
ಬೆಂಗಳೂರು (ಅ.30): ಬೆಳಕಿನ ಹಬ್ಬ ದೀಪಾವಳಿ ಹತ್ತಿರವಾಗುತ್ತಿರುವಂತೆಯೇ ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಹಾಗೂ ಪಟಾಕಿ ವ್ಯಾಪಾರಿಗಳಿಗೆ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಚಳಿಗಾಲದ ಅವಧಿಯಲ್ಲಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಸಚಿವರು, ನ್ಯಾಯಾಲಯದ ಆದೇಶಗಳನ್ನು ಅನುಷ್ಠಾನಗೊಳಿಸಲು ಎಲ್ಲಾ ಜಿಲ್ಲಾಡಳಿತಗಳು ಹಾಗೂ ಜಾರಿ ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ದೀಪಾವಳಿಯ ಮೂರು ದಿನಗಳ ಕಾಲ ಅಂದರೆ ನವೆಂಬರ್ 8 ರಿಂದ ನವೆಂಬರ್ 10 ರವರೆಗೆ ಪ್ರತಿದಿನ ರಾತ್ರಿ 8:00 ರಿಂದ 10:00 ಗಂಟೆಯವರೆಗಿನ ಎರಡು ಗಂಟೆಗಳ ಕಾಲಾವಕಾಶದಲ್ಲಿ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಈ ನಿಗದಿತ ಸಮಯವನ್ನು ಹೊರತುಪಡಿಸಿ ಇತರ ಯಾವುದೇ ಸಮಯದಲ್ಲಿ ಪಟಾಕಿ ಸಿಡಿಸದಂತೆ ಕಟ್ಟುನಿಟ್ಟಿನ ಜಾಗ್ರತೆ ವಹಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಮಹಾನಗರ ಪಾಲಿಕೆಗಳ ಆಡಳಿತಕ್ಕೆ ಸೂಚಿಸಲಾಗಿದೆ. ಅಲ್ಲದೆ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ನಿಷೇಧಿತ 'ಸೈಲೆಂಟ್ ಝೋನ್'ಗಳ (Silence Zones) ಸಮೀಪ ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸದಂತೆ ತಡೆಯಲು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ.
ಈ ಬಾರಿಯ ದೀಪಾವಳಿ ಆಚರಣೆಯ ಸಮಯದಲ್ಲಿ ಸಾರ್ವಜನಿಕರು ಕೇವಲ ಪರಿಸರ ಸ್ನೇಹಿ 'ಹಸಿರು ಪಟಾಕಿ'ಗಳನ್ನು ಮಾತ್ರ ಬಳಸಬೇಕು ಎಂದು ಸರ್ಕಾರ ಹೇಳಿದೆ. ಅನುಮೋದಿತ ಎಲ್ಲಾ ಹಸಿರು ಪಟಾಕಿಗಳು ಹಾಗೂ ಅವುಗಳ ಪ್ಯಾಕಿಂಗ್‌ಗಳ ಮೇಲೆ ಕಡ್ಡಾಯವಾಗಿ ನಿಯಮಿತ ಹಸಿರು ಪಟಾಕಿ ಗುರುತು (Green Cracker Mark) ಮತ್ತು 'ಕ್ಯೂಆರ್ ಕೋಡ್' (QR Code) ಇರಲಿದೆ. ಕಾಯಿಲ್ ಮತ್ತು ಮಾರಾಟ ಮಳಿಗೆಗಳ ಪರಿಶೀಲನೆ ವೇಳೆ ಜಿಲ್ಲಾ ಪರಿಸರ ಅಧಿಕಾರಿಗಳು ಈ ಕ್ಯೂಆರ್ ಕೋಡ್ ಅನ್ನು ಪರಿಶೀಲಿಸಲಿದ್ದಾರೆ. ಈ ಗುರುತುಗಳು ಹಾಗೂ ಕ್ಯೂಆರ್ ಕೋಡ್ ಇಲ್ಲದ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಅವುಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಗುವುದು ಎಂದು ಸಚಿವರು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರೂ ಸಹ ಕ್ಯೂಆರ್ ಕೋಡ್ ಇರುವ ಹಸಿರು ಪಟಾಕಿಗಳನ್ನಷ್ಟೇ ಖರೀದಿಸಬೇಕು ಎಂದು ಮನವಿ ಮಾಡಿದ್ದಾರೆ.
