ರೈತನ ಹೆಗಲ ಮೇಲೆ ಬಂದೂಕಿಟ್ಟು ಗ್ರಾಹಕನ ಎದೆಗೆ ಗುಂಡು ಹೊಡೆದ ಸರ್ಕಾರ: ಹಾಲು, ಬಸ್‌, ವಿದ್ಯುತ್‌ ಎಲ್ಲದರ ಬೆಲೆ ಏರಿಕೆ, ಬಡವ ಬದುಕೋದು ಹೇಗೆ ಸ್ವಾಮಿ?

Published : Oct 30, 2026, 07:05 PM IST
karnataka state finances pressure

ಸಾರಾಂಶ

ಉಚಿತ ಗ್ಯಾರಂಟಿ ಯೋಜನೆಗಳು, ಬರಗಾಲ ಹಾಗೂ ವೆಚ್ಚಗಳ ಏರಿಕೆಯಿಂದಾಗಿ ಕರ್ನಾಟಕ ಸರ್ಕಾರದ ಮೇಲೆ ತೀವ್ರ ಆರ್ಥಿಕ ಒತ್ತಡ ಉಂಟಾಗಿದ್ದು, ಕಂದಾಯ ಕೊರತೆ ಎದುರಾಗಿದೆ. ಇದನ್ನು ಸರಿದೂಗಿಸಲು ನಂದಿನಿ ಹಾಲಿನ ದರ ಏರಿಕೆ ಮಾಡಲಾಗಿದ್ದು, ಬಸ್ ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆಯಿದೆ.

ಬೆಂಗಳೂರು (ಅ.30): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 'ಐದು ಗ್ಯಾರಂಟಿ ಯೋಜನೆಗಳನ್ನು' ಜಾರಿಗೆ ತಂದು ಮೂರು ವರ್ಷಗಳು ಕಳೆಯುತ್ತಿರುವ ಬೆನ್ನಲ್ಲೇ, ರಾಜ್ಯದ ಬೊಕ್ಕಸದ ಮೇಲೆ ಹಿಂದೆಂದೂ ಕಾಣದ ಆರ್ಥಿಕ ಒತ್ತಡ ಉಂಟಾಗಿದೆ. ಒಂದೆಡೆ ಶ್ರಮದಾಯಕ ಸಾಮಾಜಿಕ ಕಲ್ಯಾಣ ವೆಚ್ಚಗಳು, ಇನ್ನೊಂದೆಡೆ ಭೀಕರ ಬರಗಾಲದ ಪರಿಸ್ಥಿತಿ ಹಾಗೂ ಸರ್ಕಾರಿ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚಗಳ ಏರಿಕೆಯು ಸರ್ಕಾರದ ಆರ್ಥಿಕತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದನ್ನು ಸರಿದೂಗಿಸಲು ಸರ್ಕಾರವು ಸಾರ್ವಜನಿಕ ನಿತ್ಯೋಪಯೋಗಿ ವಸ್ತುಗಳು ಹಾಗೂ ಸೇವೆಗಳ ದರವನ್ನು ಮನಸೋಇಚ್ಛೆ ಏರಿಕೆ ಮಾಡುತ್ತಿದೆ. ಹಾಲು, ವಿದ್ಯುತ್‌, ಬಸ್‌. ಜನಸಾಮಾನ್ಯ ಬಳಕೆ ಮಾಡುವ ಎಲ್ಲದರ ಬೆಲೆಯನ್ನು ನಿರೀಕ್ಷೆಗೂ ಮೀರಿ ಏರಿಕೆ ಮಾಡುತ್ತಿದೆ.

