
ಬೆಂಗಳೂರು (ಅ.30): ಕರ್ನಾಟಕ ರಾಜ್ಯದಲ್ಲಿ ನಿತ್ಯೋಪಯೋಗಿ ವಸ್ತುಗಳು, ಸಾರ್ವಜನಿಕ ಸಾರಿಗೆ, ತೆರಿಗೆ, ಸೆಸ್ ಹಾಗೂ ಸೇವಾ ಶುಲ್ಕಗಳ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೀವನ ನಿರ್ವಹಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ: ಆಲ್ಕೊಹಾಲ್ನಿಂದ ಹಿಡಿದು ಆನ್ಲೈನ್ ಡೆಲಿವರಿ ಆ್ಯಪ್ಗಳವರೆಗೆ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿರುವ 'A to Z' ದರ ಏರಿಕೆಯ ಸಂಪೂರ್ಣ ವಿವರ ಇಲ್ಲಿದೆ. ಕರ್ನಾಟಕದಲ್ಲಿ ಜಾರಿಗೆ ತರಲಾದ ಹಾಗೂ ಪ್ರಸ್ತಾವಿತ ಹಂತದಲ್ಲಿರುವ ಸರಣಿ ಬೆಲೆ ಏರಿಕೆಗಳು, ಶುಲ್ಕ ಹೆಚ್ಚಳ ಮತ್ತು ತೆರಿಗೆ ಪರಿಷ್ಕರಣೆಗಳು ಸಾರ್ವಜನಿಕರ ಮಾಸಿಕ ಬಜೆಟ್ ಅನ್ನು ಸಂಪೂರ್ಣವಾಗಿ ತಲೆಕೆಳಗಾಗಿಸಿವೆ. ಅಗತ್ಯ ಸೇವೆಗಳಿಂದ ಹಿಡಿದು ವೈದ್ಯಕೀಯ ಪರೀಕ್ಷೆಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಜೇಬು ಸುಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.
A - Alcohol: ದೇಶೀಯ ಹಾಗೂ ವಿದೇಶಿ ಮದ್ಯಗಳು ಮಾತ್ರವಲ್ಲ ಬಿಯರ್ಗಳ ಮೇಲೂ ಹಲವು ಬಾರಿ ಅಬಕಾರಿ ತೆರಿಗೆಯನ್ನು ಸರ್ಕಾರ ಏರಿಸಿದೆ.
B - Buildings: ಸೂಕ್ತ ಪಾರ್ಕಿಂಗ್ ಸೌಲಭ್ಯವಿಲ್ಲದ ಕಟ್ಟಡಗಳಿಗೆ ಪ್ರಸ್ತಾವಿತ ನೂತನ ನಿಯಮಗಳ ಅಡಿಯಲ್ಲಿ ₹25,000 ವರೆಗೆ ದಂಡ ಅಥವಾ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ
C - Commercial vehicles: ವಾಣಿಜ್ಯ ಬಳಕೆಯ ವಾಹನಗಳ ಮೇಲೆ ಈಗ ಶೇ. 3 ರಷ್ಟು ಹೆಚ್ಚುವರಿ Transport Cess ವಿಧಿಸಲಾಗುತ್ತಿದೆ.
D - Diesel & petrol: 2024 ರಲ್ಲಿ ಮಾರಾಟ ತೆರಿಗೆ (Sales Tax) ಹೆಚ್ಚಳದ ನಂತರ ಇಂಧನ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದು, 2025 ರಲ್ಲಿ ಡೀಸೆಲ್ ತೆರಿಗೆಯನ್ನು ಮತ್ತೊಮ್ಮೆ ಪರಿಷ್ಕರಿಸಿ ಹೆಚ್ಚಿಸಲಾಗಿದೆ.
E - Emission: ವಾಹನಗಳ ಹೊಗೆ ತಪಾಸಣೆ ಶುಲ್ಕವನ್ನು ದ್ವಿಚಕ್ರ ವಾಹನಗಳಿಗೆ ₹65 ರಿಂದ ₹80 ಕ್ಕೆ ಹಾಗೂ ಡೀಸೆಲ್ ವಾಹನಗಳಿಗೆ ₹160 ರಿಂದ ₹200 ಕ್ಕೆ ಏರಿಸಲಾಗಿದೆ.
F - Fares: ಆಟೋ ರಿಕ್ಷಾಗಳ ಕನಿಷ್ಠ ಪ್ರಯಾಣ ದರವನ್ನು (Minimum Fare Charge) ₹36 ಕ್ಕೆ ಹೆಚ್ಚಿಸಲಾಗಿದೆ.
