
ನಿಮಗೆ ಪಗಾರ ಕೊಡೋರು ನಾವು ಕಣ್ರೋ, ನಮಗೇ ಯಾಕೆ ಈ ತರ ಮೋಸ ಮಾಡ್ತೀರಾ? ಅಂತ ಅನ್ನದಾತ ಎದೆಯುಬ್ಬಿಸಿ ಕೇಳಿರೋ ಈ ಒಂದೇ ಒಂದು ಪ್ರಶ್ನೆ ಈಗ ಇಡೀ ಸರ್ಕಾರಗಳ ನಿದ್ದೆಗೆಡಿಸಿದೆ. ನಮ್ಮ ಹೊಟ್ಟೆ ಮೇಲೆ ಹೊಡೆಯೋದನ್ನ ನಿಲ್ಲಿಸಿ, ಕಬ್ಬಿಗೆ ಟನ್‌ಗೆ 4,500 ರೂಪಾಯಿ ಕೊಡೋವರೆಗೂ ಈ ಹೋರಾಟದ ಕಿಚ್ಚು ಆರೋದೇ ಇಲ್ಲ ಅಂತ ರೈತ ಮುಖಂಡ ಚೂನಪ್ಪ ಪೂಜಾರಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಗುಡುಗಿದ್ದಾರೆ. ಬೆವರು ಸುರಿಸಿ ದೇಶಕ್ಕೆ ಅನ್ನ ಹಾಕೋ ಕೈಗಳು ಈಗ ನ್ಯಾಯಕ್ಕಾಗಿ ಬೀದಿಗೆ ಇಳಿದಿದ್ದು, ಈ ನಿಟ್ಟಿನಲ್ಲಿ ನಾಳೆ ಕರ್ನಾಟಕ ಬಂದ್ ಮತ್ತು ಜೈಲ್ ಭರೋ ಚಳವಳಿಯ ತೀವ್ರ ಎಚ್ಚರಿಕೆ ನೀಡಿವೆ.
ಸರ್ಕಾರ ನಡೆಸೋ ನಿಮಗೆ ಪಗಾರ ಕೊಡೋರು ನಾವು, ನಮಗೇ ಯಾಕೆ ಮೋಸ ಮಾಡ್ತೀರಾ? ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಚೂನಪ್ಪ ಪೂಜಾರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಬ್ಬಿಗೆ ಪ್ರತಿ ಟನ್‌ಗೆ ಕನಿಷ್ಠ ₹4,500 ನಿಗದಿಪಡಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ನಿಗದಿಪಡಿಸಿದ ಬೆಲೆ ಸಿಗುವವರೆಗೂ ಯಾವುದೇ ಕಾರಣಕ್ಕೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗಾಗಿ ಇಡೀ 'ಕರ್ನಾಟಕ ಬಂದ್' ಹಾಗೂ 'ಜೈಲ್ ಭರೋ' ಚಳವಳಿ ನಡೆಸಲು ಕರೆ ನೀಡಲಾಗಿದೆ. ಮಿನಾಥನ್ ವರದಿ ಜಾರಿ: ದೇಶದ ರೈತರ ಹಿತ ಕಾಯುವ ಸ್ವಾಮಿನಾಥನ್ ಆಯೋಗದ ವರದಿಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಕೇವಲ ಕಬ್ಬಲ್ಲದೆ ಎಲ್ಲ ಬೆಳೆಗಳಿಗೂ ಯೋಗ್ಯವಾದ ಬೆಲೆ ಸಿಗಬೇಕು ಮತ್ತು ಬಾಕಿ ಇರುವ ಬರಗಾಲದ ಪರಿಹಾರವನ್ನು ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಸರ್ಕಾರಕ್ಕೆ ನೀಡಿದ್ದ ಎಲ್ಲಾ ಗಡುವು ಮುಗಿದರೂ ಯಾವುದೇ ಸಕಾರಾತ್ಮಕ ನಿರ್ಧಾರ ಬಾರದ ಹಿನ್ನೆಲೆಯಲ್ಲಿ, ಚೂನಪ್ಪ ಪೂಜಾರಿ ಅವರು ನಾಳೆಯೇ (ಅಕ್ಟೋಬರ್ 31) ಪ್ರತಿಭಟನೆಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲು ಕರೆ ನೀಡಿದ್ದಾರೆ.
ನಾಳೆ ಬೆಳಿಗ್ಗೆಯಿಂದಲೇ ಇಡೀ ರಾಜ್ಯಾದ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು (ಹತ್ತರಗಿ ಟೋಲ್ ಗೇಟ್ ಒಳಗೊಂಡಂತೆ) ಸಂಪೂರ್ಣ ಬಂದ್ ಮಾಡಲು ಲಕ್ಷಾಂತರ ರೈತರು ಸಜ್ಜಾಗಿದ್ದಾರೆ. ಜಿಲ್ಲಾಡಳಿತಗಳು ಎಷ್ಟೇ ಕಠಿಣ ಕಾನೂನು ನಿರ್ಬಂಧಗಳನ್ನು ಹೇರಿದರೂ, ಲಾಠಿ ಬೀಸಿದರೂ ಅಥವಾ ಜೈಲಿಗೆ ಅಟ್ಟಿದರೂ ಹೋರಾಟದಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ನೇರ ಸವಾಲು ಹಾಕಿದ್ದಾರೆ. ಸಕ್ಕರೆ ಮಂತ್ರಿಗಳು ಹಾಗೂ ಖಾಸಗಿ ಮಾಲೀಕರ ಕಾರ್ಖಾನೆಗಳ ಗೋಡೌನ್‌ಗಳಿಗೆ ಬೀಗ ಜಡಿದು ಸಕ್ಕರೆ ಸಾಗಾಟವನ್ನು ನಾಳೆಯಿಂದ ಸಂಪೂರ್ಣವಾಗಿ ತಡೆಯಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ. ನಾವು ಕಷ್ಟಪಟ್ಟು ದುಡಿದು ಸರ್ಕಾರಕ್ಕೆ ಸಂಬಳ ಕೊಡ್ತೀವಿ, ಅಂತದ್ರಲ್ಲಿ ನಮ್ಮನ್ನೇ ಬೀದಿಗೆ ತಳ್ಳುತ್ತೀರಲ್ಲ" ಎನ್ನುವ ಆಡುಭಾಷೆಯ ಕಿಚ್ಚು ಈಗ ಬಂದ್ ರೂಪದಲ್ಲಿ ನಾಳೆ ಇಡೀ ಕರ್ನಾಟಕವನ್ನು ತಲ್ಲಣಗೊಳಿಸಲಿದೆ.