ದರ ಏರಿಕೆಯ ಸಾಲಿನಲ್ಲಿ ಇತ್ತೀಚಿನ ಸೇರ್ಪಡೆ ಎಂದರೆ ನಂದಿನಿ ಹಾಲಿನ ದರದಲ್ಲಿ ಲೀಟರ್‌ಗೆ ಬರೋಬ್ಬರಿ ₹8 ಭಾರಿ ಏರಿಕೆ ಮಾಡಿರುವುದು! ಅಕ್ಟೋಬರ್ 29 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅಂಕಿತ ಬಿದ್ದಿದ್ದು, ನವೆಂಬರ್ 1 ರಿಂದ ಹೊಸ ದರ ಜಾರಿಗೆ ಬರಲಿದೆ. ಇದರೊಂದಿಗೆ ಪ್ರಸ್ತುತ ₹46 ಇರುವ ಲೀಟರ್ ಟೋನ್ಡ್ ಹಾಲಿನ ದರ ₹54 ಕ್ಕೆ ಏರಿಕೆಯಾಗಲಿದೆ. ಹಾಲಿನ ದರ ಏರಿಕೆಯ ಹೆಚ್ಚಿನ ಲಾಭ ರೈತನಿಗೆ ಎಂದು ಸರ್ಕಾರ ಹೇಳಿದ್ದರೂ, ಇದು ರೈತನ ಹೆಗಲ ಮೇಲೆ ಬಂದೂಕಿಟ್ಟು, ಗ್ರಾಹಕನನ್ನು ಸಾಯಿಸುವ ಪ್ರಯತ್ನ ಎಂದೇ ಕಾಣುತ್ತಿದೆ. ಹಾಲಿಗೆ 7 ರೂಪಾಯಿ ಹೆಚ್ಚುವರಿಯಾಗಿ ಪಡೆಯುವ ರೈತ, ಉಳಿದೆಲ್ಲಾ ವಸ್ತುಗಳಿಗೆ ಅದಕ್ಕಿಂತ ದುಪ್ಪಟ್ಟು ಹಣ ತೆರೆಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಿರುವುದು, ಬರಗಾಲದ ಎಫೆಕ್ಟ್ ಹಾಗೂ ಹಾಲಿನ ಶೇಖರಣೆಯಲ್ಲಿ ಕಂಡುಬಂದ ಕುಸಿತವನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ರೈತರು ಕಳೆದ ಎರಡು ವರ್ಷಗಳಿಂದ ಬೆಲೆ ಏರಿಕೆಗೆ ಆಗ್ರಹಿಸುತ್ತಿದ್ದರು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಜುಲೈ 2023 ರಿಂದೀಚೆಗೆ ಅಂದರೆ, ಕಾಂಗ್ರೆಸ್‌ ಸರ್ಆರ ಬಂದ ಬಳಿಕ ನಡೆದ 4 ದರ ಪರಿಷ್ಕರಣೆಗಳಲ್ಲಿ ನಂದಿನಿ ಹಾಲಿನ ದರ ಒಟ್ಟಾರೆಯಾಗಿ ಬರೋಬ್ಬರಿ ₹17 ಏರಿಕೆಯಾದಂತಾಗಿದೆ.

ಬಸ್ ಪ್ರಯಾಣ ದರವೂ ಶೀಘ್ರವೇ ಏರಿಕೆ?

ಹಾಲಿನ ದರ ಏರಿಕೆಯ ಬೆನ್ನಲ್ಲೇ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವೂ (Bus Fares) ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರು ನವೆಂಬರ್ 4 ರಂದು ಈ ಕುರಿತು ಪ್ರಮುಖ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಬಸ್ ದರ ಏರಿಕೆಯಾಗಲಿದೆ. ಈ ಹಿಂದೆ ಜನವರಿ 2, 2025 ರಂದು ಸಚಿವ ಸಂಪುಟವು ಶೇ. 15 ರಷ್ಟು ಬಸ್ ದರ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು. ಇಂಧನ ಬೆಲೆ ಏರಿಕೆ, ನೌಕರರ ವೇತನ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದನ್ನು ಸಾರಿಗೆ ಇಲಾಖೆ ಉಲ್ಲೇಖಿಸಿದೆ. ಅದರಲ್ಲೂ ವಿಶೇಷವಾಗಿ 'ಶಕ್ತಿ' (Shakti) ಯೋಜನೆಯಡಿ ಮಹಿಳೆಯರಿಗೆ ನೀಡಲಾದ ಉಚಿತ ಬಸ್ ಪ್ರಯಾಣದ ಕಾರಣದಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಬೊಕ್ಕಸ ಹಿಂಡುತ್ತಿರುವ 'ಗ್ಯಾರಂಟಿ ಬಿಲ್'

ರಾಜ್ಯದ ಪ್ರಸ್ತುತ ಆರ್ಥಿಕ ಚರ್ಚೆಯ ಕೇಂದ್ರಬಿಂದುವಾಗಿರುವುದು ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವನಿಧಿ ಹಾಗೂ ಶಕ್ತಿ. 2026-27 ನೇ ಸಾಲಿನ ಆಯವ್ಯಯ ಅಂದಾಜಿನ (Budget Estimates) ಪ್ರಕಾರ, ಈ ಐದು ಗ್ಯಾರಂಟಿ ಯೋಜನೆಗಳ ಒಟ್ಟು ವೆಚ್ಚ ಬರೋಬ್ಬರಿ ₹51,286 ಕೋಟಿ ತಲುಪಿದೆ!