G - Guidance: ಆಸ್ತಿಗಳ ಸರ್ಕಾರಿ ಮಾರ್ಗಸೂಚಿ ಮೌಲ್ಯವನ್ನು ಶೇ. 30 ರವರೆಗೆ ಹೆಚ್ಚಿಸಲಾಗಿದ್ದು, ಆಸ್ತಿ ನೋಂದಣಿ ವೆಚ್ಚ ಭಾರಿ ಏರಿಕೆಯಾಗಿದೆ.
H - High-rise Buildings: ಎತ್ತರದ ಬೃಹತ್ ಕಟ್ಟಡಗಳಿಗೆ ಶೇ. 1 ರಷ್ಟು 'ಅಗ್ನಿಶಾಮಕ ಸೆಸ್' (Fire Cess) ವಿಧಿಸಲಾಗುತ್ತಿದೆ.
I - Industries: ವಿದ್ಯುತ್, ಡೀಸೆಲ್, ನೀರಿನ ದರ ಹಾಗೂ ಕಾರ್ಮಿಕರ ವೇತನ ಹೆಚ್ಚಳದಿಂದಾಗಿ ಕೈಗಾರಿಕಾ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.
J - Jungle safari: ಆಯ್ದ ವನ್ಯಜೀವಿ ಅಭಯಾರಣ್ಯಗಳು ಹಾಗೂ ಮೃಗಾಲಯಗಳ ಪ್ರವೇಶ ಶುಲ್ಕ ಮತ್ತು ಸಫಾರಿ ದರಗಳನ್ನು ಹೆಚ್ಚಿಸಲಾಗಿದೆ.
K - KSRTC, BMTC: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಜನವರಿ 2025 ರಲ್ಲಿ ಶೇ. 15 ರಷ್ಟು ಹೆಚ್ಚಿಸಲಾಗಿದ್ದು, ನವೆಂಬರ್ 2026 ರಲ್ಲಿ ಮತ್ತೊಂದು ಹಂತದ ದರ ಏರಿಕೆಗೆ ಸರ್ಕಾರ ರೆಡಿಯಾಗಿದೆ.
L - Lifetime: ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನಗಳ (EVs) ಮೇಲೆ ಶೇ. 10 ರಷ್ಟು ಜೀವಿತಾವಧಿ ರಸ್ತೆ ತೆರಿಗೆಯನ್ನು ವಿಧಿಸಲಾಗಿದೆ.
M - Metro: ನಮ್ಮ ಮೆಟ್ರೋ ಪ್ರಯಾಣ ದರವನ್ನು 2025 ರಲ್ಲಿ ಶೇ. 71 ರವರೆಗೆ ಪರಿಷ್ಕರಿಸಿ ಹೆಚ್ಚಿಸಲಾಗಿದೆ. ಮತ್ತೊಂದು ಸುತ್ತಿನ ದರ ಏರಿಕೆ ಪ್ರಸ್ತುತ ಚರ್ಚೆಯಲ್ಲಿದೆ.
N - Nandini: 2023 ರಿಂದೀಚೆಗೆ ನಡೆದ 4 ದರ ಪರಿಷ್ಕರಣೆಗಳಲ್ಲಿ ನಂದಿನಿ ಹಾಲಿನ ದರ ಲೀಟರ್ಗೆ ಒಟ್ಟಾರೆಯಾಗಿ ₹17 ರಷ್ಟು ಭಾರಿ ಏರಿಕೆಯಾಗಿದೆ.
O - OTT: ಒಟಿಟಿ ಚಂದಾದಾರಿಕೆಗಳು ಹಾಗೂ ಚಲನಚಿತ್ರ ಟಿಕೆಟ್ಗಳ ಮೇಲೆ ಶೇ. 2 ರಷ್ಟು ಹೊಸ ಸೆಸ್ ವಿಧಿಸುವ ಪ್ರಸ್ತಾಪವಿದೆ. ಪ್ರಸ್ತುತ ಇದು ಕೋರ್ಟ್ ವಿಚಾರಣೆಯಲ್ಲಿದೆ.
P - Power: 2023 ರಲ್ಲಿ ಶೇ. 8.31 ರಷ್ಟು ವಿದ್ಯುತ್ ದರ ಹೆಚ್ಚಳದ ನಂತರ, ಸ್ಥಿರ ಶುಲ್ಕಗಳು (Fixed Charges) ಹಾಗೂ ಬೆಸ್ಕಾಂ 'ಟ್ರೂ-ಅಪ್' (True-up) ಶುಲ್ಕಗಳ ಹೆಸರಿನಲ್ಲಿ ಕರೆಂಟ್ ಬಿಲ್ ಏರಿಕೆಯಾಗಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹೆಚ್ಚಿನ ಇಂಧನ ಹೊಂದಾಣಿಕೆ ಶುಲ್ಕ ಬಿಲ್ನಲ್ಲಿ ಸೇರಲಿದೆ.
