
ಬೆಂಗಳೂರು (ಅ.2): ರಾಜ್ಯದಲ್ಲಿ ಹಾಲಿನ ದರವನ್ನು ಬರೋಬ್ಬರಿ 8 ರೂಪಾಯಿ (ಟೋನ್ಡ್ ಮಿಲ್ಕ್ ಮಾತ್ರ 8 ರೂಪಾಯಿ, ಉಳಿದವು 12 ರೂಪಾಯಿ), ಮೊಸರಿನ ದರವನ್ನು 14 ರೂಪಾಯಿ ಏರಿಕೆ ಮಾಡಿಯೂ ಏನೂ ಆಗದಂತೆ ಸುಮ್ಮನಿರುವ ರಾಜ್ಯ ಸರ್ಕಾರ ಇನ್ನೇನು ಕೆಲವೇ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲು ಸಜ್ಜಾಗಿದೆ. ಒಂದೆಡೆ ರಾಜ್ಯ ಸರ್ಕಾರದ ಈ ನೀತಿಗಳಿಂದ ಜನಸಾಮಾನ್ಯರ ದಿನನಿತ್ಯದ ಬದುಕು ಕಡುಕಷ್ಟಕ್ಕೆ ಜಾರುತ್ತಿದ್ದರೆ, ದರ ಏರಿಕೆಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವರುಗಳು ಆಡುತ್ತಿರುವ ರಾಜಾರೋಷದ ಸುಳ್ಳುಗಳು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇಂಧನ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಬಸ್ ಟಿಕೆಟ್ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ. ಈ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ಅವರು, ಕಳೆದ 11 ವರ್ಷಗಳಿಂದ ಬಸ್ ಟಿಕೆಟ್ ದರ ಏರಿಕೆ ಮಾಡಿಲ್ಲ' ಎಂದು ನೇರವಾಗಿ ಸುಳ್ಳು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್, ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ ಹಾಗೂ ಟಿಕೆಟ್ ದರ ಪರಿಷ್ಕರಣೆಯ ಕುರಿತು ವಿವರವಾದ ಮಾಹಿತಿ ನೀಡಿದರು. ನ.4 ರಂದು ಹಿರಿಯ ಅಧಿಕಾರಿಗಳು ಹಾಗೂ ಸಂಸ್ಥೆಗಳ ಮುಖ್ಯಸ್ಥರ ಮಹತ್ವದ ಸಭೆ ಕರೆಯಲಾಗಿದ್ದು, ಆ ಸಭೆಯ ಚರ್ಚೆಯ ನಂತರ ಎಷ್ಟು ಪ್ರಮಾಣದಲ್ಲಿ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು ಎಂಬುದನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿದರು.
ಬಸ್ ದರ ಹೆಚ್ಚಳ ನಿರ್ಧಾರವನ್ನು ಸಮರ್ಥಿಸಿಕೊಂಡ ಸಚಿವರು, ಕಳೆದ 11 ವರ್ಷಗಳಿಂದ ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಟಿಕೆಟ್ ದರವನ್ನು ಪರಿಷ್ಕರಿಸಿಲ್ಲ ಅಥವಾ ಏರಿಕೆ ಮಾಡಿಲ್ಲ. ದಿನನಿತ್ಯದ ನಿರ್ವಹಣಾ ವೆಚ್ಚಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ಸಾರಿಗೆ ಸಂಸ್ಥೆಗಳನ್ನು ನಡೆಸುವುದು ತುಂಬಾ ಕಷ್ಟವಾಗುತ್ತಿದೆ. ಸಾರ್ವಜನಿಕರು ಹಾಗೂ ಸಾರಿಗೆ ಬಳಕೆದಾರರು ನಮ್ಮ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ನಮ್ಮ ಮೇಲೂ ಕೊಂಚ ಕರುಣೆ ತೋರಿಸಬೇಕು ಎಂದು ಮನವಿ ಮಾಡಿದರು. ಆದರೆ, ಸಾರಿಗೆ ಸಚಿವರಿಗೆ ತಮ್ಮ ಸರ್ಕಾರದಲ್ಲೇ ಒಂದು ವರ್ಷದ ಹಿಂದೆ ಆಗಿರುವ ಭಾರೀ ಏರಿಕೆ ನೆನಪಿಲ್ಲ.