ಸರ್ಕಾರದ ನಿಯಮಗಳು ಕೇವಲ ಕಾಗದಕ್ಕೆ ಸೀಮಿತವಾಗದಂತೆ ನೋಡಿಕೊಳ್ಳಲು ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ 'ಟಾಸ್ಕ್ ಫೋರ್ಸ್' (Task Force) ರಚಿಸಲು ಆದೇಶಿಸಲಾಗಿದೆ. ಈ ಪಡೆಗಳಲ್ಲಿ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ತಹಸೀಲ್ದಾರ್, ಜಿಲ್ಲಾ ಪರಿಸರ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಜಾಗೃತ ನಾಗರಿಕರು ಹಾಗೂ ಸರ್ಕಾರೇತರ ಸಂಸ್ಥೆಗಳ (NGO) ಪ್ರತಿನಿಧಿಗಳು ಇರಲಿದ್ದಾರೆ.
ಈ ಟಾಸ್ಕ್ ಫೋರ್ಸ್ ತಕ್ಷಣದಿಂದಲೇ ತಮ್ಮ ವ್ಯಾಪ್ತಿಯಲ್ಲಿರುವ ಪಟಾಕಿ ವ್ಯಾಪಾರಿಗಳ ಗೋದಾಮುಗಳು (Warehouses) ಹಾಗೂ ಮಳಿಗೆಗಳ ಮೇಲೆ ದಿಢೀರ್ ಪರಿಶೀಲನೆ ನಡೆಸಲಿವೆ. ನಿಯಮಬಾಹಿರವಾಗಿ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿರುವುದು ಕಂಡುಬಂದರೆ, ಅಂತಹ ಇಡೀ ಗೋದಾಮಿಗೇ ಬೀಗ ಜಡಿದು (Seal) ಜವಾಬ್ದಾರಿಯುತ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ, ನೆರೆ ರಾಜ್ಯಗಳಿಂದ ಅಕ್ರಮವಾಗಿ ನಿಷೇಧಿತ ಪಟಾಕಿಗಳನ್ನು ಸಾಗಿಸುವುದನ್ನು ತಡೆಯಲು ರಾಜ್ಯದ ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಪೊಲೀಸರು ಬಿಗಿ ತಪಾಸಣೆ ನಡೆಸಿ ಸೀಜ್ ಮಾಡಲು ನಿರ್ದೇಶಿಸಲಾಗಿದೆ. ಅಕ್ರಮ ಸಾಗಾಣಿಕೆಗೆ ಬಳಸುವ ವಾಹನಗಳನ್ನು ಸಾರಿಗೆ ಇಲಾಖೆಯ ಮೂಲಕ ಜಪ್ತಿ ಮಾಡಲಾಗುವುದು.
ಪರಿಸರ ಸ್ನೇಹಿ ದೀಪಾವಳಿಯನ್ನು ಉತ್ತೇಜಿಸುವ ಉದ್ದೇಶದಿಂದ ಮೆಟ್ರೋ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ಶಾಪಿಂಗ್ ಮಾಲ್‌ಗಳಲ್ಲಿ ಪೋಸ್ಟರ್‌ಗಳು, ಕರಪತ್ರಗಳು ಹಾಗೂ ಶ್ರವ್ಯ-ದೃಶ್ಯ (Audio-Visual) ಪ್ರಚಾರದ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಗುವುದು. ಸ್ಥಳೀಯ ಟಿವಿ ಹಾಗೂ ರೇಡಿಯೋ ಚಾನೆಲ್‌ಗಳ ಮೂಲಕ ಪಟಾಕಿಗಳಿಂದಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸ್ಥಳೀಯಾಡಳಿತಗಳಿಗೆ ಸೂಚಿಸಲಾಗಿದೆ.
ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ಮತ್ತು ಪಟಾಕಿ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು. ಈ ಜವಾಬ್ದಾರಿಯುತ ಆಚರಣೆಯು ಶಬ್ದ ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಮಕ್ಕಳು, ಹಿರಿಯ ನಾಗರಿಕರು, ಹಕ್ಕಿಗಳು ಹಾಗೂ ಪ್ರಾಣಿಗಳ ಆರೋಗ್ಯವನ್ನು ರಕ್ಷಿಸಲು ನೆರವಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಸುದೀರ್ಘ ಮನವಿ ಮಾಡಿದ್ದಾರೆ.