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ, ಹಾಲಿನ ದರದಲ್ಲಿ ಲೀಟರ್‌ಗೆ ₹8 ಏರಿಕೆ ಮಾಡಿರುವುದು ಸಾಮಾನ್ಯ ಕುಟುಂಬಗಳ ಬದುಕನ್ನು ದುಸ್ತರಗೊಳಿಸಲಿದೆ. ಹಾಲು ಅತ್ಯಗತ್ಯ ವಸ್ತುವಾಗಿದ್ದು, ಈ ಏರಿಕೆ ಅಸಂಬದ್ಧವಾಗಿದೆ. ಹೋಟೆಲ್ ಹಾಗೂ ಚಹಾ ಅಂಗಡಿಯವರು ಈಗಾಗಲೇ ಟೀ ದರದಲ್ಲಿ ₹5 ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, "ಉಚಿತ ಕಲ್ಯಾಣ ಯೋಜನೆಗಳನ್ನು ಎಲ್ಲರಿಗೂ ನೀಡುವುದನ್ನು (Universal welfare) ಸರ್ಕಾರ ಮರುಪರಿಶೀಲಿಸಬೇಕು. ನಿಜವಾಗಿಯೂ ಅಗತ್ಯವಿರುವ ಬಡವರಿಗೆ ಮಾತ್ರ ಸಬ್ಸಿಡಿ ತಲುಪಬೇಕು. ಅದನ್ನು ಬಿಟ್ಟು ಸರ್ಕಾರವು ಸಾರ್ವಜನಿಕರಿಗೆ ಉತ್ತಮ ವಿದ್ಯುತ್, ಕೈಗೆಟುಕುವ ಸಾರಿಗೆ ಹಾಗೂ ಗುಣಮಟ್ಟದ ಸೇವೆ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ಆರ್ಥಿಕ ಒತ್ತಡವನ್ನು ಒಪ್ಪಿಕೊಂಡಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಗ್ಯಾರಂಟಿ ಯೋಜನೆಗಳ ವಾರ್ಷಿಕ ವೆಚ್ಚವು ಆರಂಭದಲ್ಲಿ ಅಂದಾಜಿಸಿದ್ದ ₹40,000 ರಿಂದ ₹45,000 ಕೋಟಿಯನ್ನು ಮೀರಿ ಇದೀಗ ₹50,000 ಕೋಟಿಯ ಗಡಿಯನ್ನು ದಾಟಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ರಾಜ್ಯದ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದ್ದು, ₹62,481.88 ಕೋಟಿ ಕೃಷಿ ನಷ್ಟ ಸಂಭವಿಸಿದೆ ಎಂದು ತಿಳಿಸಿರುವ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದಿಂದ ₹20,585.73 ಕೋಟಿ ಬರ ಪರಿಹಾರ ಧನಕ್ಕೆ ಮನವಿ ಸಲ್ಲಿಸಿದೆ.

ಕರ್ನಾಟಕದ ಆರ್ಥಿಕ ಕುಸಿತವನ್ನು ಎತ್ತಿಹಿಡಿದ 'ಸಿಎಜಿ' (CAG) ವರದಿ

ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ (CAG) ಸಂಸ್ಥೆಯು 2023-24 ನೇ ಸಾಲಿನ ರಾಜ್ಯ ಹಣಕಾಸು ಆಡಿಟ್ ವರದಿಯಲ್ಲಿ ಕರ್ನಾಟಕದ ಆರ್ಥಿಕ ಕುಸಿತವನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ. ಹಿಂದಿನ ವರ್ಷ ಶೇ. ₹13,496 ಕೋಟಿ ಕಂದಾಯ ಹೆಚ್ಚುವರಿ (Surplus) ಹೊಂದಿದ್ದ ಕರ್ನಾಟಕ, ಪ್ರಸ್ತುತ ₹9,271 ಕೋಟಿ ಭಾರಿ ಕಂದಾಯ ಕೊರತೆಯನ್ನು ದಾಖಲಿಸಿದೆ. ರಾಜ್ಯ ಕೋಶದ ಕೊರತೆಯು ₹46,623 ಕೋಟಿಯಿಂದ ₹65,522 ಕೋಟಿಗೆ ಭಾರೀ ಏರಿಕೆ ಕಂಡಿದೆ.