ಹೌದು 2025ರ ಜನವರಿ 2 ರಂದು ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ದರವನ್ನು ಶೇ.15 ರಷ್ಟು ಏರಿಕೆ ಮಾಡಿತ್ತು. ಹಾಗೇನಾದರೂ ಈ ಬಾರಿ ಟಿಕೆಟ್ ದರ ಏರಿಕೆ ಜಾರಿಗೆ ಬಂದಲ್ಲಿ ಸರಿಸುಮಾರು 18 ತಿಂಗಳ ಅಂತರದಲ್ಲಿ 2ನೇ ಬಾರಿ ಕೆಎಸ್‌ಆರ್‌ಟಿಸಿ ದರ ಏರಿಕೆ ಆದಂತಾಗಲಿದೆ.
ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ ಅವರು, "ಕೇಂದ್ರ ಸರ್ಕಾರವು ಕಳೆದ ಕೆಲ ಅವಧಿಯಲ್ಲಿ ಬರೋಬ್ಬರಿ 5 ಬಾರಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇಂಧನ ದರ ಏರಿಕೆಯಾದಾಗ ಯಾರೂ ಪ್ರಶ್ನೆ ಮಾಡುವುದಿಲ್ಲ. ನಿರಂತರವಾಗಿ ಇಂಧನ ಬೆಲೆ ಹೆಚ್ಚಾಗಿರುವುದರಿಂದ ಸಂಸ್ಥೆಗೆ ಭಾರಿ ನಷ್ಟ ಉಂಟಾಗುತ್ತಿದ್ದು, ಅನಿವಾರ್ಯವಾಗಿ ನಾವು ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.
'ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ) ನೀಡಿದ್ದರಿಂದಲೇ ಸಾರಿಗೆ ಸಂಸ್ಥೆಗಳು ನಷ್ಟಕ್ಕೆ ಸಿಲುಕಿವೆ' ಎಂಬ ವಿಪಕ್ಷಗಳ ಟೀಕೆಗೆ ಉತ್ತರ ನೀಡಿದ ಅವರು, ಹೆಣ್ಣುಮಕ್ಕಳಿಗೆ ಫ್ರೀ ಕೊಟ್ಟು ಹೀಗಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ಸಾರಿಗೆ ಇಲಾಖೆಗೆ ಶಕ್ತಿ ಯೋಜನೆಯ ಶೇ.100 ರಷ್ಟು ಮರುಪಾವತಿ ಹಣವನ್ನು ಕಾಲಕಾಲಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಉಚಿತ ಯೋಜನೆಯಿಂದ ಸಂಸ್ಥೆಗೆ ಯಾವುದೇ ತೊಂದರೆಯಾಗಿಲ್ಲ ಎಂದಿದ್ದಾರೆ.
ಬಸ್ ದರ ಪರಿಷ್ಕರಣೆಗೆ ರಚಿಸಲಾಗಿದ್ದ ಸಮಿತಿಯು ತನ್ನ ವರದಿಯಲ್ಲಿ ಭಾರಿ ಪ್ರಮಾಣದ ದರ ಏರಿಕೆಗೆ ಶಿಫಾರಸು ಮಾಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, "ಸಮಿತಿಯ ವರದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಸಲು ಸೂಚಿಸಲಾಗಿದೆ. ಆದರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಮಿತಿ ಹೇಳಿದಷ್ಟೂ ಪ್ರಮಾಣದಲ್ಲಿ ದರ ಏರಿಸಲು ನಮಗೆ ಸಾಧ್ಯವಿಲ್ಲ. ಬೇರೆ ನೆರೆರಾಜ್ಯಗಳಿಗೆ ಹೋಲಿಸಿದರೆ ಇಂದಿಗೂ ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಬಸ್ ಟಿಕೆಟ್ ದರ ಇದೆ. ಹೀಗಾಗಿ ಎಲ್ಲರ ಜೊತೆ ಚರ್ಚಿಸಿ, ಸಾರ್ವಜನಿಕರ ಜೇಬಿಗೆ ಹೊರೆಯಾಗದಂತೆ 'ಸ್ಟೇಜ್ ಬೈ ಸ್ಟೇಜ್' (ಹಂತ ಹಂತವಾಗಿ) ಟಿಕೆಟ್ ದರ ಹೆಚ್ಚಳ ಮಾಡಲು ನಿರ್ಧರಿಸುತ್ತೇವೆ. ನಾಡಿನ ಸಭೆಯ ನಂತರ ಅಂತಿಮ ದರವನ್ನು ಘೋಷಿಸಲಾಗುವುದು" ಎಂದರು.