Q - Quarrying: ಕ್ವಾರಿ ಮತ್ತು ಗಣಿಗಾರಿಕೆಯ ರಾಯಲ್ಟಿ ಹೆಚ್ಚಳದಿಂದಾಗಿ ಜಲ್ಲಿ, ಮರಳು ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿದೆ.
R - Registration: ಬಾಡಿಗೆ ಒಪ್ಪಂದಗಳು (Rental Agreements) ಹಾಗೂ ಇತರ ದಾಖಲೆಗಳ ಮುದ್ರೆ ಶುಲ್ಕ (Stamp Duty) ಶೇ. 200 ರಿಂದ ಶೇ. 500 ರಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ನೋಂದಣಿ ವೆಚ್ಚ ಭಾರಿ ದುಬಾರಿಯಾಗಿದೆ.
S - Solid Waste Management : ಆಸ್ತಿ ತೆರಿಗೆ ಬಿಲ್ಗಳ ಜೊತೆಗೆ ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕ ಹಾಗೂ ತಂತ್ರಾಂಶ (Software) ಶುಲ್ಕಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.
T - Toll charges: ಕೆಆರ್ಡಿಸಿಎಲ್ (KRDCL) ಪರಿಷ್ಕರಣೆಯ ನಂತರ ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ದರಗಳು ಏರಿಕೆಯಾಗಿವೆ.
U - Uber: ಉಬರ್ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಕ್ಯಾಬ್ಗಳ ಪ್ರಯಾಣ ದರವನ್ನು ಎಲ್ಲಾ ಮಾದರಿಯ ವಾಹನ ವರ್ಗಗಳಲ್ಲೂ ಹೆಚ್ಚಿಸಲಾಗಿದೆ.
V - Vehicle: ಹೊಸ ವಾಹನಗಳ ನೋಂದಣಿ ಶುಲ್ಕವನ್ನು ₹500 ರಿಂದ ₹1,000 ರವರೆಗೆ ಏರಿಸಲಾಗಿದೆ.
W - Water: ಬೆಂಗಳೂರು ನಗರದಲ್ಲಿ ಏಪ್ರಿಲ್ 1, 2026 ರಿಂದ ಅನ್ವಯವಾಗುವಂತೆ ಪ್ರತಿವರ್ಷ ನೀರಿನ ದರವನ್ನು ಶೇ. 3 ರಷ್ಟು ಹೆಚ್ಚಿಸಲಾಗುತ್ತಿದೆ.
X - X-ray: ಆಸ್ಪತ್ರೆಗಳಲ್ಲಿ ಎಕ್ಸ್-ರೇ, ಹೊರರೋಗಿ (OPD) ಸಮಾಲೋಚನೆ ಹಾಗೂ ಪ್ರಯೋಗಾಲಯದ (Lab) ಪರೀಕ್ಷಾ ಶುಲ್ಕಗಳು ಶೇ. 50 ರಿಂದ ಶೇ. 100 ರಷ್ಟು ದುಬಾರಿಯಾಗಿವೆ.
Y - Yearly Property Tax: 2025-26 ನೇ ಸಾಲಿನಲ್ಲಿ ಬಿಡಿಎ (BDA) ಬಡಾವಣೆಗಳಲ್ಲಿನ ವಾರ್ಷಿಕ ಆಸ್ತಿ ತೆರಿಗೆಯನ್ನು ಶೇ. 9 ರಿಂದ ಶೇ. 51 ರವರೆಗೆ ಹೆಚ್ಚಿಸಲಾಗಿದೆ.
Z - Zomato: ಗಿಗ್ ಕಾರ್ಮಿಕರ (Gig Workers) ಕ್ಷೇಮಾಭಿವೃದ್ಧಿ ನಿಧಿ ಸಂಗ್ರಹಕ್ಕಾಗಿ ಝೋಮ್ಯಾಟೋ, ಅಮೆಜಾನ್, ರ್ಯಾಪಿಡೋ ಮುಂತಾದ ಪ್ಲಾಟ್ಫಾರ್ಮ್ಗಳ ಮೇಲೆ ಶೇ. 5 ರಷ್ಟು ಸೆಸ್ ವಿಧಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ.
ವಿಶೇಷ ಸೂಚನೆ: ಈ ಪಟ್ಟಿಯು ಜಾರಿಯಾದ ಹಾಗೂ ಪ್ರಸ್ತಾವಿತ ಹಂತದಲ್ಲಿರುವ ದರ ಏರಿಕೆಗಳನ್ನು ಒಳಗೊಂಡಿದೆ. ನಮ್ಮ ಮೆಟ್ರೋ ಯೋಜನೆಯು ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಜಂಟಿ ಸಹಭಾಗಿತ್ವದ (Joint Venture) ಯೋಜನೆಯಾಗಿದೆ.