟು ಸರಿ?’ ಎಂದು ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಟೋ ಮತ್ತು ಕ್ಯಾಬ್ ಚಾಲಕರ ಪಟ್ಟು:

ಇನ್ನೊಂದೆಡೆ, ನಗರದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ಆಟೋ ಮತ್ತು ಕ್ಯಾಬ್ ಚಾಲಕರ ಸುದೀರ್ಘ ಬೇಡಿಕೆಯಾಗಿದೆ. ನಗರದಲ್ಲಿ ‘ಒನ್ ಸಿಟಿ, ಒನ್ ರೇಟ್’ (One City, One Rate) ನಿಯಮವನ್ನು ಜಾರಿಗೆ ತರಬೇಕು ಮತ್ತು ತಮ್ಮ ಜೀವನೋಪಾಯಕ್ಕೆ ಕಂಟಕವಾಗಿರುವ ಬೈಕ್ ಟ್ಯಾಕ್ಸಿಗಳನ್ನು ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಆಟೋ ಚಾಲಕರ ಸಂಘಟನೆಗಳು ಒತ್ತಾಯಿಸುತ್ತಿವೆ.

ಸದ್ಯ ಸರ್ಕಾರದ ಈ ನಿರ್ದಾಕ್ಷಿಣ್ಯ ಕ್ರಮದಿಂದಾಗಿ ಒಂದು ಕಡೆ ಕಾನೂನು ಪಾಲನೆಯಾಗುತ್ತಿದ್ದರೆ, ಇನ್ನೊಂದೆಡೆ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸವಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕಂಪನಿಗಳು ಹಾಗೂ ಸರ್ಕಾರದ ನಡುವಿನ ಈ ಶೀತಲ ಸಮರದಲ್ಲಿ ಬಡ ಗಿಗ್ ಕಾರ್ಮಿಕರು ನಲುಗುತ್ತಿದ್ದಾರೆ.

PREV
Read more Articles on
click me!

Recommended Stories

ಶ್ರೀಲಂಕಾ ಟೆಸ್ಟ್‌ನಲ್ಲಿ ಕನ್ನಡಿಗ ರಾಹುಲ್, ಗಿಲ್, ಜೈಸ್ವಾಲ್‌ಗೆ ಸ್ಪೆಷಲ್ ಟಾಸ್ಕ್ ಕೊಟ್ಟ ಗೌತಮ್ ಗಂಭೀರ್!
SIR: ಬೆಂಗಳೂರಿನಲ್ಲಿ 50 ಲಕ್ಷ ವೋಟರ್ ಐಡಿ ಕಟ್?! ನಿಮ್ಮ ಹೆಸರೂ ಲಿಸ್ಟ್‌ನಲ್ಲಿದೆಯಾ ಎಂದು ಹೀಗೆ ಚೆಕ್ ಮಾಡಿ!