ಅನರ್ಹ ಫಲಾನುಭವಿಗಳ ಕಡಿತ ಹಾಗೂ ಇತ್ತೀಚಿನ ‘ಎಸ್‌ಐಆರ್’ (SIR) ಲಿಂಕ್

ಸೋರಿಕೆಗಳನ್ನು ತಡೆಗಟ್ಟಲು ಹಾಗೂ ಅರ್ಹರಲ್ಲದ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಪ್ರಸ್ತುತ ಸುಮಾರು 1.2 ಕೋಟಿ ಬಿಪಿಎಲ್ (BPL) ಪಡಿತರ ಚೀಟಿಗಳಿದ್ದು, ಬರೋಬ್ಬರಿ 4.5 ಕೋಟಿಗೂ ಹೆಚ್ಚು ಜನರನ್ನು ಕವರ್ ಮಾಡುತ್ತಿವೆ. ಇಷ್ಟೊಂದು ದೊಡ್ಡ ಪ್ರಮಾಣದ ಡೇಟಾ ಪರಿಶೀಲಿಸುವುದು ಆಡಳಿತಾತ್ಮಕವಾಗಿ ದೊಡ್ಡ ಸವಾಲಾಗಿದೆ.

ಇತ್ತೀಚೆಗೆ ಅಕ್ಟೋಬರ್ 27 ರಂದು ಪೂರ್ಣಗೊಂಡ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಕರ್ನಾಟಕದ ಒಟ್ಟು ಮತದಾರರ ಸಂಖ್ಯೆ 5.54 ಕೋಟಿಯಿಂದ 4.54 ಕೋಟಿಗೆ ಕುಸಿದಿದೆ. ಇದರಲ್ಲಿ 2.29 ಕೋಟಿ ಮಹಿಳಾ ಮತದಾರರಿದ್ದಾರೆ. ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಯ ದುರ್ಬಳಕೆ ತಡೆಯಲು ಈ ಪರಿಷ್ಕೃತ ಮತದಾರರ ದತ್ತಾಂಶವನ್ನು ಬಳಸಿಕೊಳ್ಳಲು ಅಧಿಕಾರಿಗಳು ಆಲೋಚಿಸುತ್ತಿದ್ದಾರೆ. ಒಟ್ಟಾರೆಯಾಗಿ, ಉಚಿತ ಗ್ಯಾರಂಟಿಗಳ ಜಾರಿಯ ಜೊತೆಗೆ ಹಾಲಿನ ದರ, ಬಸ್ ದರ, ವಿದ್ಯುತ್ ದರ ಹಾಗೂ ಇಂಧನ ತೆರಿಗೆಗಳ ಕ್ಯುಮುಲೇಟಿವ್ ಏರಿಕೆಯು ಸಾಮಾನ್ಯ ಮನೆಗಳ ಆಯವ್ಯಯವನ್ನು ತಲೆಕೆಳಗಾಗಿಸಿದೆ. ಗ್ಯಾರಂಟಿ ಬದ್ಧತೆಯನ್ನು ಉಳಿಸಿಕೊಳ್ಳುತ್ತಲೇ, ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಒದಗಿಸುವುದು ಹಾಗೂ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು ಕಾಂಗ್ರೆಸ್ ಸರ್ಕಾರಕ್ಕೆ ಕತ್ತಿ ಮೇಲಿನ ನಡಿಗೆಯಾಗಿದೆ.

PREV
Read more Articles on
click me!

Recommended Stories

ಕರ್ನಾಟಕದಲ್ಲಿ ದೀಪಾವಳಿ ಪಟಾಕಿ ಸಿಡಿಸಲು ಸರ್ಕಾರದಿಂದ ಎರಡೇ ಗಂಟೆ ಅವಕಾಶ, ಹಸಿರು ಪಟಾಕಿಗೆ ಮಾತ್ರವೇ ಅನುಮತಿ!
ಮೆಟ್ರೋದಲ್ಲಿ ಕಿರುಕುಳವೆಂದ ಯುವತಿ ಇನ್‌ಸ್ಟಾಗ್ರಾಂ ಅಕೌಂಟ್ ಭರ್ಜರಿ ಹಿಟ್; ₹399ಗೆ Subscription ಖಾತೆ ತೆರೆದ ಸೌಪಿಕ